Site icon Vistara News

Uttara Kannada News: ಮೂಲಸೌಕರ್ಯ ವಂಚಿತ ಅಡವಿಮನೆ ಗ್ರಾಮ; ಸೇತುವೆ ನಿರ್ಮಾಣ ಯಾವಾಗ?

Adavimane village deprived of infrastructure When will the bridge be built

ಭಾಸ್ಕರ್ ಆರ್. ಗೆಂಡ್ಲ, ಶಿರಸಿ
ತಾಲೂಕಿನ ಭೈರುಂಬೆ ಗ್ರಾ.ಪಂ ವ್ಯಾಪ್ತಿಯ ಅಡವಿಮನೆ ಭಾಗದ ಸುತ್ತಮುತ್ತಲಿನ ಗ್ರಾಮಸ್ಥರು ಮೂಲ ಸೌಕರ್ಯದಿಂದ (Infrastructure) ವಂಚಿತರಾಗಿದ್ದು, ಮಳೆಗಾಲದಲ್ಲಿ (Rainy season) ಕಾಲುಸಂಕದ ಮೂಲಕ ಪೇಟೆ ಸಂಪರ್ಕಿಸುವ ಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಶಿರಸಿಯಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಅಡವಿಮನೆ ಗ್ರಾಮದ ಜನರು ಮಳೆಗಾಲದಲ್ಲಿ ಕಾಲುಸಂಕದ ಮೂಲಕ ಪೇಟೆ ಸಂಪರ್ಕಿಸುವ ಕಷ್ಟದ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದಾರೆ.

ಅಡವಿಮನೆಯಲ್ಲಿ ದೊಡ್ಡ ಹೊಳೆ ಇದ್ದು, ಹೊಳೆಯ ಆ ಕಡೆ ಮತ್ತು ಈ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಮರಾಠಿ ಸಮುದಾಯದ ಜನರು ವಾಸ ಮಾಡುತ್ತಿದ್ದಾರೆ. ಸುಮಾರು 17 ಕುಟುಂಬಗಳಿದ್ದು, ಇವರೆಲ್ಲರ ಜಮೀನು ಹೊಳೆಯ ಆಚೆ ಕಡೆ ಇವೆ. ಈ ಭಾಗದಲ್ಲಿ ಅಡಿಕೆ, ಭತ್ತವನ್ನು ಬೆಳೆಯಲಾಗುತ್ತದೆ. ಆದರೆ, ಮಳೆಗಾಲದಲ್ಲಿ ಮಾತ್ರ ಜಮೀನಿಗೆ ಹೋಗುವುದು ಕಷ್ಟ. ಸಂಪರ್ಕಕ್ಕಾಗಿ ಕಳೆದ ಸುಮಾರು 50-60 ವರ್ಷಗಳಿಂದ ಬಿದಿರಿನ ಕಾಲುಸಂಕ ನಿರ್ಮಿಸಿಕೊಂಡು ಜಮೀನಿನಲ್ಲಿ ಕೆಲಸ ಮಾಡಿ ಬರುತ್ತಾರೆ.

ಧಾರಾಕಾರವಾಗಿ ಮಳೆ ಸುರಿದು ಭೀಕರ ಪ್ರವಾಹ ಉಂಟಾಗಿ ನೀರಿನಲ್ಲಿ ಬಿದಿರಿನ ಕಾಲು ಸಂಕ ತೇಲಿ ಹೋಗಿರುವ ಉದಾಹರಣೆಯೂ ಇದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರತಿನಿತ್ಯ ಇದೇ ಸಂಕದ ಮೇಲೆ ಶಾಲೆಗಳಿಗೆ ತೆರಳುತ್ತಿದ್ದಾರೆ. ಈ ಭಾಗಕ್ಕೆ ಅತ್ಯಗತ್ಯವಾಗಿರುವ ಅಡವಿಮನೆ ಹೊಳೆಗೆ ಸೇತುವೆ ನಿರ್ಮಾಣವಾದರೆ ಇಲ್ಲಿನ ಜನರ ಬಹು ವರ್ಷದ ಬೇಡಿಕೆ ಈಡೇರಿದಂತಾಗುತ್ತದೆ.

ಹೊಳೆಗೆ ಸುಸಜ್ಜಿತವಾದ ಸೇತುವೆ ನಿರ್ಮಾಣವಾದರೆ, ಹುಲೇಕಲ್ ಮತ್ತು ನೀರ್ನಳ್ಳಿ ಗ್ರಾಮ ಪಂಚಾಯತ್‌ ಸಂಪರ್ಕಕ್ಕೆ ಬಹಳ ಹತ್ತಿರವಾಗುತ್ತಿತ್ತು. ಇಲ್ಲವಾದರೆ ಮಳೆಗಾಲದಲ್ಲಿ ಸುತ್ತಿಬಳಸಿ ನಗರಕ್ಕೆ ಮತ್ತು ಪಂಚಾಯತ್‌ಗೆ ತೆರಳಿ ತಮ್ಮ ಕೆಲಸ ನಿರ್ವಹಿಸಿಕೊಂಡು ಬರಬೇಕಾದ ಸ್ಥಿತಿ ಇದೆ. ಕಾಲುಸಂಕ ನಿರ್ಮಾಣಕ್ಕೆ ಸ್ಥಳೀಯ ಗ್ರಾಮ ಪಂಚಾಯತ್‌ 2500 ರೂ. ನೀಡುತ್ತದೆ. ಬಿಟ್ಟರೆ ಬೇರೆ ಯಾವ ಅನುದಾನವೂ ಇಲ್ಲ.

ಸೇತುವೆ ಭಾಗ್ಯ ದೊರೆತಿಲ್ಲ

ಕಳೆದ ಎರಡು ವರ್ಷಗಳಿಂದ ಬಿದಿರಿಗೆ ಕಟ್ಟೆ ರೋಗ ಬಂದು ನಾಶವಾಗಿದೆ. ಆದರೂ ಕಾಡು ತಿರುಗಿ ಬಿದಿರು ಹುಡುಕಿ ತಂದು ಸಂಕ ನಿರ್ಮಿಸಿಕೊಂಡು ಓಡಾಡುತ್ತಿದ್ದೇವೆ. ಹಲವಾರು ವರ್ಷಗಳ ಹಿಂದೆ ಜನರ ಬೇಡಿಕೆಯಂತೆ ಸಂಸದರ ನಿಧಿಯಿಂದ ಸೇತುವೆ ನಿರ್ಮಾಣಕ್ಕೆ 3 ಲಕ್ಷ ರೂ. ಮಂಜೂರಿಯಾಗಿತ್ತು. ಜಾಗದ ಸಮಸ್ಯೆಯಾಗಿ ಅದು ವಾಪಸಾಯಿತು. ಹಿಂದಿನ ಶಾಸಕರ ಬಳಿ ಸೇತುವೆ ನಿರ್ಮಾಣಕ್ಕೆ ಹಣ ಮಂಜೂರು ಮಾಡುವಂತೆ ವಿನಂತಿಸಿದಾಗ ಅನುದಾನ ಒದಗಿಸುತ್ತೇನೆ ಎಂದು ಭರವಸೆ ನೀಡಿ, ಎಂಜಿನಿಯರ್ ಸ್ಥಳಕ್ಕೆ ಕಳುಹಿಸಿ, ಅಂದಾಜು ಪಟ್ಟಿ ಸಿದ್ಧಪಡಿಸಲು ತಿಳಿಸಿದ್ದರು. ಅವರ ಬಂದು ಪರಿಶೀಲಿಸಿ, ಹೋಗಿದ್ದಾರೆ. ಸೇತುವೆ ಕಥೆ ಏನಾಯಿತು ಎಂದು ನಮ್ಮ ಭಾಗದ ತಾ.ಪಂ ಮಾಜಿ ಸದಸ್ಯರೊಬ್ಬರ ಬಳಿ ಪ್ರಶ್ನಿಸಿದಾಗ 30 ಲಕ್ಷ ರೂ. ಮಂಜೂರಾಗಿದೆ. ಸದ್ಯದಲ್ಲಿಯೇ ಕಾಮಗಾರಿ ಆರಂಭವಾಗುತ್ತದೆ ಎಂದು ಹೇಳಿದ್ದರು. ಚುನಾವಣಾ ವರ್ಷವಾದ್ದರಿಂದ ಖಂಡಿತ ನಮ್ಮ ಬೇಡಿಕೆ ಈಡೇರುತ್ತದೆ ಎಂಬ ಖುಷಿ ಇತ್ತು. ಆದರೂ ನಮ್ಮ ಊರಿಗೆ ಸೇತುವೆ ಭಾಗ್ಯ ದೊರೆಯದಿರುವುದು ನೋವಿನ ಸಂಗತಿ ಎಂದು ಅಡವಿಮನೆ ಗ್ರಾಮಸ್ಥ ಅಶೋಕ ಮರಾಠಿ ಬೇಸರ ವ್ಯಕ್ತಪಡಿಸಿದರು.

ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ
ಅಡವಿಮನೆ ಮಜರೆಯಲ್ಲಿ ಹೊಳೆಗೆ ಸೇತುವೆ ನಿರ್ಮಾಣಕ್ಕೆ ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹಿಂದಿನ ಶಾಸಕರು ತಮ್ಮ ಪಟ್ಟಿಯಲ್ಲಿ ನಮೂದಿಸಿದ್ದರು. ಆದರೆ ಸೇತುವೆ ನಿರ್ಮಾಣವಾಗದಿರುವುದು ಯಕ್ಷಪ್ರಶ್ನೆಯಾಗಿ ಉಳಿದಿದೆ. ಸೇತುವೆ ನಿರ್ಮಾಣವಾದರೆ ಇಲ್ಲಿನ ಗ್ರಾಮಸ್ಥರಿಗೆ ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಹಳ ಉಪಯೋಗವಾಗುತ್ತಿತ್ತು.
| ಗುರುಮೂರ್ತಿ ಹೆಗಡೆ, ಸಾಮಾಜಿಕ ಕಾರ್ಯಕರ್ತ

Exit mobile version