ಗೋಕರ್ಣ: ಶಂಕರಾಚಾರ್ಯರು ಸ್ಥಾಪಿಸಿದ ಶ್ರೀರಾಮಮಚಂದ್ರಾಪುರ ಮಠದ (Sri Ramachandrapura Mutt) ಅಶೋಕೆಯ ಶ್ರೀ ಮಲ್ಲಿಕಾರ್ಜುನ ದೇವರ ಸನ್ನಿಧಿಯಲ್ಲಿ ಡಿ.30 ರಿಂದ 2024ರ ಜನವರಿ 9ರ ವರೆಗೆ ಅತಿರುದ್ರ ಅಭಿಷೇಕ (Athirudra Abhisheka) ಹಮ್ಮಿಕೊಳ್ಳಲಾಗಿದೆ.
ಡಿ.30ರಂದು ಬೆಳಿಗ್ಗೆ 6 ರಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಬೆಳಿಗ್ಗೆ 8 ಗಂಟೆಗೆ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಅವರು ಮಲ್ಲಿಕಾರ್ಜುನನಿಗೆ ಗಂಗಾಜಲ ಅಭಿಷೇಕ ಮಾಡುವ ಮೂಲಕ ಹನ್ನೊಂದು ದಿನಗಳ ಮಹೋತ್ಸವಕ್ಕೆ ಚಾಲನೆ ನೀಡುವರು ಎಂದು ಅತಿರುದ್ರಾಭಿಷೇಕ ಮಹಾಸಮಿತಿ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಮತ್ತು ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅವಿಚ್ಛಿನ್ನ ಪರಂಪರೆಯ 36ನೇ ಯತಿಶ್ರೇಷ್ಠರಾದ ಶ್ರೀರಾಘವೇಶ್ವರ ಸ್ವಾಮೀಜಿ ಅವರು ಮೂಲಮಠದ ಪುನರುತ್ಥಾನಕ್ಕೆ ಸಂಕಲ್ಪಿಸಿದ್ದು, ಇದಕ್ಕೆ ಪೂರ್ವಭಾವಿಯಾಗಿ ಇಡೀ ಹವ್ಯಕ ಸಮಾಜದ ಪ್ರತಿ ಮನೆಗಳಿಂದ ಆಗಮಿಸುವ ಶಿಷ್ಯರು ಸಾಮೂಹಿಕ ಗುರು ಅಷ್ಟಕ ಪಠಣ ಮತ್ತು ಖ್ಯಾಪನೆ ನಡೆಸಿಕೊಡುವರು.
ಇದನ್ನೂ ಓದಿ: Health Care Summit: ಭಾರತದಲ್ಲೇ ಮೊದಲ ಬಾರಿಗೆ ಮಣಿಪಾಲ್, ದಿಲ್ಲಿಯಲ್ಲಿ ಹೆಲ್ತ್ ಕೇರ್ ಶೃಂಗ
ಶಂಕರಾಚಾರ್ಯರು ಮೂಲಮಠ ಸ್ಥಾಪನೆ ಮಾಡಿದ ಬಳಿಕ ಗುರುಪರಂಪರೆಯ ಹಲವು ಮಂದಿ ಯತಿಶ್ರೇಷ್ಠರು ಇಲ್ಲಿದ್ದುಕೊಂಡು ಧರ್ಮಕಾರ್ಯಗಳನ್ನು ನಡೆಸುತ್ತಾ ಬಂದಿದ್ದು, ಯಾವುದೋ ಕಾಲಘಟ್ಟದಲ್ಲಿ ಕಾರಣಾಂತರಗಳಿಂದ ಶ್ರೀಮಠ ಇಲ್ಲಿಂದ ಸ್ಥಳಾಂತರಗೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆ ಸಂದರ್ಭದಲ್ಲಿ ಪೂರ್ವಾಚಾರ್ಯರಿಗೆ ಆಗಿರಬಹುದಾದ ಮನೋವೇದನೆ, ವ್ಯಥೆಯ ಪರಿಮಾರ್ಜನೆಗಾಗಿ ಸಮಸ್ತ ಸಮಾಜ ಬಾಂಧವರು ಅಂದು ಶ್ರೀಸಂಸ್ಥಾನದವರ ಸಮ್ಮುಖದಲ್ಲಿ ಖ್ಯಾಪನೆ ಮಾಡಲಿದ್ದಾರೆ ಎಂದು ವಿವರಿಸಿದ್ದಾರೆ.
ಖ್ಯಾಪನೆ ಎಂದರೆ, ನಮ್ಮಿಂದ ಆಗಿರಬಹುದಾದ ತಪ್ಪು- ಪ್ರಮಾದಗಳಿಗೆ ಸಮಾಜದ ಪ್ರಾಜ್ಞರ ಸಮ್ಮುಖದಲ್ಲಿ ಕ್ಷಮೆಯಾಚನೆ ಮಾಡಿ, ದೋಷ ಪರಿಮಾರ್ಜನೆಗೆ ಪ್ರಾರ್ಥಿಸುವುದು. ನಮ್ಮ ಪೂರ್ವಜರಿಂದ ಆಗಿರಬಹುದಾದ ಪ್ರಮಾದ ಪರಿಮಾರ್ಜನೆಗೆ ಇಡೀ ಹವ್ಯಕ ಸಮಾಜ ಜನವರಿ 9 ರಂದು ಖ್ಯಾಪನೆಗಾಗಿ ಮೂಲಮಠದ ಆವರಣದಲ್ಲಿ ಸಮಾವೇಶಗೊಳ್ಳಲಿದೆ.
ಇದನ್ನೂ ಓದಿ: New Year 2024: ಹೊಸ ವರ್ಷದಲ್ಲಿ ನೀವು ಖರೀದಿಸಲೇಬೇಕಾದ ಸ್ಮಾರ್ಟ್‌ಫೋನ್ಸ್!
ಅಂದು ಹವ್ಯಕ ಸಮಾಜದ 15 ಸಾವಿರಕ್ಕೂ ಅಧಿಕ ಶಿಷ್ಯರು ಮೂಲಮಠದ ಆವರಣದಲ್ಲಿ ಸಾಮೂಹಿಕ ಗುರುಅಷ್ಟಕ ಪಠನೆ ಮಾಡುವ ಕಾರ್ಯಕ್ರಮ ಇರುತ್ತದೆ. ಬಳಿಕ ರಾಘವೇಶ್ವರಶ್ರೀಗಳು ಶಿಷ್ಯಕೋಟಿಯನ್ನು ಉದ್ದೇಶಿಸಿ ಆಶೀರ್ವಚನ ನೀಡುವರು. ರಾಜ್ಯದ ಮೂಲೆ ಮೂಲೆಗಳಿಂದ ಬರುವ 150ಕ್ಕೂ ಹೆಚ್ಚು ರುದ್ರಪಾಠಕರು ಪ್ರತಿದಿನ 11 ಬಾರಿ ರುದ್ರಪಠಣ ಮಾಡುವರು. ಇದಕ್ಕೂ ಮುನ್ನ ಪುಣ್ಯಾಹ, ಕಲಶ ಸ್ಥಾಪನೆ, ಮಹಾನ್ಯಾಸಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ ಎಂದು ಅವರು ತಿಳಿಸಿದ್ದಾರೆ.