Site icon Vistara News

Uttara Kannada News: ಟೋಲ್‌ ಬಂದ್‌ಗೊಳಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

Blocked toll near Hattikeri protest by Congress in Karwar

ಕಾರವಾರ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ (NH 66) ನಿರ್ಮಿಸಲಾಗಿರುವ ಟನಲ್‌ನ (Tunnel) ಫಿಟ್ನೆಸ್ ಸರ್ಟಿಫಿಕೇಟ್ (fitness certificate) ಒದಗಿಸದ ಕಾರಣ, ಕಾರವಾರ ಅಂಕೋಲಾ ಶಾಸಕ ಸತೀಶ್ ಸೈಲ್ ನೇತೃತ್ವದಲ್ಲಿ ಅಂಕೋಲಾ ತಾಲೂಕಿನ ಹಟ್ಟಿಕೇರಿ ಬಳಿ ಹೆದ್ದಾರಿಗೆ ನಿರ್ಮಿಸಲಾಗಿರುವ ಟೋಲ್‌ನ್ನು (Toll stop) ಬಂದ್ ಮಾಡಿಸಲಾಯಿತು.

ಟೋಲ್ ಗೇಟ್ ಬಳಿ ಶಾಸಕ ಸೈಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಐಆರ್‌ಬಿ ವಿರುದ್ಧ ಘೋಷಣೆಗಳನ್ನು ಕೂಗಿ ಟೋಲ್ ಬಂದ್ ಮಾಡಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಳೆದ ಏಳೆಂಟು ವರ್ಷಗಳಿಂದ ಐಆರ್‌ಬಿ ಕಂಪನಿ ಹೆದ್ದಾರಿ ಅಗಲೀಕರಣ ಕಾಮಗಾರಿಯನ್ನು ನಡೆಸುತ್ತಿದೆ. ಜಿಲ್ಲೆಯ ಕರಾವಳಿಯಲ್ಲಿ ನಡೆಸುತ್ತಿರುವ ಹೆದ್ದಾರಿ ಅಗಲೀಕರಣ ಕಾರ್ಯ ಇದುವರೆಗೂ ಪೂರ್ಣಗೊಳ್ಳದಿದ್ದರೂ ಕಳೆದ ಮೂರು ವರ್ಷಗಳಿಂದ ಟೋಲ್ ಆರಂಭಿಸಿ ಶುಲ್ಕ ವಸೂಲಿ ಮಾಡಲಾಗುತ್ತಿತ್ತು.

ಇದನ್ನೂ ಓದಿ: Video Viral : ಕುದಾಪುರದಲ್ಲಿ ಓಡಾಡ್ತು ಚಿರತೆ! ವಿಡಿಯೊ ನಕಲಿ ಎಂದ ಡಿಆರ್‌ಡಿಒ

ಆದರೆ ಕಳೆದ ಕೆಲ ದಿನಗಳ ಹಿಂದೆ ಕರಾವಳಿಯಲ್ಲಿ ಸುರಿದ ಧಾರಾಕಾರ ಮಳೆಗೆ ಕಾರವಾರದಿಂದ ಬಿಣಗಾ ಸಂಪರ್ಕಿಸುವ ಮಾರ್ಗದಲ್ಲಿ ಹೆದ್ದಾರಿಗೆ ನಿರ್ಮಿಸಲಾಗಿರುವ ಟನಲ್‌ವೊಂದರಲ್ಲಿ ನೀರು ಸೋರಿಕೆಯಾಗುತ್ತಿತ್ತು. ಈ ಬಗ್ಗೆ ವಿಸ್ತಾರ ನ್ಯೂಸ್ ವಿಸ್ತೃತವಾದ ವರದಿಯನ್ನು ಬಿತ್ತರಿಸಿದ್ದು, ಮುಂದಿನ ದಿನಗಳಲ್ಲಿ ಟನಲ್ ಸೋರಿಕೆಯಿಂದ ವಾಹನ ಸವಾರರಿಗೆ ಅಪಾಯ ಎದುರಾಗುವ ಕುರಿತು ಗಮನಕ್ಕೆ ತಂದಿತ್ತು.

ಇದಾದ ಬಳಿಕ ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹಾಗೂ ಕಾರವಾರ ಅಂಕೋಲಾ ಶಾಸಕ ಸತೀಶ್ ಸೈಲ್, ಟನಲ್ ಸೋರಿಕೆ ಕುರಿತು ಐಆರ್‌ಬಿ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೇ ಟನಲ್‌ ಮಾರ್ಗ ಆರಂಭಿಸಲು ಪಡೆದುಕೊಂಡ ಫಿಟ್ನೆಸ್ ಸರ್ಟಿಫಿಕೇಟ್ ನೀಡುವಂತೆ ಕೇಳಿದ್ದರಾದರೂ ಅಧಿಕಾರಿಗಳು ಒದಗಿಸಿರಲಿಲ್ಲ. ಟನಲ್‌ನ ಫಿಟ್ನೆಸ್ ಪ್ರಮಾಣಪತ್ರ ನೀಡದ ಹಿನ್ನೆಲೆಯಲ್ಲಿ ಟನಲ್ ಸಂಚಾರ ಬಂದ್ ಮಾಡುವಂತೆ ಸೂಚಿಸಿದ್ದರು. ಟನಲ್‌ನ ಫಿಟ್ನೆಸ್ ಪ್ರಮಾಣಪತ್ರ ನೀಡುವವರೆಗೆ ಟೋಲ್ ಸಂಗ್ರಹವನ್ನು ನಿಲ್ಲಿಸುವಂತೆ ತಿಳಿಸಿದ್ದರು.

ಟೋಲ್ ಬಳಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಪರಿಣಾಮ ಕೆಲ ಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಯಿತು.

ಇದನ್ನೂ ಓದಿ: IND vs WI: ನೂತನ ಟೆಸ್ಟ್​ ಜೆರ್ಸಿಯಲ್ಲಿ ಕಂಗೊಳಿಸಿದ ಭಾರತೀಯ ಆಟಗಾರರು; ಹಣಕ್ಕೋಸ್ಕರ ದೇಶದ ಹೆಸರೇ ಮಾಯಾ!

ಒಂದು ದಿನದ ಕಾಲಾವಕಾಶ ನೀಡಿದರೂ ಟನಲ್‌ನ ಫಿಟ್ನೆಸ್ ಸರ್ಟಿಫಿಕೇಟ್ ನೀಡದ ಕಾರಣ ಮಂಗಳವಾರ ಖುದ್ದು ಟೋಲ್‌ ಗೇಟ್‌ಗೆ ತೆರಳಿದ ಶಾಸಕ ಸತೀಶ್ ಸೈಲ್, ಅಲ್ಲಿನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಟೋಲ್ ಸಂಗ್ರಹ ಬಂದ್ ಮಾಡುವಂತೆ ಸೂಚನೆ ನೀಡಿದರು. ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸದೇ ಶುಲ್ಕ ಸಂಗ್ರಹಿಸುತ್ತಿರುವ ಐಆರ್‌ಬಿ ಕಂಪನಿ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ಈ ಬಳಿಕ ಟೋಲ್ ಗೇಟ್‌ಗಳನ್ನು ತೆರೆದೇ ಇಡುವ ಮೂಲಕ ಶುಲ್ಕ ಸಂಗ್ರಹಕ್ಕೆ ತಡೆ ಹಾಕಲಾಗಿದೆ. ಟನಲ್‌ನ ಫಿಟ್ನೆಸ್ ಸರ್ಟಿಫಿಕೇಟ್ ನೀಡುವವರೆಗೂ ಯಾವುದೇ ಕಾರಣಕ್ಕೂ ಟೋಲ್ ಸಂಗ್ರಹಕ್ಕೆ ಮುಂದಾಗದಂತೆ ಐಆರ್‌ಬಿ ಅಧಿಕಾರಿಗಳಿಗೆ ಶಾಸಕ ಸತೀಶ್ ಸೈಲ್ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: Wimbledon 2023: ಬೋಪಣ್ಣ ಭಾರತದ ಸೂಪರ್​ ಸ್ಟಾರ್​ ; ವಿಂಬಲ್ಡನ್​ನಲ್ಲಿ ಕಂಗೊಳಿಸಿದ ಕನ್ನಡದ ಕಂಪು

ಟೋಲ್ ಬಳಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಪರಿಣಾಮ ಕೆಲ ಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಆದರೆ ಬಳಿಕ ಟೋಲ್ ಶುಲ್ಕ ಸಂಗ್ರಹ ಸ್ಥಗಿತಗೊಳಿಸಿದ್ದರಿಂದ ವಾಹನ ಸವಾರರು ಸಂತಸದಿಂದಲೇ ತೆರಳಿದರು. ಈ ವೇಳೆ ಅಹಿತಕರ ಘಟನೆ ನಡೆಯದಂತೆ ಅಂಕೋಲಾ ಠಾಣೆಯ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದರು.

Exit mobile version