ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ (Uttara Kannada District) ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ (Multi Specialty Hospital) ಮಾಡಬೇಕು ಎನ್ನುವ ಕೂಗು ಕೇಳಿ ಬರುತ್ತಲೇ ಇದೆ. ಆದರೆ ಜಿಲ್ಲೆಯಲ್ಲಿ ಹೇಳಿಕೊಳ್ಳುವಂತಹ ಯಾವುದೇ ಸುಸಜ್ಜಿತ ಆಸ್ಪತ್ರೆಗಳಿಲ್ಲ, ಇದರ ನಡುವೆ ಮಾರಕ ಕ್ಯಾನ್ಸರ್ ರೋಗ (Cancer Disease) ಜಿಲ್ಲೆಯಲ್ಲಿ ಸದ್ದಿಲ್ಲದೇ ಹೆಚ್ಚುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ ಮಾಡಿದೆ.
ಕಳೆದ ಜನವರಿಯಿಂದ ಈವರೆಗೆ ಜಿಲ್ಲಾ ಆಸ್ಪತ್ರೆಯೊಂದರಲ್ಲಿಯೇ 225ಕ್ಕೂ ಅಧಿಕ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿದ್ದು ಪ್ರತಿ ತಿಂಗಳು ಕ್ಯಾನ್ಸರ್ ತುತ್ತಾಗುವವರ ಸಂಖ್ಯೆ ಏರುತ್ತಲೇ ಇದೆ.
ಕ್ಯಾನ್ಸರ್ ಅನ್ನು ಮಾರಕ ಕಾಯಿಲೆ ಎಂದೇ ಹೇಳಲಾಗುತ್ತದೆ. ಒಮ್ಮೆ ಕ್ಯಾನ್ಸರ್‌ಗೆ ತುತ್ತಾದರೆ ಯಾವುದೇ ರೋಗಿ ಸ್ವಲ್ಪ ನಿರ್ಲಕ್ಷ್ಯ ತೋರಿದರೂ ಸಾವು ಸಂಭವಿಸುವುದೇ ಹೆಚ್ಚು. ಇಂತಹ ಮಾರಕ ಕಾಯಿಲೆ ಸದ್ಯ ಜಿಲ್ಲೆಯಲ್ಲಿ ಪ್ರತಿ ತಿಂಗಳು ಏರುತ್ತಲೇ ಇದ್ದು ಇದಕ್ಕೆ ಕಾರಣ ಏನು ಎನ್ನುವುದು ಮಾತ್ರ ಅರಿವಿಗೆ ಬಾರದಂತಾಗಿದೆ.
ಇದನ್ನೂ ಓದಿ: Education Department: ಶಾಲಾ ಆವರಣದಲ್ಲಿ ಶಿಕ್ಷಣೇತರ ಚಟುವಟಿಕೆಗೆ ಬ್ರೇಕ್; ಶಿಕ್ಷಣ ಇಲಾಖೆ ಸುತ್ತೋಲೆ
ಜಿಲ್ಲಾಸ್ಪತ್ರೆಯಲ್ಲಿಯೇ ಚಿಕಿತ್ಸೆಗೆಂದು ಬಂದು ಪರೀಕ್ಷೆಗೊಳಪಟ್ಟವರಲ್ಲಿ ಕ್ಯಾನ್ಸರ್ ದೃಢಪಟ್ಟವರ ಸಂಖ್ಯೆ ಕಳೆದ ಜನವರಿಯಿಂದ ಈವರೆಗೆ 225ಕ್ಕೂ ಅಧಿಕವಾಗಿದೆ. ಕಳೆದ ಜನವರಿಯಲ್ಲಿ 24 ಪ್ರಕರಣ ಪತ್ತೆಯಾದರೆ, ಫೆಬ್ರುವರಿಯಲ್ಲಿ 48, ಮಾರ್ಚ್‌ನಲ್ಲಿ 17, ಏಪ್ರಿಲ್‌ನಲ್ಲಿ 17, ಮೇನಲ್ಲಿ 25, ಜೂನ್‌ನಲ್ಲಿ 25, ಜುಲೈನಲ್ಲಿ 18, ಆಗಸ್ಟ್‌ನಲ್ಲಿ 20, ಸೆಪ್ಟೆಂಬರ್‌ನಲ್ಲಿ 25, ಅಕ್ಟೋಬರ್‌ನಲ್ಲಿ 11 ಹಾಗೂ ನವೆಂಬರ್‌ನಲ್ಲಿ 17 ಪ್ರಕರಣ ಪತ್ತೆಯಾಗಿದೆ.
ಇನ್ನು ಇವುಗಳಲ್ಲಿ ಕಳೆದ ಜನವರಿಯಿಂದ ಸುಮಾರು 55 ಪ್ರಕರಣಗಳು ಬ್ರೆಸ್ಟ್ ಕ್ಯಾನ್ಸರ್ ಎಂದು ದೃಢಪಟ್ಟಿದ್ದು ಉಳಿದಂತೆ ತಂಬಾಕು ಸೇವನೆ ಸೇರಿದಂತೆ ಇನ್ನಿತರೆ ಕಾರಣದಿಂದ ಕೆಲವರಿಗೆ ಕ್ಯಾನ್ಸರ್ ಬಂದಿರುವುದು ಪತ್ತೆಯಾಗಿದೆ ಎಂದು ಜಿಲ್ಲಾಸ್ಪತ್ರೆ ಸರ್ಜನ್ ಡಾ. ಶಿವಾನಂದ ಕುಡ್ತಳಕರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Vijay Hazare Trophy: ಸೆಮಿಫೈನಲ್ ಪ್ರವೇಶಿಸಿದ ಕರ್ನಾಟಕ
ಜಿಲ್ಲೆಯಲ್ಲಿ ಕ್ಯಾನ್ಸರ್ ಸಂಖ್ಯೆ ಕಳೆದ ನಾಲ್ಕೈದು ವರ್ಷದಲ್ಲಿ ಪ್ರತಿವರ್ಷ ಏರಿಕೆಯಾಗುತ್ತಿದ್ದು, ಇದಕ್ಕೆ ಕಾರಣ ಏನೆಂಬುದು ಮಾತ್ರ ನಿಗೂಢವಾಗಿದೆ. ಯಲ್ಲಾಪುರ, ಶಿರಸಿ, ಸಿದ್ದಾಪುರ, ಅಂಕೋಲಾದ ಅಚವೆ, ಅಗಸೂರು ಭಾಗದಲ್ಲಿ ಹಾಗೂ ಕಾರವಾರ ತಾಲೂಕಿನ ಕದ್ರಾ ಸುತ್ತಮುತ್ತಲಿನ ಭಾಗದಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಿ ಪತ್ತೆಯಾಗಿವೆ. ಜಿಲ್ಲಾಸ್ಪತ್ರೆ ಆವರಣದಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಪ್ರಾರಂಭಕ್ಕೆ ಸರ್ಕಾರ ಹಸಿರು ನಿಶಾನೆ ತೋರಿದೆ. ಸದ್ಯ ಇನ್ನೂ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, 2 ವರ್ಷಗಳ ನಂತರವೇ ಈ ಚಿಕಿತ್ಸೆ ಪ್ರಾರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: Train service: ಇಂದಿನಿಂದ ಬೆಂಗಳೂರು- ನಂದಿಬೆಟ್ಟಕ್ಕೆ ಚುಕುಬುಕು ರೈಲು; ಪ್ರವಾಸಿಗರು ಫುಲ್ ಖುಷ್
ಸದ್ಯ ಕ್ಯಾನ್ಸರ್ ಪತ್ತೆಯಾದವರು ಬೇರೆ ಜಿಲ್ಲೆಗಳಲ್ಲಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುವ ಅನಿವಾರ್ಯತೆ ಎದುರಾಗಿದ್ದು, ಜಿಲ್ಲೆಯಲ್ಲಿ ಕ್ಯಾನ್ಸರ್ ಪ್ರಕರಣ ಹೆಚ್ಚುತ್ತಿರುವುದನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ತಜ್ಞರ ನೇಮಕ ಹಾಗೂ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.