Site icon Vistara News

Uttara Kannada News: ಮುಂಡಗೋಡದಲ್ಲಿ ವಿಜೃಂಭಣೆಯಿಂದ ಶಿಲ್ಲಂಗಾನ ಹಬ್ಬದ ಆಚರಣೆ

Celebration of Shillangana festival in Mundagoda

-ಎಂ.ಬಿ. ತಳವಾರ

ಮುಂಡಗೋಡ: ದಸರಾ (Dasara) ಹಬ್ಬದ ಹಿನ್ನೆಲೆಯಲ್ಲಿ ತಾಲೂಕಿನ ಬಸನಾಳ ಗ್ರಾಮದಲ್ಲಿ ಮೂರು ರಾಜ್ಯಗಳ ಗೌಳಿ ಸಮುದಾಯದ ಎಡಗೆ ಮನೆತನದವರು ಮತ್ತು ಬಸನಾಳ ಗ್ರಾಮಸ್ಥರ ನೇತೃತ್ವದಲ್ಲಿ ಗುರುವಾರ ವಿಶೇಷ ‘ಶಿಲ್ಲಂಗಾನ’ ಹಬ್ಬವು ವಿಜೃಂಭಣೆಯಿಂದ ಜರುಗಿತು.

ವಿಜಯ ದಶಮಿ ಹಬ್ಬವನ್ನು ದೇಶದ ಮೂಲೆ ಮೂಲೆಗಳಲ್ಲಿ ಒಂದೊಂದು ರೀತಿಯಲ್ಲಿ ಆಚರಿಸಲಾಗುತ್ತದೆ. ಅದರಲ್ಲಿ ಜಿಲ್ಲೆಯಲ್ಲಿಯೇ ಮುಂಡಗೋಡ ತಾಲೂಕಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಧನಗರ ಗೌಳಿ ಸಮುದಾಯದವರು ಮಾತ್ರ ನವರಾತ್ರಿ ಉತ್ಸವವನ್ನು ಬಹಳ ವಿಶೇಷವಾದ ರೀತಿಯಲ್ಲಿ ಅದ್ಧೂರಿಯಾಗಿ ಆಚರಣೆ ಮಾಡುತ್ತಾ ಬರುತ್ತಿರುವುದು ಗಮನ ಸೆಳೆಯುತ್ತದೆ.

ಶಿಲ್ಲಂಗಾನ ಹಬ್ಬದ ವಿಶೇಷತೆ

ದಸರಾ ಮುಗಿದ ಮಾರನೇ ದಿನ ಆಚರಿಸುವ ವಿಶೇಷ ಹಬ್ಬವೇ ಶಿಲ್ಲಂಗಾನ. ಇದರ ವಿಶೇಷತೆ ಎಂದರೆ ನಮ್ಮ ಊರಿಗೆ ಒಳ್ಳೆಯದಾಗಲಿ ದನಕರುಗಳಿಗೆ ರೋಗ ಬರದಂತಿರಲಿ ಎಂದು ಹರಕೆ ತೀರಿಸುವುದು. ಇದನ್ನು ಒಂದು ಊರಿನಲ್ಲಿ ಹಮ್ಮಿಕೊಂಡು ಅಕ್ಕ ಪಕ್ಕದ ಊರುಗಳಿಗೆ ತಾಂಬೂಲವನ್ನು ಕೊಟ್ಟು ಜನರನ್ನು ಆಮಂತ್ರಿಸಲಾಗುತ್ತದೆ. ಆಮಂತ್ರಣ ಸ್ವೀಕರಿಸಿ ನೂರಾರು ಜನ ಬೇರೆ ಬೇರೆ ಊರುಗಳಿಂದ ಬಂದಿರುತ್ತಾರೆ.

ಇದನ್ನೂ ಓದಿ: Health Tips: ನಿತ್ಯ 20 ನಿಮಿಷವೂ ದೈಹಿಕ ಚಟುವಟಿಕೆ ನಡೆಸುವುದಿಲ್ಲವೆ? ಹಾಗಾದರೆ ಅಪಾಯ ಖಚಿತ!

ಮಹಿಳೆಯರು ಮಡಕೆಯಲ್ಲಿ ಮಜ್ಜಿಗೆ ಮತ್ತು ಅದರ ಮೇಲೊಂದು ತೆಂಗಿನಕಾಯಿ ಇಟ್ಟುಕೊಂಡು ಮತ್ತು ಪುರುಷರು ವಾದ್ಯಗಳ ಮೂಲಕ ಸ್ವಾಗತ ಮಾಡುತ್ತಾರೆ. ಶುಭ್ರ ಶ್ವೇತ ವರ್ಣದ ಬಟ್ಟೆ ಧರಿಸಿ ತಲೆಗೆ ಪಟಗ ಸುತ್ತಿಕೊಂಡು ಗಜ ಕುಣಿತವನ್ನು ಕುಣಿಯುತ್ತಾ ಎಡಗೆ ಮನೆತನದವರು ಬನ್ನಿ ಗಿಡಕ್ಕೆ ಹೋಗಿ ಮೊದಲು ಖಡ್ಗದಿಂದ ಬನ್ನಿ ಕೊಯ್ದು ನಂತರ ಬನ್ನಿಯನ್ನು ಒಬ್ಬರಿಗೊಬ್ಬರು ವಿನಿಮಯ ಮಾಡಿಕೊಂಡು ಶುಭಾಶಯ ಕೋರುತ್ತಾರೆ.

ಧನಗರಗೌಳಿ ಸಮುದಾಯದ ಹಿರಿಯರು ಪೂಜೆ ಸಲ್ಲಿಸುತ್ತಿರುವುದು.

8ನೇ ದಿನ ರಾತ್ರಿ ಇಡೀ ಜಾಗರಣೆ ಮಾಡಿ ಊರಿನವರೆಲ್ಲಾ ಸೇರಿ ಮುರಳಿ ವಾದನ, ಗಜ ನೃತ್ಯ ಮಾಡಿ ಪ್ರತಿಯೊಬ್ಬರ ಮನೆಗೆ ಹೋಗಿ ಆಯುಧ ಪೂಜೆ ಮಾಡುತ್ತಾರೆ, ಬಳಿಕ ಪೂಜೆ ಪಠಣಗಳೊಂದಿಗೆ ಹರಹರ ಚಾಂಗಬಲಾ (ಎಲ್ಲರಿಗೂ ಶುಭವಾಗಲಿ) ಎಂಬ ಘೋಷ ವಾಕ್ಯದೊಂದಿಗೆ ಜಯಕಾರ ಹಾಕುತ್ತಾರೆ. ಒಂದೇ ತಟ್ಟೆಯಲ್ಲಿ ಒಂದೊಂದು ತುತ್ತು ಸುಮಾರು ಜನ ಸೇರಿ ಸ್ವೀಕಾರ ಮಾಡುತ್ತಾರೆ. ವಾದ್ಯಗಳೊಂದಿಗೆ ವಿವಿಧ ರೀತಿಯ ನೃತ್ಯ ಮಾಡುತ್ತಾ ಶಿಲ್ಲಂಗಾನದ ಹಲವಾರು ವಿಧಿ ವಿಧಾನಗಳನ್ನು ನೆರವೇರಿಸಲಾಗುತ್ತದೆ.

ಇದನ್ನೂ ಓದಿ: Karnataka Rajyotsava : 3,523 ಅರ್ಜಿಯಲ್ಲಿ 68 ಮಂದಿ ಆಯ್ಕೆ; 2 ದಿನದಲ್ಲಿ ಪಟ್ಟಿ ಪ್ರಕಟವೆಂದ ತಂಗಡಗಿ

ಅದರಂತೆ ಗುರುವಾರ ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕದ ವಿವಿಧ ಜಿಲ್ಲೆಯ ಎಡಗೆ ಮನೆತನದವರು ಬಸನಾಳ ಗ್ರಾಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿಶೇಷ ‘ಶಿಲ್ಲಂಗಾನ’ ಹಬ್ಬವನ್ನು ಆಚರಿಸಿದರು. ಸಾಂಪ್ರದಾಯಿಕ ಉಡುಗೆ ತೊಟ್ಟು ವಿವಿಧ ರೀತಿಯ ನೃತ್ಯ, ಗಜ ಕುಣಿತ ನಡೆಸಿದರು, ಮತ್ತೊಂದು ಬದಿ ವಿಶೇಷ ಪೂಜೆ ಪುನಸ್ಕಾರಗಳು ಜರುಗಿದವು.

ಮುಂಡಗೋಡ ತಾಲೂಕಿನ ಬಸನಾಳ ಗ್ರಾಮದಲ್ಲಿ ಶಿಲ್ಲಾಂಗಾನ ಹಬ್ಬದಲ್ಲಿ ಪಾಲ್ಗೊಂಡ ಧನಗರಗೌಳಿ ಸಮುದಾಯದವರು.

ಇದನ್ನೂ ಓದಿ: Viral News: ಮ್ಯಾನ್ಮಾರ್‌ನಲ್ಲಿ ಹೊಸ ಪ್ರಭೇದದ ಹಾವು ಪತ್ತೆ; ಏನಿದರ ವೈಶಿಷ್ಟ್ಯ?

ಗೌಳಿ ಸಮುದಾಯದವರು ಆಚರಿಸುವ ಎಲ್ಲ ಹಬ್ಬಗಳಲ್ಲಿ ದಸರಾ ಹಬ್ಬವು ಅತಿ ದೊಡ್ಡ ಹಬ್ಬ, ಹಾಗಾಗಿ ಈ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತೇವೆ, ಧನಗರಗೌಳಿ ಎಲ್ಲ ಸಮುದಾಯದವರು ಸೇರಿ ಆಚರಣೆ ಮಾಡುತ್ತೇವೆ. ವಿಜಯ ದಶಮಿ ಮಾರನೇ ದಿನ ‘ಶಿಲ್ಲಂಗಾನ’ಹಬ್ಬ ಕಾರ್ಯಕ್ರಮವು ಮಾಡುತ್ತೇವೆ. ಆದರೆ ಇಂದು ಎಡಗೆ ಮನೆತನದವರು ಮತ್ತು ಬಸನಾಳ ಗ್ರಾಮಸ್ಥರ ನೇತೃತ್ವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿ ವಿಜೃಂಭಣೆಯಿಂದ ಈ ಶಿಲ್ಲಾಂಗಾನ ಹಬ್ಬವನ್ನು ಆಚರಿಸುತ್ತಿದ್ದೇವೆ.

-ದೇವು ಪಾಟೀಲ, ಧನಗರಗೌಳಿ ಸಮಾಜದ ಹಿರಿಯ ಮುಖಂಡ.

Exit mobile version