ಯಲ್ಲಾಪುರ: ಎಟಿಎಂ ಕಾರ್ಡ್ (ATM card) ಬದಲಿಸಿ ಹಣ ಡ್ರಾ (Draw Money) ಮಾಡುತ್ತಿದ್ದ ಅಂತಾರಾಜ್ಯ ಕಳ್ಳನನ್ನು (Interstate Thief) ಯಲ್ಲಾಪುರ ಠಾಣಾ ಪೊಲೀಸರು ಬಂಧಿಸಿರುವ ಘಟನೆ ಗುರುವಾರ ಜರುಗಿದೆ.
ಸೋಮವಾರ (ಜು.17) ಬೆಳಗ್ಗೆ ಎಟಿಎಂನಿಂದ ಹಣ ತೆಗೆದುಕೊಡಲು ಸಹಾಯ ಮಾಡುವಂತೆ ನಟಿಸಿ, ಕಾರ್ಡ್ ಬದಲಿಸಿ ಬೇರೊಂದು ಕಾರ್ಡ್‌ನ್ನು ನೀಡಿ, ಅದೇ ದಿನ ಶಿರಸಿಯ ಎಟಿಎಂ ಒಂದರಿಂದ 25100 ರೂ.ಗಳನ್ನು ಡ್ರಾ ಮಾಡಿಕೊಂಡ ಕುರಿತು ಮೋಸ ಹೋದವರು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಕುರಿತು ತನಿಖೆ ನಡೆಸಿದ ಯಲ್ಲಾಪುರ ಪೊಲೀಸರಿಗೆ ದೊರೆತ ಎಟಿಎಂ ಕೇಂದ್ರದ ಸಿಸಿಟಿವಿ ಮಾಹಿತಿಯನ್ನಾಧರಿಸಿ, ಮಹಾರಾಷ್ಟ್ರ ರಾಜ್ಯದ ಪುಣೆ ಜಿಲ್ಲೆಯ ಇಂದಾಪುರ ತಾಲೂಕಿನ ಅಮೂಲ್ ಭಗವಾನ್ ಶೆಂಡೆ (33) ಎಂಬ ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: Viral News : ಮಕ್ಕಳ ಕೈಗೆ ಕಾರಿನ ಕೀ ಕೊಟ್ಟರೆ ಅನಾಹುತ ಖಾತರಿ; ಇಲ್ಲಿದೆ ನೋಡಿ ಒಂದು ಘಟನೆ
ಈತನು ಅಂತಾರಾಜ್ಯ ಕಳ್ಳನಾಗಿದ್ದು, ಈತನ ಮೇಲೆ ಬೆಳಗಾವಿ, ಮಹಾರಾಷ್ಟ್ರ ಹಾಗೂ ಮಧ್ಯ ಪ್ರದೇಶದ ಕೆಲ ಭಾಗಗಳಲ್ಲಿ ಹಾಗೂ ಉತ್ತರಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ ಹಾಗೂ ಸಿದ್ದಾಪುರದಲ್ಲೂ ಈ ರೀತಿಯ ಕೃತ್ಯಗಳಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ.. ಆರೋಪಿತನಿಂದ 12 ಸಾವಿರ ನಗದು, ಕೃತ್ಯಕ್ಕೆ ಬಳಸಿದ ಎಟಿಎಂ ಕಾರ್ಡ್ ಹಾಗೂ 75 ಸಾವಿರ ಮೌಲ್ಯದ ಬಜಾಜ್ ಪಲ್ಸರ್ ಬೈಕ್‌ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಸ್‌ಪಿ ವಿಷ್ಣುವರ್ಧನ್, ಎಎಸ್‌ಪಿ ಸಿ.ಟಿ.ಜಯಕುಮಾರ, ಡಿವೈಎಸ್‌ಪಿ ಗಣೇಶ ಕೆ.ಎಲ್. ಮಾರ್ಗದರ್ಶನದಲ್ಲಿ, ಯಲ್ಲಾಪುರ ಸಿಪಿಐ ರಂಗನಾಥ ನೀಲಮ್ಮನವರ ಅವರ ನೇತೃತ್ವದಲ್ಲಿ ಪಿಎಸ್‌ಐ ರವಿ ಗುಡ್ಡಿ, ನಿರಂಜನ ಹೆಗಡೆ, ಶ್ಯಾಮ ಪಾವಸ್ಕರ್, ಎಎಸ್‌ಐ ಮಂಜುನಾಥ ಮನ್ನಂಗಿ ಹಾಗೂ ಸಿಬ್ಬಂದಿಗಳಾದ ಬಸವರಾಜ, ಮಹ್ಮದ ಶಫಿ, ಗಿರೀಶ ಲಮಾಣಿ, ಪ್ರವೀಣ ಪೂಜಾರ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.