Site icon Vistara News

Uttara Kannada News: ಆಟ ಮಕ್ಕಳ ಬದುಕಿಗೆ ಪಾಠ ಎಂದ ಡಾ. ವೀಣಾ ಬನ್ನಂಜೆ

Dr Veena Bannanje received blessings from Sri Raghaveshvara bharati Mahaswamiji

ಗೋಕರ್ಣ: ಆಟಗಳು ಎಂದಿಗೂ ಮಕ್ಕಳಿಗೆ (Children) ವಂಚನೆಯನ್ನು ಕಲಿಸುವುದಿಲ್ಲ, ಬದಲಿಗೆ ಬದುಕಿಗೆ (Life) ಬೇಕಾದ ನಂಬಿಕೆಯನ್ನು ಹೆಚ್ಚಿಸುತ್ತದೆ. ಮಕ್ಕಳು ಬಾಲ್ಯದಲ್ಲಿ (Childhood) ಆಟವಾಡುತ್ತಲೇ ಕಲಿಯುವಂಥದ್ದು ಸಾಕಷ್ಟಿದೆ ಎಂದು ಖ್ಯಾತ ವಾಗ್ಮಿ ಡಾ. ವೀಣಾ ಬನ್ನಂಜೆ ಅಭಿಪ್ರಾಯಪಟ್ಟರು.

ಇಲ್ಲಿನ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಾರ್ವಭೌಮ ಗುರುಕುಲಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಉಪನ್ಯಾಸ ನೀಡಿದ ಅವರು, ದೇಶದಲ್ಲೇ ತೀರಾ ಅಪೂರ್ವ ಹಾಗೂ ಅಪರೂಪ ಎನಿಸಿದ ಗುರುಕುಲ ವ್ಯವಸ್ಥೆಯಲ್ಲಿ ನೀವಿದ್ದೀರಿ. ಅಂದರೆ ಸರಿಯಾದ ಭೂಮಿಯಲ್ಲಿ ಬೀಜ ಬಿತ್ತಿದಂತೆ ಆಗಿದೆ. ನಿಮ್ಮ ಭವಿಷ್ಯವೂ ಎಲ್ಲ ಸಾರವನ್ನೂ ತುಂಬಿಕೊಂಡು ಬೆಳೆಯುವ ವೃಕ್ಷದಂತೆ ಆಗಲಿ ಎಂದು ಹಾರೈಸಿದರು.

ಆತ್ಮವೇದ ಎನ್ನುವ ಮಾತಿದೆ. ಆತ್ಮವೇದವೆಂದರೆ ನನ್ನನ್ನು, ನನ್ನ ಆತ್ಮವನ್ನು ತಿಳಿಯುವುದು ಎಂದರ್ಥ. ಯಾವುದೇ ಕೆಟ್ಟ ಕೆಲಸಗಳನ್ನು ಮಾಡುವಾಗ ನಮ್ಮೊಳಗೆ ನಕಾರಾತ್ಮಕ ಪ್ರತಿಕ್ರಿಯೆ ನಡೆಯುತ್ತಿರುತ್ತದೆ. ಅದನ್ನು ಗಮನಿಸಿಕೊಳ್ಳಬೇಕು. ಅದು ಆತ್ಮವೇದದ ರೀತಿ ಎಂದು ವಿಶ್ಲೇಷಿಸಿದರು.

ಇದನ್ನೂ ಓದಿ: Tomato price hike : ಈ ರೈತ ಕೇವಲ ಟೊಮ್ಯಾಟೊ ಮಾರಿ, 2.8 ಕೋಟಿ ರೂ. ಗಳಿಸಿದ್ದು ಹೇಗೆ?

ಒಂದು ವೇಳೆ ಇದು ನಮ್ಮ ಸ್ವಂತ ಗಮನಕ್ಕೆ ಬಾರದೇ ಇದ್ದಾಗ ತಂದೆ, ತಾಯಿಯರಿಗೆ, ಹಿರಿಯರಿಗೆ, ಗುರುಗಳಿಗೆ ಆ ಕೆಲಸ ಸರಿ ಎನ್ನಿಸದೇ ಇರುವುದೂ ಕೂಡ ಆತ್ಮವೇದದ ಭಾಗವೇ ಆಗಿರುತ್ತದೆ. ಅವರು ನಮ್ಮ ತಪ್ಪನ್ನು ಎತ್ತಿ ತೋರಿಸುತ್ತಾರೆ ಎಂದು ವಿವರಿಸಿದರು.

ಗುರುವಿನ ದೃಷ್ಟಿ ಬಹಳ ವಿಶೇಷವಾದುದು. ಅದು ಬೀಳುವುದು ಬಹಳ ವಿರಳ. ಬಾಲ್ಯದಲ್ಲಿ ನರೇಂದ್ರನ ಮೇಲೆ ರಾಮಕೃಷ್ಣ ಪರಮಹಂಸರ ದೃಷ್ಟಿ ಬಿತ್ತು. ಇದರ ಪರಿಣಾಮವಾಗಿ ನರೇಂದ್ರ ವಿವೇಕಾನಂದರಾಗಿ ವಿಶ್ವ ಬೆಳಗಿದರು. ಹೀಗೆ ಗುರುಗಳ ಅನುಗ್ರಹಕ್ಕೆ ಪಾತ್ರರಾಗುವಂಥ, ಅವರ ದೃಷ್ಟಿ ನಮ್ಮೆಡೆಗೆ ಬೀಳುವಂತ ಸತ್ಕಾರ್ಯಗಳತ್ತ ನಾವು ಗಮನ ಹರಿಸಬೇಕು ಎಂದು ಸಲಹೆ ಮಾಡಿದರು.

ರಂಗಕರ್ಮಿ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಡಾ. ವೀಣಾ ಬನ್ನಂಜೆಯವರನ್ನು ಪರಿಚಯಿಸಿದರು. ವಿವಿವಿ ಪಾರಂಪರಿಕ ವಿಭಾಗದ ವರಿಷ್ಠಾಚಾರ್ಯ ವಿದ್ವಾನ್ ಸತ್ಯನಾರಾಯಣ ಶರ್ಮಾ ಸ್ವಾಗತಿಸಿದರು. ಗುರುಕುಲದ ಮುಖ್ಯಶಿಕ್ಷಕಿ ಸೌಭಾಗ್ಯ ಭಟ್ ನಿರೂಪಿಸಿದರು.

ಇದನ್ನೂ ಓದಿ: Asian Games 2023 : ಏಷ್ಯನ್​ ಗೇಮ್ಸ್​ನ ಕ್ರಿಕೆಟ್​ ವೇಳಾಪಟ್ಟಿಯ ಬಗ್ಗೆ ಇಲ್ಲಿದೆ ಮಾಹಿತಿ

ಬಳಿಕ ಡಾ.ವೀಣಾ ಬನ್ನಂಜೆ ಅಶೋಕೆಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

Exit mobile version