ಯಲ್ಲಾಪುರ: ಸ್ಪರ್ಧೆಯಲ್ಲಿ (Competition) ಸೋಲು ಗೆಲುವು ಸಹಜ. ಆದರೆ ಸೋಲನ್ನು ಗೆಲುವಿನ ಮೆಟ್ಟಿಲಾಗಿಸಿಕೊಂಡು ಮುನ್ನಡೆಯಬೇಕು ಎಂದು ವಿಸ್ತಾರ ನ್ಯೂಸ್ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ತಿಳಿಸಿದರು.
ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸಭಾಭವನದಲ್ಲಿ ನಡೆದ ಸಿಬಿಎಸ್‌ಸಿ ಶಾಲೆಗಳ ಜಿಲ್ಲಾಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ಪರ್ಧೆಯಲ್ಲಿ ಗೆಲುವನ್ನು ಎಲ್ಲರೂ ಬಯಸುತ್ತಾರೆ. ಆದರೆ ಸೋತವರನ್ನು ನಮ್ಮೊಂದಿಗೆ ಕರೆದೊಯ್ಯುವ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ರಾಷ್ಟ್ರ ಮಟ್ಟದಲ್ಲಿ ಉತ್ತಮ ಶಿಕ್ಷಣ ನೀಡುವ ಪ್ರಾಮಾಣಿಕ ಪ್ರಯತ್ನವನ್ನು ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಸಿಬಿಎಸ್‌ಸಿ ಶಿಕ್ಷಣ ಸಂಸ್ಥೆಗಳು ಮಾಡುತ್ತಿವೆ ಎಂದರು.
ಇದನ್ನೂ ಓದಿ: PSI Scam: ಪಿಎಸ್‌ಐ ನೇಮಕಾತಿ ಮರುಪರೀಕ್ಷೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್; ಸರ್ಕಾರದ ನಿರ್ಧಾರಕ್ಕೆ ಓಕೆ
ನಾವು ನಮ್ಮ ತಂದೆ ತಾಯಿಯವರಿಗೆ, ಗುರು ಹಿರಿಯರಿಗೆ ಸದಾ ಗೌರವ ಸೂಚಿಸಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವೆಲ್ಲರೂ ಸಹ ಸ್ಪರ್ಧೆಗೆ ಎದೆಯೊಡ್ಡಿ ನಿಲ್ಲಬೇಕು. ನಮ್ಮ ಆತ್ಮವಿಶ್ವಾಸವನ್ನು ಬೆಳೆಸಿಕೊಂಡು, ಆಧುನಿಕ ಯುಗದಲ್ಲಿ ಕಾಲಕ್ಕೆ ಸರಿಸಮಾನರಾಗಿ ಬೆಳೆಯಬೇಕು ಎಂದು ತಿಳಿಸಿದರು.
ಕದಂಬ ಸಹೋದಯ ಸ್ಕೂಲ್ ಕಾಂಪ್ಲೆಕ್ಸ್‌ನ ಅಧ್ಯಕ್ಷ ಸಿ.ಬಿ. ಪಾಟೀಲ್ ಮಾತನಾಡಿ, ಮಕ್ಕಳ ಪ್ರತಿಭೆಯ ಬೆಳವಣಿಗೆಗೆ ನಾವು ಒಂದು ವೇದಿಕೆಯನ್ನು ಒದಗಿಸುವ ಪ್ರಯತ್ನ ಮಾಡುತ್ತಿದ್ದೇವೆ. ಶಿಕ್ಷಕರು ಮಕ್ಕಳಲ್ಲಿರುವ ಪ್ರತಿಭೆಗಳಿಗೆ ರೂಪ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಿರುತ್ತಾರೆ. ಆದರೆ ಕೊನೆಯಲ್ಲಿ ಮಕ್ಕಳ ತೊಡಗುವಿಕೆಯ ಮೇಲೆ ಅವರ ಭವಿಷ್ಯ ನಿರ್ಧಾರವಾಗಿರುತ್ತದೆ ಎಂದರು.
ಕದಂಬ ಸಹೋದಯ ಸ್ಕೂಲ್ ಕಾಂಪ್ಲೆಕ್ಸ್ ನ ನಿರ್ದೇಶಕ ಜಾನ್ ಬಾಸ್ಕೋ ಮಾತನಾಡಿದರು. ಬಳಿಕ ಖಜಾಂಚಿ ವಸಂತ ಭಟ್ ಮಾತನಾಡಿದರು.
ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ 11 ಸಿಬಿಎಸ್‌ಸಿ ಶಾಲೆಗಳ, 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ಚಿತ್ರಕಲೆ, ಜಾನಪದ ಗೀತೆ, ದೇಶ ಭಕ್ತಿ ಗೀತೆ, ಕ್ವಿಜ್, ರಂಗೋಲಿ ಸೇರಿದಂತೆ 7 ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: Children’s day: ನ. 14ರಂದು ಈ ಬಾರಿ ರಜೆ, ಹಾಗಿದ್ದರೆ ಶಾಲೆಗಳಲ್ಲಿ ಮಕ್ಕಳ ದಿನಾಚರಣೆ ಯಾವಾಗ?
ಈ ಸಂದರ್ಭದಲ್ಲಿ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಸಿಇಒ ಅಜಯ ಭಾರತೀಯ ಹಾಗೂ ಇತರರು ಉಪಸ್ಥಿತರಿದ್ದರು. ಸೆಂಟ್ರಲ್ ಸ್ಕೂಲ್ ನ ಪ್ರಾಂಶುಪಾಲೆ ಮಹಾದೇವಿ ಭಟ್ ಸ್ವಾಗತಿಸಿದರು. ಶಿಕ್ಷಕಿ ಆಸ್ಮಾ ಶೇಖ್ ನಿರೂಪಿಸಿ, ವಂದಿಸಿದರು.