Site icon Vistara News

Uttara Kannada News: ಬನವಾಸಿಯಲ್ಲಿ ಕೆಟ್ಟು ನಿಂತ ಸಿಸಿ ಕ್ಯಾಮೆರಾಗಳು:‌ ದುರಸ್ತಿಗಾಗಿ ಸಾರ್ವಜನಿಕರ ಆಗ್ರಹ

due to lack of proper maintenance of CC camera at Banavasi

ಸುಧೀರ್ ನಾಯರ್, ಬನವಾಸಿ

ಬನವಾಸಿ: ಪಟ್ಟಣದ ಹೃದಯಭಾಗವಾಗಿರುವ ಕದಂಬ ವೃತ್ತ ಹಾಗೂ ಶಿವಾಜಿ ವೃತ್ತದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳು (CC camera) ಕೆಟ್ಟು ನಿಂತು ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಹಿನ್ನೆಲೆಯಲ್ಲಿ ನಾಗರಿಕರ ಸುರಕ್ಷತೆ (Safety) ಬಗ್ಗೆ ಆತಂಕ ಮೂಡಿರುವುದು ಮಾತ್ರವಲ್ಲದೇ ಅಪರಾಧ ಪ್ರಕರಣ (Criminal Case) ಪತ್ತೆಗೂ ಕಷ್ಟವಾಗುತ್ತಿದೆ.

2021-22ರಲ್ಲಿ ದುಷ್ಕರ್ಮಿಗಳ ಹಾಗೂ ಕಿಡಿಗೇಡಿಗಳ ಚಲನವಲನಗಳ ಜತೆಗೆ ಅಪಘಾತ ಸಂಭವಿಸಿದಾಗ ಸುಲಭವಾಗಿ ಪತ್ತೆ ಹಚ್ಚಿ ಅಪರಾಧ ಕೃತ್ಯಗಳನ್ನು ತಡೆಯಲು ಈ ಎರಡು ವೃತ್ತಗಳಲ್ಲಿ ತಾಲೂಕು ಪಂಚಾಯಿತಿಯ ಅನಿರ್ಬಂಧಿತ ಅನುದಾನದಲ್ಲಿ ಅಂದಾಜು 2 ಲಕ್ಷ ರೂ. ವೆಚ್ಚದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.

ಆದರೆ, ಕಳಪೆ ಕಾಮಗಾರಿ ಹಾಗೂ ಸರಿಯಾದ ನಿರ್ವಹಣೆ ಕೊರತೆಯಿಂದ ಕ್ಯಾಮೆರಾಗಳು ಕೆಟ್ಟು ಹೋಗಿದ್ದು ಪಟ್ಟಣದಲ್ಲಿ ಸರಿಯಾದ ಕಣ್ಗಾವಲು ವ್ಯವಸ್ಥೆಯೇ ಇಲ್ಲದಂತಾಗಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: Viral Video: ಮದುವೆ ರಿಸೆಪ್ಶನ್‌ನಲ್ಲೇ ನವದಂಪತಿ ಜಗಳ, ಗಂಡ ಸ್ವೀಟ್‌ ಕೊಟ್ಟರೆ ಎಸೆದ ಪತ್ನಿ; ಮುಂದೆ ಹೇಗೋ?

ಬನವಾಸಿಯು ಪ್ರವಾಸಿ ತಾಣವಾಗಿದ್ದು, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲಾ ಗಡಿ ಭಾಗವಾಗಿದೆ. ಶಿರಸಿ-ಹೊಸನಗರ ರಾಜ್ಯ ಹೆದ್ದಾರಿಯು ಹಾದು ಹೋಗಿರುವುದರಿಂದ ಅಪಘಾತ, ಕಳ್ಳತನದಂತಹ ಅಪರಾಧ ಪ್ರಕರಣಗಳು ಸಾಕಷ್ಟು ಸಂಭವಿಸಿದ ಉದಾಹರಣೆಗಳಿವೆ, ಅಲ್ಲದೇ ಪಟ್ಟಣ ಹಾಗೂ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಸತತವಾಗಿ ಕಳ್ಳತನಗಳು ಹೆಚ್ಚು ಹೆಚ್ಚಾಗಿ ನಡೆದಿರುವ ಪ್ರಕರಣಗಳು ಸಾಕಷ್ಟಿವೆ.

ಕಳೆದ ಒಂದು ವರ್ಷಗಳಿಂದ ಕೆಟ್ಟು ಹೋಗಿರುವ ಈ ಸಿಸಿ ಕ್ಯಾಮರಾಗಳನ್ನು ದುರಸ್ತಿ ಪಡಿಸಲು ಪೊಲೀಸ್‌ ಇಲಾಖೆಯಾಗಲಿ, ಗ್ರಾಮ ಪಂಚಾಯಿತಿಯಾಗಲಿ ಕಾಳಜಿವಹಿಸದೇ ಇರುವುದು ಅಚ್ಚರಿಯ ಸಂಗತಿಯಾಗಿದೆ. ಇವುಗಳ ನಿರ್ವಹಣೆಯ ಹೊಣೆಯನ್ನು ಮಾಡಬೇಕಾದ ಪೊಲೀಸ್‌ ಇಲಾಖೆ, ಗ್ರಾಮ ಪಂಚಾಯಿತಿ ಮೌನವಹಿಸಿದೆ.

ನಾಗರಿಕರ ಸುರಕ್ಷತೆ ಮತ್ತು ಅಪರಾಧ ಪ್ರಕರಣ ಪತ್ತೆಗಾಗಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳ ದುರಸ್ತಿ ಕಾರ್ಯವನ್ನು ಸಂಬಂಧಪಟ್ಟ ಇಲಾಖೆಯು ಶೀಘ್ರವಾಗಿ ಕೈಗೊಳ್ಳಲಿ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ಇದನ್ನೂ ಓದಿ: Road Accident : ಕಾರು- ಕೆಎಸ್‌ಆರ್‌ಟಿಸಿ ಬಸ್‌ ಮುಖಾಮುಖಿ ಡಿಕ್ಕಿ; ಜೀವ ಬಿಟ್ಟ ದಂಪತಿ

ತಾಲೂಕು ಪಂಚಾಯತ್ ಅನುದಾನದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳ ನಿರ್ವಹಣೆಯ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿಗೆ ನೀಡಲಾಗಿದೆ. ಅದರ ನಿರ್ವಹಣಾ ಕಾರ್ಯವನ್ನು ಅವರೇ ಮಾಡಬೇಕು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತರುತ್ತೇನೆ.
-ದೇವರಾಜ ಹಿತ್ತಲಕೊಪ್ಪ, ಇ.ಒ. ತಾಲೂಕು ಪಂಚಾಯಿತಿ

ಸಿಸಿ ಕ್ಯಾಮರಾಗಳು ಬಂದ್ ಆಗಿರುವುದು ಗಮನಕ್ಕೆ ಬಂದಿದೆ. ಶೀಘ್ರದಲ್ಲೇ ದುರಸ್ತಿ ಮಾಡಲಾಗುವುದು.
– ಹನುಮಂತ ಛಲವಾದಿ, ಗಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ

Exit mobile version