ಕಾರವಾರ: ಎಂಜಿನ್ ವೈಫಲ್ಯದಿಂದ (Engine failure) ಅರಬ್ಬೀ ಸಮುದ್ರದಲ್ಲಿ ಸಿಲುಕಿದ್ದ ಆರ್.ವಿ.ಸಿಂಧು ಸಾಧನಾ ಹೆಸರಿನ ಹಡಗಿನಿಂದ (Ship) 8 ವಿಜ್ಞಾನಿಗಳು (Scientists) ಸೇರಿದಂತೆ 36 ಸಿಬ್ಬಂದಿಯನ್ನು (Staff) ಕೋಸ್ಟ್‌ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಕಾರವಾರ-ಗೋವಾ ಗಡಿ ಪ್ರದೇಶದ ಸಮುದ್ರದಲ್ಲಿ ನಡೆದಿದೆ.
ಕಾರವಾರದಿಂದ ಸುಮಾರು 20 ನಾಟಿಕಲ್ ಮೈಲು ದೂರದಲ್ಲಿ ಗೋವಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷಿಯಾನೋಗ್ರಫಿ (NIO) ಸಂಶೋಧನಾ ಹಡಗು ಎಂಜಿನ್ ವೈಫಲ್ಯದಿಂದ ಸಮುದ್ರದಲ್ಲಿ ಸಿಲುಕಿತ್ತು. ಹಡಗಿನ ಎಂಜಿನ್‌ನಲ್ಲಿ ದೋಷ ಕಾಣಿಸಿಕೊಂಡ ಪರಿಣಾಮ ಗಂಟೆಗೆ 3 ನಾಟಿಕಲ್ ಮೈಲು ವೇಗದಲ್ಲಿ ಸಂಚರಿಸುತ್ತಿದ್ದು, ಸಂಕಷ್ಟದಲ್ಲಿ ಸಿಲುಕಿತ್ತು. ಈ ಹಿನ್ನೆಲೆಯಲ್ಲಿ ರಕ್ಷಣೆಗಾಗಿ ಹಡಗಿನಿಂದ ಸಂದೇಶ ರವಾನಿಸಲಾಗಿತ್ತು.
ಇದನ್ನೂ ಓದಿ:Weather report : ಉತ್ತರ ಕರ್ನಾಟಕದಲ್ಲಿ ಬಿರು ಮಳೆ; ಕರಾವಳಿ, ಮಲೆನಾಡಲ್ಲೂ ಅಬ್ಬರ!
ಆರ್.ವಿ.ಸಿಂಧು ಸಾಧನಾ ಹಡಗಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಅತ್ಯಾಧುನಿಕ ಸಂಶೋಧನಾ ಉಪಕರಣಗಳು ಹಾಗೂ ದಾಖಲೆಗಳಿದ್ದವು. ಜತೆಗೆ ಹಡಗು ಮುಳುಗಡೆಯಾಗಿದ್ದಲ್ಲಿ ಹಡಗಿನಲ್ಲಿದ್ದ ತೈಲ ಸೋರಿಕೆಯಾಗಿ ಕಾರವಾರ ವ್ಯಾಪ್ತಿಯಲ್ಲಿ ಕಡಲ ಪರಿಸರ ಮಾಲಿನ್ಯ ಹಾಗೂ ಜೀವಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿದ್ದವು. ಜತೆಗೆ 8 ಮಂದಿ ವಿಜ್ಞಾನಿಗಳು ಅಪಾಯದ ಸ್ಥಿತಿಯಲ್ಲಿ ಸಿಲುಕಿದ್ದರು.
ಇದನ್ನೂ ಓದಿ: School Teachers : ಸರ್ಕಾರಿ ಶಿಕ್ಷಕರಿಗೆ Good News; ಗಣತಿ, ಚುನಾವಣಾ ಕೆಲಸಕ್ಕೆ ಬಳಸದಂತೆ ಆಯೋಗಕ್ಕೆ ಸೂಚನೆ
ಈ ಸಂದರ್ಭದಲ್ಲಿ ತುರ್ತು ಸಂದೇಶ ಪಡೆಯುತ್ತಿದ್ದಂತೆ ಕಾರ್ಯಾಚರಣೆಗಿಳಿದ ಕೋಸ್ಟ್‌ಗಾರ್ಡ್ ತನ್ನ ಅತ್ಯಾಧುನಿಕ ನೌಕೆ ಸುಜಿತ್ ಹಾಗೂ ಹೆಲಿಕಾಪ್ಟರ್ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ಕೈಗೊಂಡಿತ್ತು. ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣ ಇದ್ದಾಗಲೂ ಸಹ ಸಂಶೋಧನಾ ಹಡಗಿನಲ್ಲಿ ಸಿಲುಕಿದ್ದ 8 ಹಿರಿಯ ವಿಜ್ಞಾನಿಗಳು ಸೇರಿ 36 ಮಂದಿ ಸಿಬ್ಬಂದಿಯೊಂದಿಗೆ, ಮೌಲ್ಯಯುತವಾದ ವೈಜ್ಞಾನಿಕ ಉಪಕರಣಗಳನ್ನು ಕಾರ್ಯಾಚರಣೆ ಮೂಲಕ ರಕ್ಷಣೆ ಮಾಡಿದ್ದಾರೆ ಹಾಗೂ ತಾಂತ್ರಿಕ ತೊಂದರೆಯಿದ್ದ ಹಡಗನ್ನು ಕೋಸ್ಟ್‌ಗಾರ್ಡ್ ನೌಕೆಯ ಮೂಲಕ ಗೋವಾದ ಬಂದರಿಗೆ ಎಳೆದೊಯ್ಯಲಾಗಿದೆ.