ಸಾಗರ್, ವಿಸ್ತಾರ ನ್ಯೂಸ್
ಕಾರವಾರ: ಧಾರ್ಮಿಕ ಹಾಗೂ ಪ್ರವಾಸೋದ್ಯಮಕ್ಕೆ (Tourism) ಹೆಸರುವಾಸಿಯಾಗಿರುವ, ಪ್ರತಿನಿತ್ಯ ರಾಜ್ಯ, ಹೊರರಾಜ್ಯಗಳ ಸಾವಿರಾರು ಪ್ರವಾಸಿಗರನ್ನು ಕೈಬೀಸಿ ಕರೆಯುವ ತಾಣವಾದ ಮುರ್ಡೇಶ್ವರದಲ್ಲಿ (Murdeshwara) ಫ್ಲೋಟಿಂಗ್ ಸೀ ವಾಕ್ (Floating Sea Walk) ಹೊಸದಾಗಿ ಸೇರ್ಪಡೆಯಾಗಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.
ಸಾಮಾನ್ಯವಾಗಿ ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರ ಎಂದಾಕ್ಷಣ ಶಿವನ ಬೃಹತ್ ಮೂರ್ತಿಯ ಜತೆಗೆ ದೇವಸ್ಥಾನ ಪಕ್ಕದ ವಿಶಾಲವಾದ ಬೀಚ್ ಕೂಡ ಎಲ್ಲರಿಗೂ ನೆನಪಾಗುತ್ತದೆ. ಮುರ್ಡೇಶ್ವರ ಸಮೀಪದ ನೇತ್ರಾಣಿ ದ್ವೀಪ ಕರ್ನಾಟಕದ ಏಕೈಕ ಸ್ಕೂಬಾ ಡೈವಿಂಗ್ ತಾಣವೂ ಆಗಿದ್ದು, ಪ್ರತಿನಿತ್ಯ ಪ್ರವಾಸಿಗರ ದಂಡೇ ಹರಿದುಬರುತ್ತದೆ.
ಇಲ್ಲಿನ ಕಡಲತೀರದಲ್ಲಿ ಸ್ಪೀಡ್ ಬೋಟ್, ಡಾಲ್ಫಿನ್ ಸಫಾರಿ, ಜೆಟ್ ಸ್ಕೀನಂತಹ ಜಲಸಾಹಸ ಕ್ರೀಡೆಗಳ ಜತೆಗೆ ಇದೀಗ ಫ್ಲೋಟಿಂಗ್ ಸೀವಾಕ್ ಹೊಸದಾಗಿ ಸೇರ್ಪಡೆಯಾಗಿದೆ. ಓಶಿಯನ್ ಅಡ್ವೆಂಚರ್ ಹೆಸರಿನ ಖಾಸಗಿ ಸಂಸ್ಥೆ ಸುಮಾರು 1 ಕೋಟಿ ವೆಚ್ಚದಲ್ಲಿ 130 ಮೀ. ಉದ್ದದ ಫ್ಲೋಟಿಂಗ್ ಸೀವಾಕ್ ಜೆಟ್ಟಿಯನ್ನು ನಿರ್ಮಿಸಲಾಗಿದೆ. ಉಜಿರೆ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ಅಮೃತ ಹಸ್ತದಿಂದ ಲೋಕಾರ್ಪಣೆಗೊಳಿಸಲಾಯಿತು.
ಇದನ್ನೂ ಓದಿ: Raichur News: ದಕ್ಷಿಣ ಭಾರತದ ಡೆಲ್ಟಾ ರ‍್ಯಾಂಕಿಂಗ್‌ನಲ್ಲಿ ರಾಯಚೂರಿನ ಮಸ್ಕಿಗೆ ಪ್ರಥಮ ರ‍್ಯಾಂಕ್
ಪ್ರವಾಸಿಗರಿಗೆ ವಿನೂತನ ಅನುಭವ ಒದಗಿಸುವ ಉದ್ದೇಶದಿಂದ ಈ ಪ್ಲೋಟಿಂಗ್ ಸೀವಾಕ್ ಆರಂಭಿಸಿರುವುದಾಗಿ ಸಂಸ್ಥೆಯ ಮಾಲೀಕರು ತಿಳಿಸಿದ್ದಾರೆ.
ಇನ್ನು ಫ್ಲೋಟಿಂಗ್ ಸೀವಾಕ್ ಜೆಟ್ಟಿಯನ್ನು ಕರ್ನಾಟಕದಲ್ಲೇ ಮೊದಲು ಉಡುಪಿಯ ಮಲ್ಪೆ ಬೀಚ್‌ನಲ್ಲಿ ಸರ್ಕಾರದಿಂದಲೇ ಪ್ರವಾಸಿಗರಿಗೆ ಪರಿಚಯಿಸಲಾಗಿತ್ತು. ಆದರೆ ಮಳೆಗಾಲದ ಸಂದರ್ಭದಲ್ಲಿ ಉದ್ಘಾಟನೆಯಾಗಿದ್ದ ಕಾರಣ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಅಷ್ಟೊಂದು ಯಶಸ್ಸು ಕಂಡಿರಲಿಲ್ಲ. ಇದೀಗ ಮುರ್ಡೇಶ್ವರದಲ್ಲಿ ಹೆಚ್ಚು ವೈಜ್ಞಾನಿಕವಾಗಿ ಸೀವಾಕ್ ಅನ್ನು ನಿರ್ಮಿಸಿದ್ದು, ನೂರು ಮಂದಿ ಪ್ರವಾಸಿಗರು ಏಕಕಾಲಕ್ಕೆ ಈ ಸೀವಾಕ್ ಮೇಲೆ ತೆರಳಬಹುದಾಗಿದೆ.
130 ಮೀ ಉದ್ದ, 3.50 ಮೀ ಅಗಲವಿರುವ ಈ ತೇಲುವ ಸೇತುವೆಯ ಎರಡೂ ಬದಿಯಲ್ಲಿ ಪ್ರವಾಸಿಗರ ರಕ್ಷಣೆಗೆ ರೇಲಿಂಗ್ಸ್ ಅಳವಡಿಸಲಾಗಿದ್ದು, ಸಮುದ್ರಕ್ಕೆ ಬೀಳುವ ಅಪಾಯ ಕಡಿಮೆ. ಅಲ್ಲದೇ ಪ್ರವಾಸಿಗರ ಸುರಕ್ಷತೆಗಾಗಿ ಲೈಫ್‌ಗಾರ್ಡ್ ಸಹ ಇರಲಿದ್ದಾರೆ.
ಇದನ್ನೂ ಓದಿ: Money Guide: ನೆಮ್ಮದಿಯ ನಿವೃತ್ತ ಜೀವನ ನಿಮ್ಮದಾಗಬೇಕೆ? ಹಾಗಾದರೆ ಈಗಲೇ ಹೀಗೆ ಮಾಡಿ
ಇನ್ನು ಮುರ್ಡೇಶ್ವರಕ್ಕೆ ಪ್ರವಾಸಕ್ಕೆ ಬರುವವರು ದೇವರ ದರ್ಶನ, ಜಲಸಾಹಸ ಕ್ರೀಡೆಗಳ ಜತೆಗೆ ಅಲೆಗಳ ಮೇಲೂ ಹೆಜ್ಜೆ ಹಾಕಬಹುದಾಗಿದ್ದು ಮೊದಲ ಬಾರಿ ಇದರ ಅನುಭವ ಪಡೆದ ಪ್ರವಾಸಿಗರು ಸಖತ್ ಖುಷ್ ಆಗಿದ್ದಾರೆ.