ಕಾರವಾರ: ರಕ್ಷಾಬಂಧನ (Raksha Bandhan) ಹಬ್ಬಕ್ಕೆ ಇನ್ನೊಂದು ದಿನ ಬಾಕಿ ಉಳಿದಿವೆ. ತಮ್ಮ ಸಹೋದರನಿಗಾಗಿ ಯುವತಿಯರು ಹಾಗೂ ಮಹಿಳೆಯರು ಮಾರುಕಟ್ಟೆಯಲ್ಲಿ ತರಹೇವಾರಿ ರಾಖಿಗಳ ಖರೀದಿಯಲ್ಲಿ ತೊಡಗಿದ್ದಾರೆ. ಇತ್ತ ಕರಾವಳಿ ನಗರಿ ಕಾರವಾರದಲ್ಲಿ (Karwar) ಇದೀಗ ವಿನೂತನ ಮಾದರಿಯ ಫೋಟೋ ರಾಖಿಗಳು ಸಖತ್ ಟ್ರೆಂಡ್ ಸೃಷ್ಟಿಸುತ್ತಿವೆ. ಅದರಲ್ಲೂ ಕೈಯಾರೆ ತಯಾರಿಸುವ ಈ ಹ್ಯಾಂಡ್ ಮೇಡ್ ರಾಖಿಗಳ (Handmade Photo Rakhis) ಖರೀದಿಗೆ ಸಾಕಷ್ಟು ಮಂದಿ ಮುಗಿಬೀಳುತ್ತಿದ್ದಾರೆ.
ಸಹೋದರ ಬಂಧವನ್ನು ಸೂಚಿಸುವ ರಕ್ಷಾಬಂಧನ ಹಬ್ಬಕ್ಕೆ ಇನ್ನೊಂದೇ ದಿನ ಬಾಕಿ ಉಳಿದಿದ್ದು ಈಗಾಗಲೇ ಮಾರುಕಟ್ಟೆಯಲ್ಲಿ ತರಹೇವಾರಿ ರಾಖಿಗಳು ಅಂಗಡಿಗಳಲ್ಲಿ ಆಕರ್ಷಿಸುತ್ತಿವೆ. ಯುವತಿಯರು, ಮಹಿಳೆಯರೂ ಸಹ ಮಾರುಕಟ್ಟೆಗೆ ತೆರಳಿ ಈಗಾಗಲೇ ರಾಖಿಗಳ ಖರೀದಿಯಲ್ಲಿ ತೊಡಗಿದ್ದು ಕರಾವಳಿ ನಗರಿ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಸದ್ಯ ಫೋಟೋ ರಾಖಿಗಳಿಗೆ ಸಖತ್ ಬೇಡಿಕೆ ಕಂಡುಬರುತ್ತಿದೆ.
ತಾಲ್ಲೂಕಿನ ಸದಾಶಿವಗಡದ ನರಸಿಂಹಶಿಟ್ಟಾದ ಸ್ವೀಟಿ ಗಜಿನ್ಕರ್ ಎನ್ನುವವರು ತಮ್ಮ ಸಹೋದರಿಯಿಂದ ಕಲಿತ ಹ್ಯಾಂಡ್‌ಮೇಡ್ ರಾಖಿ ತಯಾರಿಕೆ ಇದೀಗ ಬಹುಬೇಡಿಕೆಯನ್ನು ಗಳಿಸಿಕೊಂಡಿದೆ. ಸ್ವೀಟಿ ತಮ್ಮ ಮನೆಯಲ್ಲೇ ವಿಧವಿಧವಾದ ರಾಖಿಗಳನ್ನ ತಯಾರಿಸಿ ನೀಡುತ್ತಿದ್ದು, ವಾಟ್ಸಪ್ ಮೂಲಕವೇ ಆರ್ಡರ್ ಪಡೆದು ಕಾರವಾರ ವ್ಯಾಪ್ತಿಯಲ್ಲಿ ತಾವೇ ಡೆಲಿವರಿ ಕೂಡ ಮಾಡುತ್ತಾರೆ. ಅದರಲ್ಲಿ ಫೋಟೋ ರಾಖಿಗಳಿಗೆ ಸಕತ್ ಡಿಮ್ಯಾಂಡ್ ಇದ್ದು ತಮ್ಮ ಸಹೋದರ, ಸಹೋದರಿಯ ಫೋಟೋ ಹೊಂದಿದ ತರಹೇವಾರಿ ಡಿಸೈನ್‌ನ ರಾಖಿಗಳನ್ನ ಜನರು ಆರ್ಡರ್ ಕೊಟ್ಟು ಖರೀದಿಸುತ್ತಿದ್ದಾರೆ. 10 ರೂಪಾಯಿಯಿಂದ 200 ರೂಪಾಯಿವರೆಗಿನ ರಾಖಿಗಳನ್ನು ಸ್ವೀಟಿ ತಯಾರಿಸಿ ಕೊಡುತ್ತಿದ್ದು ಇವರ ಫೋಟೋ ರಾಖಿಗಳಿಗೆ ಸಾಕಷ್ಟು ಬೇಡಿಕೆಯಿದೆ.
ಇದನ್ನೂ ಓದಿ: Asia Cup 2023: ಏಷ್ಯಾಕಪ್ ಟೂರ್ನಿಯ 6 ತಂಡಗಳ ಸಂಪೂರ್ಣ ಪಟ್ಟಿ
ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಸ್ವೀಟಿ, ಅವರ ಅಕ್ಕ ಪೂಜಾರಿಂದ ರಾಖಿ ತಯಾರಿಕೆ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಜತೆಗೆ ಯೂಟ್ಯೂಬ್‌ನಿಂದ ವಿಧವಿಧದ ರಾಖಿ ಡಿಸೈನ್ ಕಲಿತಿದ್ದು ಇದೀಗ ರೇಸಿನ್‌ನಿಂದ ಮಾಡಿಕೊಡುವ ವಾಟರ್‌ಪ್ರೂಫ್ ರಾಖಿಗಳು ಸಖತ್ ಹಿಟ್ ಆಗಿವೆ. ಸಹೋದರ, ಸಹೋದರಿಯ ಫೋಟೋಗಳನ್ನು ರಾಖಿ ಬೇಕಾದವರು ಸ್ವೀಟಿ ಅವರಿಗೆ ವಾಟ್ಸಾಪ್ ಮೂಲಕ ಕಳುಹಿಸುತ್ತಾರೆ. ಜತೆಗೆ ತಮ್ಮಲ್ಲಿನ ಡಿಸೈನ್‌ಗಳನ್ನು ಕಳುಹಿಸಿಕೊಡುವ ಸ್ವೀಟಿ, ಗ್ರಾಹಕರು ಆಯ್ಕೆ ಮಾಡಿದ ಡಿಸೈನ್‌ಗೆ ತಕ್ಕಂತೆ ರಾಖಿಗಳನ್ನು ಮಾಡಿಕೊಡುತ್ತಾರೆ. ಕಳೆದ 4 ವರ್ಷದಿಂದ ಬಿಡುವಿನ ಅವಧಿಯಲ್ಲಿ ಸ್ವೀಟಿ ಅವರು ರಾಖಿ ತಯಾರಿಸಿ ಕೊಡುತ್ತಿದ್ದು ಈ ವರ್ಷ ಇದುವರೆಗೆ ಸುಮಾರು 800 ರಾಖಿಗಳನ್ನು ತಯಾರಿಸಿ ಕೊಟ್ಟಿದ್ದಾರೆ.
ಇನ್ನು ಸ್ವೀಟಿಗೆ ಅವರ ಸ್ನೇಹಿತೆ ಸ್ಮಿತಾ ಸಾಥ್ ಕೊಡುತ್ತಿದ್ದು ಬಿಡುವಿನ ಅವಧಿಯಲ್ಲಿ ತಾವೂ ಸಹ ರಾಖಿ ತಯಾರಿಕೆಯಲ್ಲಿ ಜತೆಯಾಗುತ್ತಾರೆ. ಸದ್ಯ ಫೋಟೋ ರಾಖಿಗಳಿಗೆ ಎಲ್ಲೆಡೆ ಸಖತ್ ಬೇಡಿಕೆಯಿದ್ದು ಸ್ನೇಹಿತರು, ಪರಿಚಯಸ್ಥರು ಕಾರವಾರ ಮಾತ್ರವಲ್ಲದೇ ಬೆಂಗಳೂರು, ಮುಂಬೈನಿಂದಲೂ ಆರ್ಡರ್ ಮಾಡಿ ರಾಖಿಗಳನ್ನು ಖರೀದಿಸುತ್ತಿದ್ದಾರೆ ಎಂದು ಸ್ಮಿತಾ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Asia Cup 2023: ಹೀಗಿರಲಿದೆ ಪಾಕ್ ವಿರುದ್ಧದ ಪಂದ್ಯಕ್ಕೆ ಭಾರತದ ಆಡುವ ಬಳಗ
ಒಟ್ಟಾರೇ ಹವ್ಯಾಸವಾಗಿ ಆರಂಭಿಸಿದ ರಾಖಿ ತಯಾರಿಕೆ ಇದೀಗ ಪುಟ್ಟದೊಂದು ಉದ್ಯಮವಾಗಿ ಆದಾಯ ತಂದುಕೊಡುವಂತಾಗಿರೋದು ನಿಜಕ್ಕೂ ಶ್ಲಾಘನೀಯ. ವಿನೂತನ ಮಾದರಿಯ ಫೋಟೋ ರಾಖಿ ತಯಾರಿಕೆ ಮೂಲಕ ಕಾರವಾರದ ಯುವತಿಯರು ಇತರರಿಗೂ ಮಾದರಿಯಾಗಿರೋದಂತೂ ಸತ್ಯ.