ಶಿರಸಿ(ಬನವಾಸಿ): ತಾಲೂಕಿನ ಗುಡ್ನಾಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಂಡಿಗೆಹಳ್ಳಿಯ ಶಾಲಾ (School) ಸಮೀಪ ನಡೆಯುತ್ತಿರುವ ಅಕ್ರಮ (Illegal) ಕೆಂಪು ಕಲ್ಲು ಕ್ವಾರೆ ಪ್ರದೇಶಕ್ಕೆ ಉಪ ತಹಶೀಲ್ದಾರ್ ಹಾಗೂ ಅಧಿಕಾರಿಗಳು ಭೇಟಿ (Visit) ನೀಡಿ ಪರಿಶೀಲಿಸಿದರು.
ಕಳೆದ ಎರಡು ವರ್ಷಗಳಿಂದ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಶಾಲಾ ವೇಳೆ ಜೆಸಿಬಿ, ಲಾರಿ ಹಾಗೂ ಟ್ರ್ಯಾಕರ್ ಶಬ್ದದಿಂದ ವಿದ್ಯಾರ್ಥಿಗಳು ದಿನ ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ. ಇನ್ನು ಅಕ್ರಮ ಗಣಿಗಾರಿಕೆ ಶಾಲಾ ಪಕ್ಕದಲ್ಲೆ ನಡೆಯುತ್ತಿದ್ದು, ಶಾಲಾ ಕಾಂಪೌಂಡ್ ಬಳಿಯೇ ಕಲ್ಲುಗಳನ್ನು ಕೊರೆಯಲಾಗಿದೆ. ಶಾಲಾ ಸುತ್ತ 6ರಿಂದ 8 ಅಡಿಯಷ್ಟು ಆಳದಲ್ಲಿ ಕಲ್ಲುಗಳನ್ನು ಕೊರೆದಿದ್ದು, ಶಾಲಾ ಕಟ್ಟಡ ಕುಸಿದು ಬೀಳುವ ಸಾಧ್ಯತೆ ಹೆಚ್ಚಿದ್ದು, ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗ್ರಾಮಸ್ಥರು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಇದರ ಬೆನ್ನಲ್ಲೆ ಉಪತಹಶೀಲ್ದಾರ್ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.
ಇದನ್ನೂ ಓದಿ: Tamil Nadu : ದೇಗುಲದಲ್ಲಿ ಪೂಜೆಗೆ ನಿರ್ಬಂಧ; ಅರ್ಚಕರ ವಿರುದ್ಧ ಕೇಸ್ ದಾಖಲಿಸಿದ ಅಧಿಕಾರಿಗಳು, ಪ್ರತಿಭಟನೆ
ಈ ವೇಳೆ ಗ್ರಾಮಸ್ಥ ಯೋಗೇಶ ಗೌಡ ಮಾತನಾಡಿ, ಮುಂಡಿಗೆಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪಕ್ಕದಲ್ಲಿ ಅನಧಿಕೃತವಾಗಿ ಕೆಂಪು ಕಲ್ಲಿನ ಕ್ವಾರೆ ನಡೆಯುತ್ತಿದೆ. ಇದರಿಂದಾಗಿ ಶಾಲೆಯ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತುಂಬಾ ತೊಂದರೆ ಉಂಟಾಗುತ್ತಿದೆ ಎಂದು ಆರೋಪಿಸಿದ ಅವರು, ಈ ಕುರಿತು ಅಧಿಕಾರಿಗಳಿಗೆ ಸಾಕಷ್ಟು ಬಾರಿ ದೂರು ನೀಡಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕೆಲವು ತಿಂಗಳ ಹಿಂದೆ ಕಲ್ಲುಕ್ವಾರೆಯ ವಿರುದ್ಧ ದೂರು ನೀಡಿದ ಸಂದರ್ಭದಲ್ಲಿ ಅಧಿಕಾರಿಗಳು ಭೇಟಿ ನೀಡಿ ತಾತ್ಕಾಲಿಕವಾಗಿ ಬಂದ್ ಮಾಡಿಸಿದ್ದರು. ಯಂತ್ರೋಪಕರಣ, ವಾಹನಗಳನ್ನು ವಶಪಡಿಸಿಕೊಂಡಿದ್ದರು. ಅದರೆ ಈಗ ಮತ್ತೆ ಅಕ್ರಮವಾಗಿ ಕಲ್ಲುಗಣಿಗಾರಿಕೆ ಆರಂಭಿಸಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿಗಳು ಶಾಲಾ ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: Sonam Kapoor : ಬ್ರಿಟನ್ ಪ್ರಧಾನಿ ರಿಷಿ ಸುನಾಕ್‌ರಿಂದ ನಟಿ ಸೋನಂ ಕಪೂರ್‌ಗೆ ಬಂತು ಆಹ್ವಾನ
ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆರಿಯಪ್ಪ ಗೌಡ ಮಾತನಾಡಿ, ಅಕ್ರಮ ಗಣಿಗಾರಿಕೆಯ ವಿರುದ್ಧ ಹಲವು ಬಾರಿ ದೂರು ನೀಡಿದ್ದೇವೆ. ಆದರೆ ಅಧಿಕಾರಿಗಳು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಅಕ್ರಮ ಕೆಂಪುಕಲ್ಲು ಗಣಿಗಾರಿಕೆ ನಿಲ್ಲಿಸದೇ ಇದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಉಪ ತಹಶೀಲ್ದಾರ್ ನಾಗರಾಜ ಬೋರಕರ ಮಾತನಾಡಿ, ಅಕ್ರಮ ಕೆಂಪು ಕಲ್ಲು ಕೋರೆಯ ವಿರುದ್ಧ ಈ ಮೊದಲೇ ಕ್ರಮ ಜರುಗಿಸಿ ಕ್ವಾರೆಯನ್ನು ಸ್ಥಗಿತಗೊಳಿಸಲಾಗಿತ್ತು. ಕೆಲ ದಿನಗಳ ಹಿಂದೆ ಅಕ್ರಮವಾಗಿ ಕಲ್ಲು ಕ್ವಾರೆ ಆರಂಭಿಸಿದ ಬಗ್ಗೆ ಸಾರ್ವಜನಿಕ ಮಾಹಿತಿ ಬಂದ ತಕ್ಷಣವೇ ಅಲ್ಲಿಗೆ ಭೇಟಿ ನೀಡಿದ್ದೇವೆ. ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಅನಧಿಕೃತ ಕಲ್ಲು ಕೋರೆಯ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.
ಇದನ್ನೂ ಓದಿ: Bangalore Mysore Expressway : ಬೆಂಗಳೂರು ರಸ್ತೆಯಿಂದ ಮೈಸೂರು ರಸ್ತೆಗೆ ಹಾರಿ ಗದ್ದೆಗೆ ನುಗ್ಗಿದ ಬಸ್!
ಈ ಸಂದರ್ಭದಲ್ಲಿ ಪಿ.ಎಸ್.ಐ ಚಂದ್ರಕಲಾ ಪತ್ತಾರ, ಎಸ್‌ಡಿಎಂಸಿ ಉಪಾಧ್ಯಕ್ಷೆ ವೀಣಾ ಗೌಡ, ಗ್ರಾಮಸ್ಥರಾದ ಭಾಸ್ಕರ ಗೌಡ, ನಾಗಪತಿ ನಾಯ್ಕ್, ಗಣಪತಿ ಗೌಡ, ಯೋಗಿಣಿ ನಾಯ್ಕ್, ನಾಗವೇಣಿ ಗೌಡ, ಜಯಶ್ರೀ ಗೌಡ, ನೇತ್ರಾ ಗೌಡ, ಮೇಘನಾ ಗೌಡ, ಲಲಿತಾ ಗೌಡ, ಇಂದುಮತಿ ಗೌಡ ಮತ್ತಿತರು ಇದ್ದರು.