ಕಾರವಾರ: ಬರುವ ಜೂ.21ರಂದು ನಡೆಯುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ (International Yoga Day) ಅಂಗವಾಗಿ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಸೋಮವಾರ ಯೋಗ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾಡಳಿತ, ಜಿಲ್ಲಾ ಆಯುಷ್ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಯೋಗ ಜಾಥಾಗೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಚಾಲನೆ ನೀಡಿ ಮಾತನಾಡಿದರು.
ಯೋಗ ಜಾಥಾವು ಜಿಲ್ಲಾಧಿಕಾರಿ ಕಚೇರಿಯಿಂದ ಪ್ರಾರಂಭಗೊಂಡು ಪಿಕಳೆ ರಸ್ತೆ, ಗ್ರೀನ್ ಸ್ಟ್ರೀಟ್, ಸವಿತಾ ಸರ್ಕಲ್ ಮೂಲಕ ಜಿಲ್ಲಾ ಆಯುಷ್ ಅಧಿಕಾರಿಗಳ ಕಚೇರಿಗೆ ಕೊನೆಗೊಂಡಿತು.
ಇದನ್ನೂ ಓದಿ: ಮಾನವರಹಿತ ವೈಮಾನಿಕ ವಾಹನ ತಪಸ್ ಯಶಸ್ವಿ ಹಾರಾಟ; ಇದು ಕಾರವಾರ ನೌಕಾನೆಲೆಯ ಸಾಧನೆ!
ಜಾಥಾದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅನ್ನಪೂರ್ಣ ವಸ್ತ್ರದ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಲಲಿತಾ ಶೆಟ್ಟಿ, ಆಯುಷ್ ಇಲಾಖೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಆಯುಷ್ ವೈದ್ಯಾಧಿಕಾರಿಗಳು, ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಸಂಜೀವ್‌ಕುಮಾರ್ ನಾಯ್ಕ, ದೈಹಿಕ ಶಿಕ್ಷಣ ಅಧಿಕಾರಿ ಸಾಂಗ್ಲಿ, ಪ್ರಕಾಶ ನಾಯಕ, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಯೋಗ ಆಸಕ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು.
ಜೂ.21ರಂದು ಬೆಳಗ್ಗೆ 6.30ಕ್ಕೆ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಮೀನುಗಾರಿಕೆ ಮತ್ತು ಬಂದರು ಒಳನಾಡು ಜಲಸಾರಿಗೆ ಸಚಿವ ಮಂಕಾಳು ವೈದ್ಯ ಉದ್ಘಾಟಿಸಲಿದ್ದು, ಕಾರವಾರ-ಅಂಕೋಲಾ ಶಾಸಕ ಸತೀಶ್ ಕೆ. ಸೈಲ್ ಅಧ್ಯಕ್ಷತೆ ವಹಿಸುವರು. ಜಿಲ್ಲೆಯ ಶಾಸಕರು, ಸಂಸದರು, ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ: Fashion Ramp News: ಲಿಟಲ್ ಐಕಾನ್ ಇಂಡಿಯಾ ಫ್ಯಾಷನ್ ರ‍್ಯಾಂಪ್‌ನಲ್ಲಿ ಮಕ್ಕಳ ಕಲರವ
ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ಯೋಗ ಆಸಕ್ತರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾ ಆಯುಷ್ ಇಲಾಖೆಯು ಕೋರಿದೆ.