ಕಾರವಾರ: ಅಂಕೋಲಾ ತಾಲೂಕಿನ ಶಿರೂರು ಸಮೀಪ ಗುಡ್ಡ ಕುಸಿದು ಜೀವ ಹಾನಿ ಆಗಿರುವ ಕುರಿತಂತೆ ಐಆರ್‌ಬಿ ಮತ್ತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ವಿರುದ್ಧ ಕೂಡಲೇ ಪ್ರಕರಣ ದಾಖಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ (Uttara Kannada News) ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಂಕೋಲಾ ತಾಲೂಕಿನ ಶಿರೂರುನಲ್ಲಿ ಗುಡ್ಡ ಕುಸಿದು ಜೀವ ಹಾನಿ ಆಗಿರುವ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ ಉಸ್ತುವಾರಿ ಸಚಿವರು, ಈ ಘಟನೆಗೆ ಅವೈಜ್ಞಾನಿಕ ರಸ್ತೆ ಕಾಮಗಾರಿಯೇ ಪ್ರಮುಖ ಕಾರಣವಾಗಿದ್ದು, ಮೃತರ ಸಾವಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಐಆರ್‌ಬಿ ಕಂಪನಿಯ ಅಧಿಕಾರಿಗಳ ವಿರುದ್ಧ ಪೊಲೀಸ್ ಪ್ರಕರಣ ಮತ್ತು ಗುಡ್ಡ ಕುಸಿತಕ್ಕೆ ಕಾರಣವಾದ ಕಾರಣ ಅರಣ್ಯ ಇಲಾಖೆಯ ಕಾಯ್ದೆಯಡಿ ಎಫ್ಐಆರ್ ದಾಖಲಿಸುವಂತೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ, ಸಾವಿರಾರು ಮಂದಿ ಅಪಘಾತಗಳಿಂದ ಮೃತಪಟ್ಟಿದ್ದು, ಇದಕ್ಕೆಲ್ಲ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣವಾಗಿದೆ ಎಂದರು.
ಇದನ್ನೂ ಓದಿ: Karnataka Rain: ವರುಣಾರ್ಭಟಕ್ಕೆ ರಾಜ್ಯದ ಹಲವೆಡೆ ನದಿಗಳು ಉಕ್ಕಿ ಹರಿದು ನೆರೆ ಸೃಷ್ಟಿ; ಕುಸಿದ ಸೇತುವೆಗಳು!
ರಸ್ತೆ ಕಾಮಗಾರಿಯನ್ನು ಯಾವಾಗ ಮುಕ್ತಾಯಗೊಳಿಸುತ್ತೀರಿ? ಎಂಬ ಪ್ರಶ್ನೆಗೆ ಐಆರ್‌ಬಿ ಅಧಿಕಾರಿಗಳು ಸೂಕ್ತ ಉತ್ತರ ನೀಡಲಿಲ್ಲ. ಇದರಿಂದ ತೀವ್ರ ಅಸಮಾಧಾನಗೊಂಡ ಸಚಿವರು, ಸ್ಪಷ್ಟ ಉತ್ತರ ನೀಡುವವರೆಗೆ ಜಿಲ್ಲಾಡಳಿತದಿಂದ ಯಾವುದೇ ಸಹಕಾರ ನೀಡದಂತೆ ಸೂಚಿಸಿದರು.
ಮಳೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲು ವಿಳಂಬ ಮಾಡಬೇಡಿ, ಕಾಳಜಿ ಕೇಂದ್ರದಲ್ಲಿ ಯಾವುದೇ ಕೊರತೆಯಾಗದಂತೆ ಎಲ್ಲಾ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಸೂಚನೆ ನೀಡಿದರು. ಮಳೆಯಿಂದಾಗಿ ಹಾನಿಯಾದ ಮನೆಗಳಿಗೆ ಮಾನವೀಯ ನೆಲೆಯಲ್ಲಿ ಗರಿಷ್ಠ ಪರಿಹಾರ ಮಂಜೂರು ಮಾಡುವಂತೆ ತಿಳಿಸಿದ ಸಚಿವರು, ಎಲ್ಲಾ ತಾಲೂಕುಗಳಿಗೆ ಕಾಳಜಿ ಕೇಂದ್ರ ತೆರೆಯಲು ಅನುದಾನದ ಕೊರತೆಯಾಗದಂತೆ ಎಚ್ಚರವಹಿಸಬೇಕು ಎಂದರು.
ಅಣಶಿಯಲ್ಲಿ ಸುರಕ್ಷಿತ ಸಂಚಾರಕ್ಕಾಗಿ ರಸ್ತೆ ಅಗಲೀಕರಣ ಕೈಗೊಳ್ಳಲು ಲೋಕೋಪಯೋಗಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಯೋಜನೆ ರೂಪಿಸಿ, ಜಾರಿಗೊಳಿಸುವಂತೆ ಶಾಸಕ ಸತೀಶ್ ಸೈಲ್ ಸೂಚನೆ ನೀಡಿದರು.
ಇದನ್ನೂ ಓದಿ: Olympic Games History: ಒಲಿಂಪಿಕ್ಸ್ನಲ್ಲಿ ಗ್ರೀಸ್ ದೇಶಕ್ಕೆ ವಿಶೇಷ ಮಾನ್ಯತೆ ನೀಡುವುದೇಕೆ?
ಸಭೆಯಲ್ಲಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ.ಕೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕುಮಾರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಅರಣ್ಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.