ಅಂಕೋಲಾ: ಹೃದಯಾಘಾತಕ್ಕೆ (Heart attack) ಒಳಗಾಗಿ ಚಿಕಿತ್ಸೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ (Hospital) ಬಂದ ವ್ಯಕ್ತಿಯನ್ನು ಆಸ್ಪತ್ರೆಯ ಬಾಗಿಲಲ್ಲೆ ನಿಲ್ಲಿಸಿದ ಪರಿಣಾಮ, ಸಕಾಲದಲ್ಲಿ ಚಿಕಿತ್ಸೆ (Treatment) ದೊರೆಯದೇ ಶುಕ್ರವಾರ ತಡರಾತ್ರಿ ಸಾವನ್ನಪ್ಪಿದ್ದಾರೆ ಎಂದು ಮೃತನ ಸಹೋದರ ಶ್ರೀನಿವಾಸ ರಾಮಾ ನಾಯಕ ಆರೋಪಿಸಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಟ್ಟಣದ ಕಣಕಣೇಶ್ವರ ದೇವಸ್ಥಾನದ ಸಮೀಪದ ನಿವಾಸಿಯಾದ ವೆಂಕಟೇಶ ರಾಮಾ ನಾಯ್ಕ ಅವರಿಗೆ ಶುಕ್ರವಾರ ಒಮ್ಮೆಲೆ ಎದೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಚಿಕಿತ್ಸೆಗಾಗಿ ಹತ್ತಿರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ರಾತ್ರಿ 12-10 ರ ಸುಮಾರಿಗೆ ಕರೆ ತರಲಾಗಿತ್ತು.
ಆದರೆ 24 ಗಂಟೆಗಳ ಕಾಲ ತೆರೆದಿಡಬೇಕಾಗಿದ್ದ ಆಸ್ಪತ್ರೆಯ ಬಾಗಿಲು ಮಾತ್ರ ಮುಚ್ಚಿತ್ತು. ಸುಮಾರು 5-6 ನಿಮಿಷಗಳ ಕಾಲ ಬಾಗಿಲಲ್ಲೆ ನಿಂತು ಕರೆಯತೊಡಗಿದರೂ ಯಾರೊಬ್ಬರು ಪತ್ತೆ ಇರಲಿಲ್ಲ. ಬಳಿಕ ಅಟೆಂಡರ್ ಓರ್ವ ಆಗಮಿಸಿ ಅಸಭ್ಯವಾಗಿ ವರ್ತಿಸುತ್ತಾ ಬಾಗಿಲು ತೆರೆದಿದ್ದಾನೆ ಎಂದು ಮೃತನ ಸಹೋದರ ಶ್ರೀನಿವಾಸ ರಾಮಾ ನಾಯಕ ದೂರಿದ್ದಾರೆ.
ಇದನ್ನೂ ಓದಿ: Weather Report : ಬೆಂಗಳೂರು ಸೇರಿ ಕರಾವಳಿ, ಮಲೆನಾಡಲ್ಲಿ ನಾಳೆ ಚಿಟಪಟ ಮಳೆ
ಅನಂತರ ತುರ್ತು ಚಿಕಿತ್ಸಾ ಘಟಕದಲ್ಲಿ ಡಾ. ಗಿರೀಶ ಭೂತೆ ಅವರು ಕೂಡಲೇ ರೋಗಿಯನ್ನು ಚಿಕಿತ್ಸೆಗೆ ಒಳಪಡಿಸಿದ್ದಾರೆ. ಆದರೆ ರೋಗಿ ಮಾತ್ರ ಮಾರ್ಗ ಮಧ್ಯೆ ಮೃತ ಪಟ್ಟಿದ್ದಾರೆ ಎಂದು ವರದಿ ನೀಡಿದ್ದಾರೆ. ಡಾ. ಗಿರೀಶ ಭೂತೆ ಅವರು ರೋಗಿ ಹಾಗೂ ಅವರ ಸಂಬಂಧಿಕರೊಂದಿಗೆ ಉತ್ತಮವಾಗಿ ವ್ಯವಹರಿಸಿ ಸಾಂತ್ವನ ಹೇಳಿದ್ದಾರೆ.
ಆದರೆ 24 ಗಂಟೆಯು ಆಸ್ಪತ್ರೆಯ ಬಾಗಿಲನ್ನು ತೆರೆದಿಡಬೇಕಾದ ಸಿಬ್ಬಂದಿ ಮಾತ್ರ, ಆಸ್ಪತ್ರೆಯ ಒಳಗೆ ಬಿಟ್ಟುಕೊಳ್ಳಲು ತಡ ಮಾಡಿದ್ದಾರೆ. ಈ ಎಲ್ಲಾ ಅಮಾನವೀಯ ದೃಶ್ಯಾವಳಿಗಳು ಆಸ್ಪತ್ರೆಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸಂತೋಷಕುಮಾರ್ ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಅವರು ಆಗ್ರಹಿಸಿದ್ದಾರೆ.