Site icon Vistara News

Uttara Kannada News: ಕಳೆನಾಶಕ ಸಿಂಪಡಿಸುವಾಗ ಅವಘಡ: ಚಿಕಿತ್ಸೆ ಫಲಕಾರಿಯಾಗದೇ ಅರಣ್ಯಾಧಿಕಾರಿ ಸಾವು

Pesticide spraying of Sagavani saplings Forest officer death in Dandeli

ದಾಂಡೇಲಿ: ಸಾಗವಾನಿ ಸಸಿ ಮಡಿಯ (Saplings ಕಳೆಗಳನ್ನು ನಾಶಪಡಿಸಲು ಅಪಾಯಕಾರಿ ಕಳೆನಾಶಕ (Pesticide) ಸಿಂಪಡಿಸಿ ಅದೇ ಕೈಯಿಂದಲೇ ನೀರು, ಆಹಾರ ಸೇವಿಸಿದ ಹಿನ್ನೆಲೆಯಲ್ಲಿ ಗಂಭೀರಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ದಾಂಡೇಲಿ ತಾಲೂಕಿನ ಕುಳಗಿ ಉಪವಲಯ ಅರಣ್ಯಾಧಿಕಾರಿ (Forest officer) ಯೋಗೇಶ್ ನಾಯ್ಕ(33) ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಸಂಜೆ ಮೃತಪಟ್ಟಿದ್ದಾರೆ.

ಮೂಲತಃ ಕುಮಟಾ ತಾಲೂಕಿನ ಬಾಡ ಗ್ರಾಮದವರಾದ ಯೋಗೇಶ್ ನಾಯ್ಕ, ದಾಂಡೇಲಿಯಲ್ಲೇ ವಾಸವಾಗಿದ್ದರು. ವಿರ್ನೋಲಿ ಅರಣ್ಯ ವಲಯದ ಕುಳಗಿ ಶಾಖೆಯಲ್ಲಿ ಸಾಗುವಾನಿ ಸಸಿ ಮಡಿಯ ಕಳೆಗಳನ್ನು ನಾಶಪಡಿಸಲು ತಮ್ಮ ಸಹೋದ್ಯೋಗಿಗಳೊಂದಿಗೆ ತಾವೂ ಸಹ ಕೀಟನಾಶಕವನ್ನು ಸಿಂಪಡಿಸಿದ್ದರು ಎನ್ನಲಾಗಿದೆ. ಇದಾದ ನಂತರ ಯೋಗೇಶ್ ನಾಯ್ಕ ಅವರು ಕೈಯನ್ನು ಸರಿಯಾಗಿ ಸ್ವಚ್ಛಗೊಳಿಸದೇ ನೀರು ಹಾಗೂ ಆಹಾರ ಸೇವಿಸಿದ್ದರು. ಪರಿಣಾಮ ಯೋಗೇಶ್ ನಾಯ್ಕ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು.

ಇದನ್ನೂ ಓದಿ: Education Guide : ಕನ್ನಡದಲ್ಲಿಯೂ ಪಡೆಯಬಹುದು ಎಂಜಿನಿಯರಿಂಗ್‌ ಪದವಿ!

ಅನಾರೋಗ್ಯ ಸಮಸ್ಯೆ ತೀವ್ರಗೊಳ್ಳುತ್ತಿದ್ದಂತೆಯೇ ಯೋಗೇಶ್ ನಾಯ್ಕ ಅವರನ್ನು ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೂ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ಹುಬ್ಬಳ್ಳಿಯ ಸುಚಿರಾಯ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಆದರೆ ಅಂಗಾಂಗ ವೈಫಲ್ಯದಿಂದ ಅರೆಪ್ರಜ್ಞಾವಸ್ಥೆಯಲ್ಲಿದ್ದ ಯೋಗೇಶ್ ನಾಯ್ಕ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: Road Accident: ಬಸ್​-ಕ್ರೂಸರ್​ ಮುಖಾಮುಖಿ ಡಿಕ್ಕಿ; 8 ಪ್ರಯಾಣಿಕರ ದುರ್ಮರಣ

ಮೃತರ ಪತ್ನಿ ದಾಂಡೇಲಿ ಅರಣ್ಯ ವಲಯದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇವರಿಗೆ ಎರಡೂವರೆ ವರ್ಷದ ಪುಟ್ಟ ಮಗ ಇದ್ದಾನೆ. ಇವರು ನಿಷ್ಠಾವಂತ ಅಧಿಕಾರಿ ಎಂದು ಖ್ಯಾತಿಗೊಳಗಾಗಿದ್ದರು. ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಅರಣ್ಯ ಇಲಾಖೆಯ ಹಿರಿಯ, ಕಿರಿಯ ಅಧಿಕಾರಿಗಳು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

Exit mobile version