Site icon Vistara News

Uttara Kannada News: ಕಳಸಿನಮೋಟೆ ಶಾಲೆಗೆ ನುಗ್ಗಿದ ಮಳೆ ನೀರು; ಸಮಸ್ಯೆಗೆ ದೊರೆಯದ ಶಾಶ್ವತ ಪರಿಹಾರ

Rainwater entered Kalasinamote School at Honnavara

ಹೊನ್ನಾವರ: ತಾಲೂಕಿನ ಕಾಸರಕೋಡ ಗ್ರಾ.ಪಂ. ವ್ಯಾಪ್ತಿಯ ಸ.ಹಿ.ಪ್ರಾ. ಕಳಸಿನಮೋಟೆ ಶಾಲೆಯಲ್ಲಿ ಮಳೆ ನೀರು (Rain Water) ಶಾಲಾ ಕೊಠಡಿಯೊಳಗೆ ನುಗ್ಗುವುದರಿಂದ ಶಾಲೆಯಲ್ಲಿ ವಿದ್ಯಾರ್ಥಿಗಳು (Students) ಪಾಠ ಕೇಳಲು ಮತ್ತು ಶಾಲೆಗೆ ಆಗಮಿಸಲು ಸಮಸ್ಯೆಯನ್ನು (Problem) ಅನುಭವಿಸುವಂತಾಗಿದೆ.

ಶಾಲೆಯು ತಗ್ಗು ಪ್ರದೇಶದಲ್ಲಿರುವುದರಿಂದ ಪ್ರತಿ ವರ್ಷವು ಮಳೆಗಾಲದಲ್ಲಿ ಈ ಸಮಸ್ಯೆ ಎದುರಿಸುತ್ತಿದ್ದು, ಈ ಬಾರಿ ಪ್ರಥಮ ಮಳೆಗೆ ಈ ಸ್ಥಿತಿ ಎದುರಿಸುವಂತಾಗಿದೆ. ಶಾಲೆಯ ಹೊರಾಂಗಣ, ಕೊಠಡಿ ಒಳಗೆ ನೀರು ನುಗ್ಗುವುದರಿಂದ ವಿದ್ಯಾರ್ಥಿಗಳು ತರಗತಿ ಒಳ ಪ್ರವೇಶಿಸಲು ಹೈರಾಣಾಗುತ್ತಾರೆ.

ಶಾಲೆಯ ಶಿಕ್ಷಕರು ಪ್ರತಿನಿತ್ಯ ಪಾಠ ಬೋಧನೆ ಮಾಡುದಕ್ಕಿಂತ ಮಳೆಗಾಲದಲ್ಲಿ ಶಾಲಾ ಒಳಗಿನ ನೀರು ಹೊರ ಹಾಕಲು ಹರಸಾಹಸ ಪಡುವಂತಾಗಿದೆ. ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ನೀಡಿದರೂ, ಇದುವರೆಗೂ ಶಾಶ್ವತ ಪರಿಹಾರ ದೊರೆತಿಲ್ಲ. ಹಿರಿಯ ಪ್ರಾಥಮಿಕ ಶಾಲೆಯಾಗಿರುವುದರಿಂದ 55 ವಿದ್ಯಾರ್ಥಿಗಳಿದ್ದು, ಮೂವರು ಶಿಕ್ಷಕರು ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: ಮೋದಿ ಸ್ಟೇಡಿಯಂನಲ್ಲಿ ಇಂಡೋ-ಪಾಕ್ ವಿಶ್ವ ಕಪ್​​ ಕದನ; ಹೋಟೆಲ್​ ದರ ಗಗನಕ್ಕೆ

ಶಾಲೆಯ ಕಟ್ಟಡ ಬೇರಡೆಗೆ ಸ್ಥಳಾಂತರಿಸುವ ಕಾರ್ಯ 2013 ರಿಂದ ಆಮೆಗತಿಯಲ್ಲಿ ನಡೆಯುತ್ತಿದೆ, 23 ಗುಂಟೆ ಜಾಗ ದಾನವಾಗಿ ನೀಡಲಾಗಿದ್ದು, ಇಲ್ಲಿ ಶಾಲಾ ಕಟ್ಟಡ ನಿರ್ಮಿಸುವ ಮೂಲಕ ಈ ಸಮಸ್ಯೆ ಬಗೆಹರಿಸಬಹುದು. 2014ರ ಅವಧಿಯಲ್ಲಿ ಶಾಲಾ ಕಟ್ಟಡಕ್ಕೆ ಅನುದಾನವನ್ನು ಅಂದು ಶಾಸಕರಾಗಿದ್ದ ಮಂಕಾಳ ವೈದ್ಯ ಬಿಡುಗಡೆ ಮಾಡುವ ಮೂಲಕ ಶಾಲಾ ಕಟ್ಟಡ ನಿರ್ಮಾಣಕ್ಕೆ ಹೊಸ ಸ್ಥಳದಲ್ಲಿ ನಿರ್ಮಿಸಲು ಮುಂದಾಗಿದ್ದರು. ಆದರೆ ಆ ಕಟ್ಟಡದ ನೆಲ ಹಾಸು, ಬಾಗಿಲು, ಕಿಟಕಿ ಬಾಕಿ ಇದೆ. ಈ ಹಿಂದಿನ ಶಾಸಕರಾಗಿದ್ದ ಸುನೀಲ ನಾಯ್ಕ ವಿವೇಕ ಯೋಜನೆಯಡಿ ಅನುದಾನ ಬಿಡುಗಡೆಯಾಗಿದ್ದು, ಅದು ಮೇಲ್ಛಾವಣಿ ಹಂತಕ್ಕೆ ಬಂದು ನಿಂತಿದೆ.

ಇದನ್ನೂ ಓದಿ: Stock Market : ಮೊಟ್ಟ ಮೊದಲ ಬಾರಿಗೆ ಸೆನ್ಸೆಕ್ಸ್‌ 64,000, ನಿಫ್ಟಿ 19,000ಕ್ಕೆ ಜಿಗಿತ

ಅಡಿಪಾಯ ಮಾತ್ರ ನಿರ್ಮಾಣ

ಸ್ಥಳಿಯ ಗ್ರಾ.ಪಂ. ಎನ್.ಆರ್.ಜಿ ಮೂಲಕ ಕಟ್ಟಡ ನಿರ್ಮಾಣಕ್ಕೆ 1,60,000 ರೂ ಅನುದಾನ ಬಿಡುಗಡೆಗೊಳಿಸಿದರೆ ಅಡಿಪಾಯ ಮಾತ್ರ ನಿರ್ಮಾಣವಾಗಿದೆ. ಈ ಮೂರು ಕಟ್ಟಡ ತ್ವರಿತಗತಿಯಲ್ಲಿ ಪೂರ್ಣಗೊಂಡರೆ ಈ ಶಾಲೆಯ ವಿದ್ಯಾರ್ಥಿಗಳು ಯಾವುದೇ ಸಮಸ್ಯೆ ಇಲ್ಲದೇ ಪಾಠ ಕೇಳಬಹುದು. ಶಿಕ್ಷಕರು ಯಾವುದೇ ಆತಂಕವಿಲ್ಲದೇ ಪಾಠ ಮಾಡಬಹುದು, ಇಲ್ಲದಿದ್ದರೆ ಆತಂಕದಲ್ಲಿಯೇ ಪಾಠ ಕೇಳಿ ಮಳೆಗಾಲದಲ್ಲಿ ಅತ್ತ ಶಾಲೆಗೂ ಹೋಗಲು ಸಾಧ್ಯವಾಗದೇ, ಪಾಠದಿಂದ ವಂಚಿತರಾಗುವ ಸ್ಥಿತಿ ನಿರ್ಮಾಣವಾಗಲಿದೆ. ಅಧಿಕಾರಿಗಳು ಜನಪ್ರತಿನಿಧಿಗಳು ಕೂಡಲೇ ಈ ಬಗ್ಗೆ ಗಮನಹರಿಸಿ ಬದಲಿ ವ್ಯವಸ್ಥೆ ಕಲ್ಪಿಸಬೇಕಿದೆ.

Exit mobile version