ಕಾರವಾರ: ನಗರದ ಆಶ್ರಮ ರಸ್ತೆಯ ಮನೆಯೊಂದರಲ್ಲಿ ಪ್ರತ್ಯಕ್ಷವಾದ ಅಪರೂಪದ ತೋಳ ಹಾವನ್ನು (Wolf Snake) ರಕ್ಷಣೆ ಮಾಡಿರುವ ಘಟನೆ ಜರುಗಿದೆ.
ಮನೆಯ ಹೊರಗಿನ ಗೋಡೆಯ ಮೇಲೆ ಕಂಡುಬಂದ ಕಾಳಿಂಗ ಸರ್ಪದ ಮರಿಯಂತಹ ಕಪ್ಪು ಬಣ್ಣದ ಹಾವನ್ನ ಕಂಡ ಮನೆಯವರು ಆತಂಕಗೊಂಡು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಈ ವೇಳೆ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಎಚ್ಚರಿಕೆಯಿಂದ ಹಾವನ್ನು ಡಬ್ಬವೊಂದರಲ್ಲಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹಾವನ್ನ ಸೆರೆಹಿಡಿದ ಬಳಿಕ ಕುಟುಂಬಸ್ಥರು ನಿರಾಳರಾಗಿದ್ದಾರೆ.
ತೋಳದ ಹಲ್ಲಿನಂತೆ ಹಲ್ಲುಗಳ ರಚನೆ ಹೊಂದಿರುವುದರಿಂದ ಈ ಪ್ರಭೇದದ ಹಾವುಗಳನ್ನು ಉಲ್ಫ್ ಸ್ನೇಕ್ ಎಂದು ಕರೆಯಲಾಗುತ್ತದೆ. ಕೇವಲ ಒಂದರಿಂದ ಒಂದೂವರೆ ಅಡಿ ಮಾತ್ರ ಬೆಳೆಯುವ ಇವು ಕಾಂಪೌಂಡ್ ಗೋಡೆಯ ಸಂದಿ, ಹಾವಸೆ ಬೆಳೆಯುವ ಪ್ರದೇಶಗಳಲ್ಲಿ, ಸಣ್ಣ ರಂದ್ರಗಳಲ್ಲಿ ಆಶ್ರಯ ಪಡೆದುಕೊಳ್ಳುತ್ತವೆ. ಇವು ನಿಶಾಚರಿಯಾಗಿದ್ದು ಸಾಮಾನ್ಯವಾಗಿ ಹಗಲಿನಲ್ಲಿ ಕಾಣಸಿಗುವುದು ಕಡಿಮೆ.
ಇದನ್ನೂ ಓದಿ: Dasara Shopping: ದಸರಾ ಸೀಸನ್ ಶಾಪಿಂಗ್‌ನಲ್ಲಿ ಎಥ್ನಿಕ್ ವೇರ್ಸ್‌ಗೆ ಹೆಚ್ಚಿದ ಬೇಡಿಕೆ
ಇವು ವಿಷಕಾರಿಯಲ್ಲದಿದ್ದರೂ ಇವುಗಳ ದೇಹದ ಮೇಲಿನ ಬಿಳಿಯ ಪಟ್ಟಿಯಂತಹ ರಚನೆಯಿಂದ ವಿಷಕಾರಿ ಹಾವುಗಳಂತೆ ಕಂಡುಬರುತ್ತವೆ. ಹಲ್ಲಿ, ಹಲ್ಲಿಯ ಮೊಟ್ಟೆ, ಕಪ್ಪೆಯಂತಹ ಸಣ್ಣ ಜೀವಿಗಳನ್ನು ಬೇಟೆಯಾಡುವ ಇವು ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಳ್ಳಲು ಹಿಂಜರಿಯುತ್ತವೆ. ಹೀಗಾಗಿ ಇವುಗಳನ್ನು ನೋಡಲು ಸಿಗುವುದು ಅಪರೂಪ ಎಂದು ಅರಣ್ಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.