ಕಾರವಾರ: ಸಗಡಗೇರಿ ಗ್ರಾಮದ ಬಳಿ ಗಂಗಾವಳಿ ನದಿಯಲ್ಲಿದ್ದ ಗ್ಯಾಸ್ ಟ್ಯಾಂಕರ್‌ನಲ್ಲಿದ್ದ ಸುಮಾರು 15 ಟನ್ ಗ್ಯಾಸ್ ಅನ್ನು ಎಚ್.ಪಿ.ಸಿ.ಎಲ್, ಬಿ.ಪಿ.ಸಿ.ಎಲ್, ರಾಜ್ಯ ವಿಪತ್ತು ನಿರ್ವಹಣಾ ತಂಡ ಹಾಗೂ ಅಗ್ನಿಶಾಮಕ ತಂಡಗಳ ನೆರವಿನಿಂದ ಸಂಪೂರ್ಣವಾಗಿ ಖಾಲಿ ಮಾಡಲಾಗಿದೆ. ಈ ಪ್ರದೇಶವನ್ನು ವಾಸಯೋಗ್ಯಕ್ಕೆ ಮುಕ್ತಗೊಳಿಸಲಾಗಿದ್ದು, ಗ್ರಾಮಸ್ಥರು ತಮ್ಮ ಮನೆಗಳಿಗೆ ವಾಪಸ್ ಬರಬಹುದಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ. (Uttara Kannada News) ತಿಳಿಸಿದ್ದಾರೆ.
ಜಿಲ್ಲೆಯ ಅಂಕೋಲಾ ಸಮೀಪದ ಗುಡ್ಡ ಬಿದ್ದ ಪ್ರದೇಶಕ್ಕೆ ಶುಕ್ರವಾರ ಭೇಟಿ ನೀಡಿ ಮಾತನಾಡಿದ ಅವರು, ಅಂಕೋಲಾ ಶಿರೂರು ಸಮೀಪ ಸಂಭವಿಸಿದ್ದ ಗುಡ್ಡ ಕುಸಿತ ಪ್ರದೇಶದಲ್ಲಿ ರಸ್ತೆಯ ಮೇಲಿದ್ದ ಮಣ್ಣು ತೆರವು ಕಾರ್ಯಾಚರಣೆ ಮುಗಿದಿದ್ದು, ಹೆದ್ದಾರಿಯ ಒಂದು ಬದಿಯನ್ನು ಮುಕ್ತಗೊಳಿಸಲಾಗಿದೆ. ಆದರೆ ಯಾವುದೇ ವಾಹನ ಸಂಚಾರಕ್ಕೆ ಅನುಮತಿ ನೀಡಿರುವುದಿಲ್ಲ ಎಂದರು.
ಅಂಕೋಲಾ ಸಮೀಪದ ಗುಡ್ಡ ಬಿದ್ದ ಪ್ರದೇಶದಲ್ಲಿ ವ್ಯಾಪಕ ಮಳೆ ಸುರಿಯುತ್ತಿದ್ದು, ಪ್ರಸ್ತುತ ಬಿದ್ದಿರುವ ಮಣ್ಣನ್ನು ಸಂಪೂರ್ಣ ತೆರವುಗೊಳಿಸಿ ಸಂಚಾರಕ್ಕೆ ಯೋಗ್ಯವನ್ನಾಗಿ ಮಾಡಲು ಅವಿರತವಾಗಿ ಶ್ರಮಿಸಲಾಗುತ್ತಿದೆ ಎಂದರು.
ಇದನ್ನೂ ಓದಿ: R Ashok: ಹಗರಣದ ವಿರುದ್ಧ ಮಾತನಾಡಿದ ಸದಸ್ಯರ ಬಾಯಿ ಮುಚ್ಚಿಸಿದ ಸ್ಪೀಕರ್; ಆರ್. ಅಶೋಕ್ ಆಕ್ರೋಶ
ಜಿಲ್ಲೆಯಲ್ಲಿ ಪ್ರಸ್ತುತ, ಕಾರವಾರ ತಾಲೂಕಿನ 6, ಅಂಕೋಲಾದ 6, ಕುಮಟಾದ 5, ಹೊನ್ನಾವರದ 13 ಸೇರಿದಂತೆ ಒಟ್ಟು 30 ಕಾಳಜಿ ಕೇಂದ್ರಗಳಲ್ಲಿ 2373 ಮಂದಿ ಆಶ್ರಯ ಒದಗಿಸಲಾಗಿದ್ದು, ಅಗತ್ಯ ಮೂಲಭೂತ ಸೌಲಭ್ಯಗಳು ಹಾಗೂ ವೈದ್ಯಕೀಯ ನೆರವು ಒದಗಿಸಲಾಗಿದೆ ಎಂದರು.
ಗುಡ್ಡ ಕುಸಿತ ಪ್ರದೇಶದಲ್ಲಿ ಇದುವರೆಗೆ 7 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಮಣ್ಣಿನ ಅವಶೇಷಗಳಡಿ ಬೆಂಜ್ ಲಾರಿ ಮತ್ತು ಚಾಲಕ ಸಿಲುಕಿರುವ ಸಾಧ್ಯತೆಯಿದ್ದು, ಈ ಬಗ್ಗೆ ಜಿಲ್ಲಾ ಬಾಂಬ್ ನಿಷ್ಕ್ರೀಯ ದಳ ಮೆಟಲ್ ಡಿಟೆಕ್ಟರ್ ಮೂಲಕ ವಾಹನದ ತಪಾಸಣೆ ಕೈಗೊಳ್ಳಲಾಗಿದೆ. ನೌಕಾನೆಲೆ ಅಧಿಕಾರಿಗಳು, ಎನ್.ಡಿ.ಆರ್.ಎಫ್ ಮತ್ತು ಎಸ್.ಡಿ.ಆರ್.ಎಫ್, ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಸಮೀಪದ ನದಿಯಲ್ಲಿ ಕೂಡಾ ತಪಾಸಣೆ ನಡೆಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್ ತಿಳಿಸಿದರು.
ಇನ್ಸ್‌ಪೆಕ್ಟರ್ ಜನರಲ್ ಅಫ್ ಪೊಲೀಸ್ ಅಮಿತ್ ಸಿಂಗ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಸುರಕ್ಷಿತ ಕಾರ್ಯಚರಣೆಗೆ ಅಗತ್ಯ ಸೂಚನೆಗಳನ್ನು ನೀಡಿದರು.
ಇದನ್ನೂ ಓದಿ: Sbi Recruitment: ಎಸ್‌ಬಿಐನಲ್ಲಿ 1,040 ಎಸ್‌ಸಿಒ ಹುದ್ದೆಗಳಿಗೆ ಅರ್ಜಿ ಅಹ್ವಾನ
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕುಮಾರ್ ಕಾಂದೂ, ಭಟ್ಕಳ ಉಪ ವಿಭಾಗಾಧಿಕಾರಿ ಡಾ. ನಯನ ಮತ್ತು ವಿವಿಧ ಅಧಿಕಾರಿಗಳು ಇದ್ದರು.