ಶಿರಸಿ: ಸೋಂದಾ ಸ್ವರ್ಣವಲ್ಲೀ (Sonda Swarnavalli) ಮಹಾ ಸಂಸ್ಥಾನದ ಮಠಾಧೀಶರಾದ ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳ 33ನೇ ಚಾತುರ್ಮಾಸ್ಯ ವ್ರತಾಚರಣೆಯು (Chaturmasya Vratha) ಜುಲೈ 3 ರಿಂದ ಸೆಪ್ಟೆಂಬರ್ 29ರ ತನಕ ನಡೆಯಲಿದೆ ಎಂದು ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ ತಿಳಿಸಿದ್ದಾರೆ.
ನಗರದ ಯೋಗ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಸಾಮಾನ್ಯವಾಗಿ ನಾಲ್ಕು ಪಕ್ಷಗಳ ಕಾಲ ಚಾತುರ್ಮಾಸ್ಯ ವ್ರತಾಚರಣೆ ನಡೆಯುತ್ತದೆ. ಈ ಸಲ ಶ್ರಾವಣ ಮಾಸ ಅಧಿಕ ಆಗಿದ್ದರಿಂದ ಒಟ್ಟು 3 ತಿಂಗಳು ವ್ರತಾಚರಣೆ ನಡೆಯಲಿದೆ ಎಂದರು.
ವ್ರತ ಸಂಕಲ್ಪ
ಆಷಾಢ ಪೂರ್ಣಿಮೆಯಂದು ಬೆಳಗ್ಗೆ 10ಕ್ಕೆ ಶ್ರೀಗಳು ಶ್ರೀವೇದ ವ್ಯಾಸರ ಪೂಜೆ ನಡೆಸಿ ವ್ರತ ಸಂಕಲ್ಪ ಮಾಡಲಿದ್ದಾರೆ. ಬಳಿಕ ಸಮಸ್ತ ಶಿಷ್ಯರ ಪರವಾಗಿ ಪಾದುಕಾ ಪೂಜೆ ನಡೆಯಲಿದೆ. ಈ ವ್ರತ ಶೋಭನ ಸಂವತ್ಸರದ ಆಷಾಢ ಪೂರ್ಣಿಮೆಯಿಂದ ಭಾದ್ರಪದ ಶುದ್ಧ ಹುಣ್ಣಿಮೆಗೆ ಪೂರ್ಣವಾಗಲಿದೆ. ಚಾತುರ್ಮಾಸ್ಯದ ಅವಧಿಯಲ್ಲಿ ನಿತ್ಯವೂ ಒಂದೊಂದು ಸೀಮೆಯಿಂದ ಪಾದ ಪೂಜೆ ನಡೆಯಲಿದೆ ಎಂದರು.
ಸ್ವರ್ಣವಲ್ಲೀ ಮಠದಲ್ಲೇ ವ್ರತ ಸಂಕಲ್ಪ
ಕಳೆದ 33 ವರ್ಷದಿಂದ ತಪೋ ಭೂಮಿಯಾದ ಸ್ವರ್ಣವಲ್ಲೀ ಮಠದಲ್ಲಿಯೇ ಶ್ರೀಗಂಗಾಧರೇಂದ್ರ ಸರಸ್ವತೀ ಶ್ರೀಗಳು ಚಾತುರ್ಮಾಸ್ಯ ವ್ರತಾಚರಣೆ ನಡೆಯುತ್ತಿರುವುದು ಸ್ವರ್ಣವಲ್ಲೀಯಲ್ಲಿ ವಿಶೇಷವಾಗಿದೆ. ಈ ಅವಧಿಯಲ್ಲಿ ಶಿಷ್ಯರು ಮಠಕ್ಕೆ ಆಗಮಿಸಿ ಗುರು ಸೇವೆ ನಡೆಸಲಿದ್ದಾರೆ ಎಂದರು.
ವ್ರತ ಸಂಕಲ್ಪ ದಿನ ಋಗ್ವೇದ, ಕೃಷ್ಣಜುರ್ವೇದ, 18 ಪುರಾಣ ಪಾರಾಯಣಗಳು ನಡೆಯಲಿದೆ. ಜುಲೈ 10 ರಿಂದ 24ರ ತನಕ ಶ್ರೀಗಳಿಂದ ಕಾಷ್ಠ ಮೌನ ಇದ್ದು, ಅಂದಿನ ದಿನದಲ್ಲಿ ಶ್ರೀ ದರ್ಶನ ಇಲ್ಲವಾಗಿದೆ ಎಂದರು.
ಸಾಧಕರಿಗೆ ಸಮ್ಮಾನ
ಶ್ರೀಗಳ ಚಾತುರ್ಮಾಸ್ಯ ಆರಂಭದ ಹಿನ್ನಲೆಯಲ್ಲಿ ಜು.3ರಂದು ಸಂಜೆ 4ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಅಂದು ಅತಿಥಿಗಳಾಗಿ ಶಾಸಕ ಶಿವರಾಮ ಹೆಬ್ಬಾರ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರ್ನಳ್ಳಿ ಪಾಲ್ಗೊಳ್ಳುವರು ಎಂದರು.
ನಾಡಿನ ಖ್ಯಾತ ವೈದ್ಯ ದಾವಣಗೆರೆಯ ಡಾ. ಎಸ್.ಆರ್.ಹೆಗಡೆ, ವಾತುಲಾಗಮ ವಿದ್ವಾಂಸ ವೇ. ಗಜಾನನ ಹಿರೇ ಭಟ್ಟ ಗೋಕರ್ಣ, ದಕ್ಷ ಆಡಳಿತಗಾರ ರಘುಪತಿ ಎನ್.ಭಟ್ಟ ಸುಗಾವಿ, ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಅವರನ್ನು ಸಮಾರಂಭದ ಸಾನ್ನಿಧ್ಯ ವಹಿಸುವ ಶ್ರೀಗಳು ಗೌರವಿಸಲಿದ್ದಾರೆ. ಶ್ರೀಗಳು ಬರೆದ ಲೇಖನಗಳ ಸಂಕಲನ ಗುರುವಾಣಿ ಕೃತಿ ಬಿಡುಗಡೆ ಕೂಡ ಆಗಲಿದೆ ಎಂದರು.
ಗುರು ಸೇವೆ
ಮಠದ ವ್ಯಾಪ್ತಿಯ ಹಾಗೂ ವಿವಿಧ ನಗರಗಳಲ್ಲಿ ಇರುವ ಸ್ವರ್ಣವಲ್ಲೀ ಸೀಮಾ ಪರಿಷತ್ ಸದಸ್ಯರು, ಶ್ರೀರಾಮ ಕ್ಷತ್ರಿಯ ಶಿಷ್ಯರು ಸೇರಿದಂತೆ ಅನೇಕ ಶಿಷ್ಯ ವೃಂದದವರು ಈ ಅವಧಿಯಲ್ಲಿ ಸೇವೆ ಸಲ್ಲಿಸಲಿದ್ದಾರೆ.
ಶಿಷ್ಯರಿಗಾಗಿ ಪ್ರತಿ ದಿನ ಸಂಜೆ ಶ್ರೀ ಮಹಾಭಾರತ ಪುರಾಣ ಪ್ರವಚನ ನಡೆಯಲಿದೆ. ಚಾತುರ್ಮಾಸ್ಯ ಅವಧಿಯಲ್ಲಿ ಸ್ವಸಹಾಯ ಸಂಘಗಳ ಸಮಾವೇಶ, ಯಕ್ಷ ಶಾಲ್ಮಲಾ ಸಂಸ್ಥೆಯಿಂದ ಮಕ್ಕಳ ತಾಳಮದ್ದಲೆ ಸ್ಪರ್ಧೆ, ಸನ್ಮಾನ ನಡೆಯಲಿದೆ. ಚಾತುರ್ಮಾಸ್ಯ ವೇಳೆ ಉಪನೀತರು ಕನಿಷ್ಠ 1008 ಗಾಯತ್ರಿ ಜಪ ಅನುಷ್ಠಾನ ಮಾಡಬೇಕು ಎಂಬುದು ಶ್ರೀಗಳ ಅಪೇಕ್ಷೆ ಆಗಿದೆ ಎಂದು ತಿಳಿಸಿದರು. ಈ ವೇಳೆ ಪ್ರಮುಖರಾದ ಆರ್.ಎಸ್.ಹೆಗಡೆ ಭೈರುಂಬೆ, ಕೆ.ವಿ.ಭಟ್ಟ, ಎಸ್.ಎನ್.ಭಟ್ ಉಪಾಧ್ಯ ಇತರರು ಇದ್ದರು.
ಸ್ವರ್ಣವಲ್ಲೀ ಮಠದ ಭಗವತ್ಪಾದಕ ಪ್ರಕಾಶನ ಹಾಗೂ ಸ್ವರ್ಣವಲ್ಲೀ ಪ್ರಭಾಕ್ಕೆ 25 ವರ್ಷ ಸಂಭ್ರಮ. ನವೆಂಬರ್‌ನಲ್ಲಿ ಇದರ ಆಚರಣೆ ಮಾಡಲಾಗುತ್ತದೆ. – ಪ್ರೊ. ಕೆ.ವಿ. ಭಟ್ಟ, ಪ್ರಮುಖರು, ಭಗವತ್ಪಾದ ಪ್ರಕಾಶನ
ಚಾತುರ್ಮಾಸ್ಯ ಅವಧಿಯಲ್ಲಿ ಪೂರ್ವ ನಿಗದಿತ ವೇಳಾ ಪಟ್ಟಿಯಂತೆ ಸೀಮಾ ಶಿಷ್ಯರಿಂದ ಪಾದಪೂಜೆ, ಭಿಕ್ಷಾ ಸೇವೆ, ಮಾತೆಯರಿಂದ ಕುಂಕುಮಾರ್ಚನೆ ನಡೆಯಲಿದೆ. – ಆರ್.ಎಸ್. ಹೆಗಡೆ ಬೈರುಂಬೆ, ಮಠದ ಆಡಳಿತ ಮಂಡಳಿ ಪ್ರಮುಖರು.