Site icon Vistara News

Uttara Kannada News: ರಾಜ್ಯಕ್ಕೇ ವಿದ್ಯುತ್ ನೀಡುವ ಉತ್ತರ ಕನ್ನಡ ಜಿಲ್ಲೆಯಲ್ಲಿವೆ ಕರೆಂಟ್ ಇಲ್ಲದ 1680 ಮನೆಗಳು!

There are 1680 houses without electricity in Uttara Kannada district which provides electricity to the state

-ಎಸ್.ಎಸ್.ಸಂದೀಪ ಸಾಗರ, ವಿಸ್ತಾರ ನ್ಯೂಸ್, ಕಾರವಾರ

ಕಾರವಾರ: ಪಶ್ಚಿಮ ಘಟ್ಟಗಳ ಸರಣಿಯೊಂದಿಗೆ ಕರಾವಳಿ ತೀರವನ್ನು ಹೊಂದಿರುವ ವಿಶಿಷ್ಟ ಜಿಲ್ಲೆ ಉತ್ತರ ಕನ್ನಡದಲ್ಲಿ (Uttara Kannada News) ರಾಜ್ಯ ಹಾಗೂ ದೇಶಕ್ಕೆ ವಿದ್ಯುತ್ (Electricity) ಪೂರೈಸುವ ಕೈಗಾ ಅಣು ವಿದ್ಯುತ್ ಸ್ಥಾವರ, ಕಾಳಿ ಜಲವಿದ್ಯುತ್ ಯೋಜನೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ದೀಪದ ಬುಡದಲ್ಲೇ ಕತ್ತಲು ಎನ್ನುವಂತೆ ಜಿಲ್ಲೆಯಲ್ಲಿ ಇದುವರೆಗೂ ಸಹ ವಿದ್ಯುತ್ ಸಂಪರ್ಕವೇ ಇಲ್ಲದ ಒಂದೂವರೆ ಸಾವಿರಕ್ಕೂ ಅಧಿಕ ಮನೆಗಳಿರುವುದು ನಿಜಕ್ಕೂ ದುರಂತವೇ ಸರಿ.

ಹೌದು, ಜಲ ವಿದ್ಯುತ್ ಉತ್ಪಾದನಾ ಘಟಕವಿರುವ ಜಿಲ್ಲೆಯ ಸೂಪಾ, ಅಂಬಿಕಾನಗರ, ಕದ್ರಾ ಭಾಗದಲ್ಲೇ ಇನ್ನೂ ಸಹ ಕರೆಂಟ್ ಕಾಣದ ನೂರಾರು ಮನೆಗಳಿವೆ. ಅದರಲ್ಲೂ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಗುಡ್ಡಗಾಡು ಪ್ರದೇಶ ಹೊಂದಿರುವ ಅತಿ ಹಿಂದುಳಿದ ಜೋಯಿಡಾ ತಾಲೂಕಿನ ಡಿಗ್ಗಿ, ಉಳವಿ, ಅಂಬೂಳಿ, ಮುಂಬರ್ಗಿ ಸೇರಿದಂತೆ ಹಲವು ಹಳ್ಳಿಗಳ ವ್ಯಾಪ್ತಿಯ ಜನರಿಗೆ ಇನ್ನೂ ಸಹ ಚಿಮಣಿ ದೀಪವೇ ಬೆಳಕಿನ ಆಧಾರವಾಗಿದೆ.

ಇದನ್ನೂ ಓದಿ: Chapped Lips: ಈ ಚಳಿಗಾಲದಲ್ಲಿ ತುಟಿ ಬಿರಿಯುತ್ತಿದೆಯೇ? ಇಲ್ಲಿದೆ ಮದ್ದು!

ಉತ್ತರಕನ್ನಡ ಜಿಲ್ಲೆ ಬಹುತೇಕ ಗುಡ್ಡಗಾಡು ಪ್ರದೇಶ ಹೊಂದಿದೆ. ಇಲ್ಲಿನ ಘಟ್ಟ ಪ್ರದೇಶಗಳಲ್ಲಿ ವನವಾಸಿಗಳಾದ ಸಿದ್ಧಿ, ಹಾಲಕ್ಕಿ, ಕುಣಬಿ, ಗೌಳಿ ಸೇರಿದಂತೆ ಹಲವು ಬುಡಕಟ್ಟು ಸಮುದಾಯಗಳು ಅರಣ್ಯದಲ್ಲೇ ಜೀವನ ಕಟ್ಟಿಕೊಂಡಿದ್ದಾರೆ. ಬಹುತೇಕ ಹಳ್ಳಿಗಳು ದಟ್ಟ ಕಾಡಿನ ನಡುವೆ ಇರುವ ಹಿನ್ನಲೆಯಲ್ಲಿ ಮನೆಗಳಿಗೆ ತೆರಳಲು ಸೂಕ್ತ ರಸ್ತೆ ವ್ಯವಸ್ಥೆಯೂ ಇಲ್ಲವಾಗಿದ್ದು ವಿದ್ಯುತ್ ಸಂಪರ್ಕವಂತೂ ಗಗನ ಕುಸುಮ ಎನ್ನುವಂತಾಗಿದೆ.

ಕೆಲ ನಿವಾಸಿಗಳಿಗೆ ಸರ್ಕಾರದಿಂದ ಸೋಲಾರ್ ಕಿಟ್ ಲಭ್ಯವಾಗಿತ್ತಾದರೂ ಮಳೆಗಾಲದ ಅವಧಿಯಲ್ಲಿ ಇವು ಪ್ರಯೋಜನಕ್ಕೆ ಬಾರದೇ ಜನರು ಚಿಮಣಿ ದೀಪಗಳನ್ನೇ ಅವಲಂಬಿಸಿ ಬದುಕುವಂತಾಗಿದೆ. ಇದರಿಂದ ಶಾಲೆಗೆ ತೆರಳುವ ವಿದ್ಯಾರ್ಥಿಗಳ ಶಿಕ್ಷಣಕ್ಕೂ ಅಡ್ಡಿಯಾಗುತ್ತಿದ್ದು ದೀಪದ ಬೆಳಕಲ್ಲಿ ಓದುವುದು ಮಕ್ಕಳಿಗೆ ತಪ್ಪದ ಶಿಕ್ಷೆ ಎನ್ನುವಂತಾಗಿದೆ.

ರಾಜ್ಯ ಸರ್ಕಾರ ಬಡ ಕುಟುಂಬಗಳಿಗೆ ಅನುಕೂಲವಾಗಲೀ ಎನ್ನುವ ಉದ್ದೇಶದಿಂದ ಉಚಿತ ವಿದ್ಯುತ್ ಗ್ಯಾರೆಂಟಿ ಯೋಜನೆ ಘೋಷಿಸಿದೆಯಾದರೂ ಈ ಹಳ್ಳಿಗಳ ಜನರಿಗೆ ವಿದ್ಯುತ್ ಸೌಲಭ್ಯ ಒದಗಿಸುವ ಪ್ರಯತ್ನ ಮಾತ್ರ ನಡೆದಿಲ್ಲ. ಅಲ್ಲದೇ ಬೆಳಕು ಯೋಜನೆಯಡಿ ಪ್ರತಿ ಮನೆಗೆ ವಿದ್ಯುತ್ ಒದಗಿಸುವ ಕಾರ್ಯಕ್ರಮ ಇದೆಯಾದರೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಈ ಯೋಜನೆ ಸಮರ್ಪಕವಾಗಿ ಜಾರಿಯಾಗಿಲ್ಲ ಎಂಬುದು ಸ್ಥಳೀಯ ನಿವಾಸಿಗಳ ಆರೋಪವಾಗಿದೆ.

ಇದನ್ನೂ ಓದಿ: Money Guide : ಓಪನ್‌ ಎಂಡೆಡ್‌, ಕ್ಲೋಸ್ಡ್ ಎಂಡೆಡ್‌ ಮ್ಯೂಚುವಲ್‌ ಫಂಡ್‌ ಎಂದರೇನು, ಯಾವುದು ಬೆಸ್ಟ್?

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ರಾಜ್ಯಕ್ಕೆ ಕರೆಂಟ್ ಕೊಡುವ ಉತ್ತರಕನ್ನಡ ಜಿಲ್ಲೆಯಲ್ಲಿ ಒಂದೇ ಒಂದು ಮನೆಗೆ ವಿದ್ಯುತ್ ಸಂಪರ್ಕ ಇಲ್ಲ ಎಂದರೂ ಸಹ ನೋವಾಗುತ್ತದೆ. ಜಿಲ್ಲೆಯಲ್ಲಿ ಸುಮಾರು 6 ಗ್ರಾಮಗಳ ಪೈಕಿ 1680 ಮನೆಗಳಿಗೆ ಇದುವರೆಗೂ ಸಹ ವಿದ್ಯುತ್ ಸಂಪರ್ಕವೇ ಇಲ್ಲ. ಸ್ವಾತಂತ್ರ್ಯ ಬಂದು 77 ವರ್ಷಗಳಾದರೂ ಎಲ್ಲ ಮನೆಗಳಿಗೆ ಕರೆಂಟ್ ಕೊಡುವಲ್ಲಿ ವಿಫಲವಾಗಿರುವುದು ಜನಪ್ರತಿನಿಧಿಗಳಾದ ನಾವೇ ಯೋಚನೆ ಮಾಡಬೇಕಾಗಿದೆ. ಹೀಗಾಗಿ ಯಾರ ಮೇಲೂ ತಪ್ಪು ಹೊರಿಸದೇ ಎಲ್ಲ ಮನೆಗಳಿಗೆ ಶೀಘ್ರದಲ್ಲಿ ಕರೆಂಟ್ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: Trent Boult: ಟ್ರೆಂಡ್​ ಆದ ಟ್ರೆಂಟ್ ಬೌಲ್ಟ್ ಫ್ಲೈಯಿಂಗ್‌ ಕ್ಯಾಚ್​; ವಿಡಿಯೊ ವೈರಲ್​

ರಾಜ್ಯ ಸರ್ಕಾರ ಹಲವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಉತ್ತರಕನ್ನಡ ಜಿಲ್ಲೆಯಲ್ಲಿ ಒಂದೂವರೆ ಸಾವಿರಕ್ಕೂ ಅಧಿಕ ಮನೆಗಳಿಗೆ ಮೂಲಭೂತ ಸೌಲಭ್ಯವಾದ ವಿದ್ಯುತ್ ಸೌಲಭ್ಯ ತಲುಪದಿರುವುದು ನಿಜಕ್ಕೂ ದುರಂತವೇ. ಇನ್ನಾದರೂ ಸರ್ಕಾರ ಬೆಳಕು ಯೋಜನೆಯಲ್ಲಿ ವಿದ್ಯುತ್ ಇಲ್ಲದ ಮನೆಗಳಿಗೆ ಕರೆಂಟ್ ನೀಡಿ ಹಳ್ಳಿ ಜನರ ಬಾಳಿಗೆ ಬೆಳಕು ತರಲಿದೆಯೇ ಎನ್ನುವುದನ್ನು ಕಾದುನೋಡಬೇಕಿದೆ.

Exit mobile version