Site icon Vistara News

Uttara Kannada News: ಗ್ಯಾರಂಟಿಗಳ ಅನುಷ್ಠಾನಕ್ಕೆ ಕಾಲಾವಕಾಶಬೇಕಿದೆ: ಮಾಜಿ ಸಚಿವ ಆರ್.ವಿ. ದೇಶಪಾಂಡೆ

Former Minister R V Deshpande pressmeet

ಯಲ್ಲಾಪುರ: ನಾವು ಘೋಷಿಸಿದ ಗ್ಯಾರಂಟಿಗಳನ್ನು (Guarantees) ಒಮ್ಮೆಲೇ ಜಾರಿ ತರಲು ಸಾಧ್ಯವಿಲ್ಲ. ಅವುಗಳಿಗೆ ಅನುಷ್ಠಾನಕ್ಕೆ (Implementation) ಕಾಲಾವಕಾಶಬೇಕಿದೆ. ಆದರೆ ಕೊಟ್ಟ ಮಾತಿಗೆ ತಪ್ಪದೆ ಎಲ್ಲವನ್ನು ಜಾರಿ ಮಾಡಿಯೇ ತೀರುತ್ತೇವೆ ಎಂದು ಹಳಿಯಾಳ ಶಾಸಕ ಹಾಗೂ ಮಾಜಿ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.

ಪಟ್ಟಣದ ಅರಣ್ಯ ಇಲಾಖೆಯ ಐಬಿಯಲ್ಲಿ ಕಾರ್ಯಕರ್ತರ ಅಹವಾಲುಗಳ್ನು ಸ್ವೀಕರಿಸಲು ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿಗಳ ಜಾರಿ ಜನಸಾಮಾನ್ಯರ ಜೀವನದ ಮೇಲೆ ಪ್ರಭಾವ ಬೀರಿದೆ. ಹೊಸತರಲ್ಲಿ ಯೋಜನೆಗಳು ಜಾರಿಗೆ ಬಂದಾಗ ಲೋಪದೋಷಗಳಾಗುವುದು ಸಹಜ. ಅವುಗಳನ್ನು ತಿದ್ದುಕೊಳ್ಳುವ ಸಮಯಾವಕಾಶವಿದೆ. ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ದೊರಕಿರುವುದರಿಂದ ನಿತ್ಯ ಸಂಚರಿಸುವ ವಿದ್ಯಾರ್ಥಿಗಳು, ಜನರಿಗೆ ತೊಂದರೆಯಾಗುತ್ತಿರುವುದನ್ನು ಗಮನಿಸಿದ್ದೇನೆ. ಇದನ್ನು ಸಿಎಂ ಗಮನಕ್ಕೆ ಸಹ ತಂದಿರುತ್ತೇನೆ. ಈ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದರು.

ಇದನ್ನೂ ಓದಿ: Puneeth Rajkumar: ಶ್ರೀರಂಗಪಟ್ಟಣದಲ್ಲಿ ಅಪ್ಪು ಅಭಿಮಾನಿಗಳ ʼಗಂಧದ ಗುಡಿʼ ಹೋಟೆಲ್‌ ಶುರು

ಅಂಕೋಲಾ-ಹುಬ್ಬಳ್ಳಿ ರೈಲು ಮಾರ್ಗ ಬಹುದಶಕಗಳ ಕನಸಾಗಿದೆ. ಇದು ಆದಷ್ಟು ಬೇಗ ನನಸಾಗಬೇಕು ಎಂಬುದು ನಮ್ಮ ಆಶಯ. ಹೀಗಾಗಿ ನಮ್ಮ ಸರ್ಕಾರದಿಂದ ಅಗತ್ಯವಿರುವ ಎಲ್ಲ ಸಹಕಾರವನ್ನು ನೀಡಲು ಸಿದ್ದರಾಗಿದ್ದೇವೆ. ವಿವಿಧ ನಿಗಮಗಳಿಗೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸಂಪೂರ್ಣವಾಗಿ ಸಿಎಂ ಹಾಗೂ ಹೈಕಮಾಂಡ್‌ ನಿರ್ಣಯಿಸಲಿದ್ದು, ಈ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಈ ಭೇಟಿ ಸಂಪೂರ್ಣವಾಗಿ ಪಕ್ಷದ ಸಂಘಟನೆಗಾಗಿ ಹೊರತು ಲೋಕಸಭಾ ಚುನಾವಣೆಯ ದೃಷ್ಠಿಯಿಂದಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: World Cup 2023 : ವೇಳಾಪಟ್ಟಿ ಪ್ರಕಟಗೊಂಡಿದ್ದರೂ ಪಾಕಿಸ್ತಾನ ತಂಡ ಬರುವುದು ಖಾತರಿಯಿಲ್ಲ!

ಈ ಸಂದರ್ಭದಲ್ಲಿ ಮಾಜಿ ಶಾಸಕ ವಿ.ಎಸ್.‌ ಪಾಟೀಲ್‌, ಮುಖಂಡ ಶ್ರೀನಿವಾಸ್‌ ಭಟ್‌ ಧಾತ್ರಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಡಿ.ಎನ್.‌ ಗಾಂವ್ಕರ್‌, ಮತ್ತಿತರರಿದ್ದರು.

Exit mobile version