Site icon Vistara News

Uttara Kannada News: ಹೊನ್ನಾವರದ ಟೊಂಕಾ ಕಾಸರಕೋಡು ಬೀಚ್‌ನಲ್ಲಿ 2 ತಿಮಿಂಗಿಲಗಳ ಕಳೇಬರ ಪತ್ತೆ

Uttara Kannada News Two Whale carcass found at Tonka Kasarakodu Beach at Honnavar

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ (Honnavar) ತಾಲೂಕಿನ ಕಡಲತೀರದಲ್ಲಿ (Beach) ಶನಿವಾರ ಎರಡು ತಿಮಿಂಗಿಲಗಳ ಕಳೇಬರ (Three Whale carcass) ಪತ್ತೆಯಾಗಿವೆ. ಇದರಿಂದ ಹೊನ್ನಾವರದ ಅರಬ್ಬೀ ಸಮುದ್ರ ವ್ಯಾಪ್ತಿಯಲ್ಲಿ ಒಂದೇ ವಾರದ ಅಂತರದಲ್ಲಿ ಮೂರು ತಿಮಿಂಗಿಲ (ಎರಡು ಭಾರೀ ಗಾತ್ರದ ಹಾಗೂ ಒಂದು ಮರಿ) ಕಳೇಬರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಪತ್ತೆಯಾಗಿರುವುದು ಕಡಲ ಶಾಸ್ತ್ರಜ್ಞರ ಕಳವಳಕ್ಕೂ ಕಾರಣವಾಗಿದೆ.

ಕಳೆದ ಭಾನುವಾರ ಹೊನ್ನಾವರದ ಮುಗಳಿ ಬೀಚ್‌ನಲ್ಲಿ ಸುಮಾರು 35 ಮೀ. ಉದ್ದದ ತಿಮಿಂಗಿಲ ಮೃತಪಟ್ಟು ಹಲವು ದಿನಗಳಾಗಿ ಕೊಳೆತ ಬಳಿಕ ಸಮುದ್ರದ ಅಲೆಗಳ ಹೊಡೆತಕ್ಕೆ ದಡಕ್ಕೆ ತೇಲಿ ಬಂದಿತ್ತು. ಹೊನ್ನಾವರ ಕರಾವಳಿ ಕಾವಲು ಪಡೆಯ ಸಿಬ್ಬಂದಿ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅದರಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಳೆಬರವನ್ನ ಪರಿಶೀಲಿಸಿ ಮರಣೋತ್ತರ ಪರೀಕ್ಷೆಗೆ ನೀಡಿದ್ದರು.

ಇದೀಗ ಶನಿವಾರ ಬೆಳಗ್ಗೆ ಹೊನ್ನಾವರದ ಟೊಂಕಾ ಕಾಸರಕೋಡು ಬೀಚ್‌ನಲ್ಲಿ ಹೆಣ್ಣು ತಿಮಿಂಗಿಲದ ಕಳೇಬರ ಪತ್ತೆಯಾಗಿದೆ. ಇದು ಕೂಡ ಭಾರೀ ಗಾತ್ರದ್ದಾಗಿದ್ದು, ಸುಮಾರು 25 ಮೀ. ಉದ್ದವಿದೆ. ಆದರೆ ಅರಣ್ಯಾಧಿಕಾರಿಗಳು ಹಾಗೂ ಕಡಲ ವಿಜ್ಞಾನಿಗಳು ಪರಿಶೀಲನೆಗೆ ತೆರಳಿದ್ದ ವೇಳೆ ಈ ಹೆಣ್ಣು ತಿಮಿಂಗಿಲ ಸಿಕ್ಕ ಅನತಿ ದೂರದಲ್ಲೇ ಇನ್ನೊಂದು ಮರಿ ತಿಮಿಂಗಿಲದ ಕಳೇಬರ ಸಿಕ್ಕಿದೆ ಎನ್ನಲಾಗಿದೆ. ಸದ್ಯ ಇವೆರಡೂ ತಿಮಿಂಗಿಲಗಳ ಕಳೇಬರವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗುತ್ತಿದ್ದು, ಮರಣೋತ್ತರ ಪರೀಕ್ಷಾ ವರದಿಯ ಬಳಿಕ ಸಾವಿಗೆ ನಿಖರ ಕಾರಣ ತಿಳಿದುಬರಬೇಕಿದೆ.

ಇದನ್ನೂ ಓದಿ: Weather report : ರಾಜ್ಯದ 6 ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆ!

ತಿಮಿಂಗಿಲಗಳ ಸಾವು ಗಂಭೀರ ವಿಚಾರ

ಈ ಬಗ್ಗೆ ಕಡಲ ಜೀವಶಾಸ್ತ್ರಜ್ಞ ಡಾ. ಶಿವಕುಮಾರ್ ಹರಗಿ ಮಾಹಿತಿ ನೀಡಿ, ತಿಮಿಂಗಿಲಗಳ ಕಳೇಬರ ಪೂರ್ತಿ ಕೊಳೆತಿರುವ ಕಾರಣ ಸಾವಿಗೆ ಕಾರಣವೇನೆಂದು ತಿಳಿದುಬರುತ್ತಿಲ್ಲ. ಆದರೆ ಒಂದೇ ವಾರದಲ್ಲಿ ಮೂರು ಕಳೇಬರ ದೊರೆತಿರುವುದು ಗಂಭೀರವಾಗಿದ್ದು, ಅಧ್ಯಯನ ಮಾಡಬೇಕಿದೆ ಎಂದಿದ್ದಾರೆ. ಸಿಕ್ಕ ಮೂರೂ ತಿಮಿಂಗಿಲಗಳು ಬಲೀನ್ ವ್ಹೇಲ್ ಜಾತಿಯದ್ದಾಗಿವೆ. ಸತ್ತು ಮೂರ್ನಾಲ್ಕು ದಿನಗಳ ಬಳಿಕ ಕಡಲತೀರಕ್ಕೆ ಬಂದಿವೆ. ಇವು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಶೆಡ್ಯೂಲ್ 1ರಲ್ಲಿ ಬರುವ ಕಾರಣ ಇವುಗಳ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಅಧ್ಯಯನ ನಡೆಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Job News : ಅರಣ್ಯ ಇಲಾಖೆಯಲ್ಲಿ 310 ವೀಕ್ಷಕ ಹುದ್ದೆ ಭರ್ತಿ; ಅರ್ಜಿ ಸಲ್ಲಿಕೆ ಹೇಗೆ, ಕೊನೇ ದಿನಾಂಕ ಎಂದು?

ತಿಮಿಂಗಿಲಗಳದ್ದು ಈಗ ಮಿಲನದ ಸಮಯ. ಗಂಡು, ಹೆಣ್ಣು ಹಾಗೂ ಮರಿಗಳ ಕಳೇಬರ ದೊರೆತಿರುವುದರಿಂದ ಇವು ಮಿಲನಕ್ಕೆಂದು ಶಾಂತ ಸಮುದ್ರಕ್ಕೆ ಬಂದಾಗ ಯಾವುದೋ ಬೃಹತ್ ಹಡಗು ಡಿಕ್ಕಿಯಾಗಿ ಸಾವನ್ನಪ್ಪಿರಬಹುದು. ಆದರೆ ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯಬೇಕಿದೆ ಎಂದು ಕಡಲ ವಿಜ್ಞಾನಿ ಡಾ.ಪ್ರಕಾಶ್ ಮೇಸ್ತಾ ತಿಳಿಸಿದ್ದಾರೆ.

Exit mobile version