ಯಲ್ಲಾಪುರ: ಯಾವುದು ಎಂದಿಗೂ ನಷ್ಟವಾಗುವುದಿಲ್ಲವೋ ಅದು ಜ್ಞಾನ (knowledge). ಹೊಸದನ್ನು ಕಲಿಯುವ (Learning) ತವಕ ನಮ್ಮನ್ನು ಸದಾ ಕ್ರಿಯಾಶೀಲರನ್ನಾಗಿಸಿ ಇರಿಸುತ್ತದೆ ಎಂದು ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ, ಶಿರಸಿ ಮಾರಿಕಾಂಬ ಪ್ರೌಢಶಾಲೆಯ ಶಿಕ್ಷಕ ನಾರಾಯಣ ಭಾಗ್ವತ್ ಹೇಳಿದರು.
ಪಟ್ಟಣದ ವೈಟಿಎಸ್‌ಎಸ್ ಶಿಕ್ಷಣ ಸಂಸ್ಥೆಯಲ್ಲಿ ಜರುಗಿದ ವಿದ್ಯಾರ್ಥಿ ಸಂಸತ್ತು, ಸಾಂಸ್ಕೃತಿಕ, ಕ್ರೀಡಾ ಹಾಗೂ ಎನ್.ಎಸ್.ಎಸ್. ಕಾರ್ಯಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಶಸ್ಸು ಎನ್ನುವುದು ಯಾರಿಗೂ ಶಾಶ್ವತವಲ್ಲ. ಯಾರು ವೇಗವಾಗಿರುತ್ತಾರೋ ಅವರನ್ನು ಮಾತ್ರ ಜಗತ್ತು ಗುರುತಿಸುತ್ತದೆ. ಹೀಗಾಗಿ ಜಗತ್ತಿನ ವೇಗಕ್ಕೆ ನಾವು ಸರಿಯಾಗಿ ಬೆಳೆಯಬೇಕು ಎಂದು ಹೇಳಿದರು.
ಇದನ್ನೂ ಓದಿ: MiG-29: ಪಾಕ್- ಚೀನಾ ಬೆದರಿಕೆಗೆ ಭಾರತದ ಉತ್ತರ; ಶ್ರೀನಗರದಲ್ಲಿ ಮಿಗ್- 29 ಸ್ಕ್ವಾಡ್ರನ್
ಜ್ಞಾನ ಎನ್ನುವುದು ಕೇವಲ ಅಂಕಕ್ಕಾಗಿ ಅಲ್ಲ. ಅಂಕದ ಜತೆಗೆ, ವಿದ್ಯಾರ್ಥಿ ಬದುಕಿನ ಅನ್ವೇಷಣೆಗಳಿಗೂ ಮಹತ್ವ ನೀಡಬೇಕು. ಮಾನವನ ಬದುಕನ್ನು ಉತ್ತಮಪಡಿಸಬಲ್ಲ ಅನ್ವೇಷಣೆಗಳಾಗಬೇಕು. ಅಂದಾಗ ಮಾತ್ರ ನಿಮ್ಮ ಯಶಸ್ಸಿಗೆ ಜಗತ್ತು ಬೆಲೆ ನೀಡುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಾಲೆಯ ಮಾಜಿ ವಿದ್ಯಾರ್ಥಿ ಹಾಗೂ ಇಂಗ್ಲೆಂಡಿನ ಪ್ರತಿಷ್ಠಿತ ರೊಬೋಟಿಕ್ ಸರ್ಜನ್ ಡಾ. ಇರ್ಷಾದ್ ಎ. ಶೇಖ್ ಮಾತನಾಡಿ, ಜೀವನದಲ್ಲಿ ವಿದ್ಯಾರ್ಥಿ ಜೀವನದ ವಾತಾವರಣವನ್ನು ಎಂದಿಗೂ ಮರೆಯಬಾರದು. ನಾವು ಕಲಿಯುವಾಗ ಯಾವುದೇ ಕಂಪ್ಯೂಟರ್ ಇರಲಿಲ್ಲ. ಎಲ್ಲಾ ಗೆಳೆಯರು ಯಾವುದೇ ಜಾತಿ, ಬೇಧ ಭಾವವಿಲ್ಲದೆ ಒಟ್ಟಿಗೆ ಅಭ್ಯಾಸ ಮಾಡುತ್ತಿದ್ದೆವು. ಅಂತಹ ಸುಂದರ ವಾತಾವರಣವನ್ನು ವೈ.ಟಿ.ಎಸ್.ಎಸ್. ನಮಗೆ ಒದಗಿಸಿತ್ತು.
ನಾನು ಇಂದು ಜಗತ್ತಿನ ಅದೆಷ್ಟೋ ಡಾಕ್ಟರ್‌ಗಳಿಗೆ ಪಾಠ ನೀಡಿದ್ದೇನೆ. ಆದರೂ ಸಹ ನನಗೆ ಕಲಿಸಿದಂತಹ ಶಿಕ್ಷಕರು, ಕಲಿತ ಶಾಲೆಯನ್ನು ಎಂದಿಗೂ ಮರೆಯುವುದಿಲ್ಲ. ನೀವು ಏನೇ ಸಾಧನೆ ಮಾಡಿದ್ದರೂ, ಅದಕ್ಕೆ ಮೂಲ ನಿಮ್ಮ ಶಾಲೆಯೇ ಆಗಿರುತ್ತದೆ. ಅಲ್ಲಿಯೇ ನಿಮ್ಮ ನಿಜವಾದ ಬೆಳೆವಣಿಗೆ ಆಗುವಂತದ್ದು. ಆತ್ಮಾವಲೋಕನ ಸತತವಾಗಿದ್ದಾಗ ಮಾತ್ರ ಯಶಸ್ಸು ಕಾಣಬಹುದು ಎಂದರು.
ಇದನ್ನೂ ಓದಿ: IND vs WI: ಭಾರತದ ಸರಣಿ ಸಮಬಲದ ಯೋಜನೆಗೆ ಮಳೆ ಅಡ್ಡಿ ಸಾಧ್ಯತೆ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ರವಿಕುಮಾರ ಶಾನಭಾಗ್ ಮಾತನಾಡಿದರು. ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕರಾದ ನಾಗರಾಜ ಮದ್ಗುಣಿ ಹಾಗೂ ಸುರೇಶ್ ಪೈ, ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶೈಲಜಾ ಮಾಪ್ಸೇಕರ್, ವಿದ್ಯಾರ್ಥಿ ಪ್ರತಿನಿಧಿಗಳು ಇದ್ದರು.
ದೈಹಿಕ ಶಿಕ್ಷಕ ಗಂಗಾ ನಾಯಕ ಪ್ರತಿಜ್ಞಾ ವಿಧಿ ಬೋಧಿಸಿದರು. ನಯನಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಕಾಲೇಜಿನ ಪ್ರಾಂಶುಪಾಲ ಆನಂದ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ವಿನೋದ ಭಟ್ ನಿರೂಪಿಸಿದರು. ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎನ್. ಎಸ್. ಭಟ್ ವಂದಿಸಿದರು.