Site icon Vistara News

ಸ್ವಚ್ಛತಾ ನಡಿಗೆ | ಪಹರೆ ವೇದಿಕೆಯ ಸ್ವಚ್ಛತಾ ಕಾರ್ಯಕ್ರಮಕ್ಕೆ 8 ವರ್ಷ; ಜ.22ರಂದು ಕಾರವಾರದಿಂದ ಗೋವಾಕ್ಕೆ ಸ್ವಚ್ಛತಾ ನಡಿಗೆ

Harekala Hajabba Padma Shri awardee Cleanliness Walk karwar

ಕಾರವಾರ: ಪಹರೆ ವೇದಿಕೆಯ ಸ್ವಚ್ಛತಾ ಕಾರ್ಯಕ್ರಮವು 8ನೇ ವರ್ಷ ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಜ. 22 ರಂದು ಕಾರವಾರದಿಂದ ಗೋವಾಕ್ಕೆ ಸ್ವಚ್ಛತಾ ನಡಿಗೆ (ಸ್ವಚ್ಛತಾ ನಡಿಗೆ) ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಪಹರೆ ವೇದಿಕೆಯ ಸಂಸ್ಥಾಪಕ ನಾಗರಾಜ ನಾಯಕ ಹೇಳಿದರು.

ಕಾರವಾರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 22 ರ ಭಾನುವಾರದಂದು ಬೆಳಗ್ಗೆ 6 ಗಂಟೆಗೆ ಸುಭಾಷ್ ಸರ್ಕಲ್‌ನಿಂದ ಗೋವಾ ಗಡಿಯವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಗೋವಾದಲ್ಲಿ ಸಮಾವೇಶವನ್ನೂ ನಡೆಸಲಿದ್ದೇವೆ. ಸುಭಾಷ್‌ ವೃತ್ತದ ಬಳಿಯಿಂದ ಆರಂಭವಾಗಲಿರುವ ಪಾದಯಾತ್ರೆಯಲ್ಲಿ ಹಾಜಬ್ಬ ಅವರು ಪಾಲ್ಗೊಳ್ಳಲಿದ್ದಾರೆ. ನಂತರ ಗೋವಾ ಗಡಿಯಲ್ಲಿ ನಡೆಯಲಿರುವ ಸಮಾರಂಭದಲ್ಲೂ ಭಾಗವಹಿಸಲಿದ್ದಾರೆ. ಸ್ವಚ್ಛತಾ ನಡಿಗೆಯಲ್ಲಿ ಒಳಗೊಳ್ಳುವ ಗ್ರಾಮಗಳಲ್ಲಿ ಸ್ವಚ್ಛತೆಯ ಅರಿವನ್ನು ಮೂಡಿಸುವ ಕಾರ್ಯ ಮಾಡಲಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ | ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ: ಫೆಬ್ರವರಿ 21ರಂದು ರಾಜ್ಯಾದ್ಯಂತ ಸರ್ಕಾರದಿಂದ ದಾಸೋಹ ದಿನ: ಸಿಎಂ ಬೊಮ್ಮಾಯಿ

ಕಿತ್ತಳೆ ಹಣ್ಣುಗಳನ್ನು ಮಾರಾಟ ಮಾಡಿ ಬಂದ ಹಣ ಹಾಗೂ ದಾನಿಗಳಿಂದ ಸಂಗ್ರಹಿಸಿದ ಹಣದಲ್ಲಿ ತಮ್ಮ ಹುಟ್ಟೂರಾದ ದಕ್ಷಿಣ ಕನ್ನಡದ ಹರೇಕಳ ನ್ಯೂಪಡ್ಪು ಬಳಿ ಶಾಲೆಯನ್ನು ನಿರ್ಮಿಸಿ ದೇಶದ ಗಮನ ಸೆಳೆದ ಹಾಜಬ್ಬ ಪಹರೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ ಎಂದು ಪಹರೆ ವೇದಿಕೆಯ ಅಧ್ಯಕ್ಷ ನಾಗರಾಜ ನಾಯಕ ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ | Vande Bharat Express: ದೇಶದ 7ನೇ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲಿನ ಮೇಲೆ ಮತ್ತು ಕಲ್ಲು ತೂರಾಟ; ಪುಡಿಯಾಯ್ತು ಗಾಜು

ಈಗಾಗಲೇ ಮಾರ್ಗ ವ್ಯಾಪ್ತಿಯ ಪ್ರಮುಖರನ್ನು ಭೇಟಿಯಾಗಿ ಸಹಕಾರ ಕೇಳಿದ್ದೇವೆ. ವಿದ್ಯಾರ್ಥಿಗಳು, ಇತರ ಸಂಘ- ಸಂಸ್ಥೆಗಳ ಸದಸ್ಯರು ಕೂಡ ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಸ್ವಚ್ಛತೆಯ ಉದ್ದೇಶದಿಂದ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸ್ವಚ್ಛತೆಯ ಸಂದೇಶವನ್ನು ಇಡೀ ದೇಶಕ್ಕೆ ಸಾರಬೇಕಿದೆ. ನಗರ, ಹಳ್ಳಿ ಪ್ರದೇಶಗಳು ಸ್ವಚ್ಛಗೊಳ್ಳುತ್ತಿವೆ. ಆದರೆ ರಾಷ್ಟ್ರೀಯ ಹೆದ್ದಾರಿಗಳು ಅಸ್ವಚ್ಛತೆಯಿಂದ ಕೂಡಿರುತ್ತಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಸ್ವಚ್ಛಗೊಳಿಸುವ ಅಭಿಯಾನವನ್ನೂ ಹಮ್ಮಿಕೊಳ್ಳಲಿದ್ದೇವೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಪ್ರಮುಖರಾದ ಕೆ.ಡಿ.ಪೆಡ್ನೇಕರ್, ಅಜಯ್ ಸಾಹುಕಾರ, ಸದಾನಂದ ಮಾಂಜ್ರೇಕರ್ ಹಾಗೂ ಶಿವಾನಂದ ಶಾನಭಾಗ ಇದ್ದರು.

ಇದನ್ನೂ ಓದಿ | RRR Movie | 2023ರ ಆಸ್ಕರ್‌ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿಗೆ ನಾಮನಿರ್ದೇಶನಗೊಂಡರಾ ಜೂ.ಎನ್‌ಟಿಆರ್‌?

Exit mobile version