ಶಿರಸಿ: ಬೆಳಕೇ ಇಲ್ಲದ, ಬೆಳಕಿದ್ದೂ ಮಳೆಗಾಲದಲ್ಲಿ ನಿರಂತರ ವಿದ್ಯುತ್ ಪೂರೈಕೆ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದ ಪ್ರತಿಭಾವಂತ ಮಕ್ಕಳಿದ್ದ 10 ಮನೆಗಳಿಗೆ ಕರ್ಣಾಟಕ ಬ್ಯಾಂಕ್ ಹಾಗೂ ಭಾರತೀಯ ವಿಕಾಸ ಟ್ರಸ್ಟ್ ಸಹಯೋಗದಲ್ಲಿ ಸೆಲ್ಕೋ ಸೋಲಾರ್ ಸಂಸ್ಥೆ ಬೆಳಕಿನ ಭಾಗ್ಯ ಒದಗಿಸಿದೆ.
ಶಿರಸಿ, ಸಿದ್ದಾಪುರ, ಯಲ್ಲಾಪುರ, ಅಂಕೋಲಾ ತಾಲೂಕಿನ ಹತ್ತು ಕುಟುಂಬಗಳಿಗೆ ಸೌರ ವಿದ್ಯುತ್ ಕೊಡಲಾಗುತ್ತಿದೆ. ಗಣೇಶ ಹಬ್ಬದ ಮೊದಲೇ ಐದಕ್ಕೂ ಅಧಿಕ ಕುಟುಂಬಗಳಿಗೆ ಸೌರ ಬೆಳಕು ನೀಡಲಾಗಿದ್ದು, ಮಾಸಾಂತ್ಯದೊಳಗೆ ಉಳಿದ ಫಲಾನುಭವಿ ಮನೆಗಳಿಗೂ ಸೆಲ್ಕೋ ಸೌರ ಬೆಳಕು ಬೆಳಗಲಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ವಿಶ್ವಶಾಂತಿ ಸೇವಾ ಟ್ರಸ್ಟ್ ಕರ್ನಾಟಕ ನಡೆಸಿದ ನಮ್ಮನೆ ಹಬ್ಬದ ದಶಮಾನೋತ್ಸವದಲ್ಲಿ ನಮ್ಮನೆ ಪ್ರಶಸ್ತಿ ಸ್ವೀಕರಿಸಿದ್ದ ಸೆಲ್ಕೋ ಇಂಡಿಯಾದ ಸಿಇಒ ಮೋಹನ ಭಾಸ್ಕರ ಹೆಗಡೆ ಅವರು ಟ್ರಸ್ಟ್ ಆಯ್ಕೆ ಮಾಡಿಕೊಟ್ಟ ಓದುವ ಮಕ್ಕಳಿರುವ ಐದು ಕುಟುಂಬಗಳಿಗೆ ಉಚಿತವಾಗಿ ಸೌರ ಬೆಳಕಿನ ನೆರವು ಒದಗಿಸುವುದಾಗಿ ಪ್ರಕಟಿಸಿದ್ದರು. ವಿದ್ಯುತ್ ಇಲ್ಲದ ಅಥವಾ ಕೊರತೆ ಅನುಭವಿಸುತ್ತಿರುವ ಕುಟುಂಬಗಳಿಗೆ ನಮ್ಮನೆ ಹಬ್ಬದ ಬೆಳಕಾಗಿಸುವ ಭರವಸೆ ನೀಡಿದ್ದರು. ಆ ಬೆಳಕಿನ ಯೋಜನೆ ಕರ್ಣಾಟಕ ಬ್ಯಾಂಕ್ ನೆರವಿನಲ್ಲಿ ಅನುಷ್ಠಾನಕ್ಕೆ ಬಂದಿದೆ. ಬರಲಿರುವ ಡಿಸೆಂಬರ್‌ನಲ್ಲಿ ನಡೆಯಲಿರುವ ಹನ್ನೊಂದನೇ ವರ್ಷದ ನಮ್ಮನೆ ಹಬ್ಬದೊಳಗೆ ಬೆಳಕಿನ ಭಾಗ್ಯ ಈಡೇರುತ್ತಿದೆ ಎಂಬುದು ವಿಶೇಷವಾಗಿದೆ.
ಇದನ್ನೂ ಓದಿ | ಸರಣಿ ಕಾರ್ಯಕ್ರಮ ರೂಪಿಸಿದ ಬಿಜೆಪಿ: ಸೆ.17ರಿಂದ ಅ.2 ರವರೆಗೆ ಸೇವಾ ಪಾಕ್ಷಿಕ
ಹೇಳಿದ್ದು ಐವರಿಗೆ, ಕೊಟ್ಟಿದ್ದು 10 ಕುಟುಂಬಕ್ಕೆ!
ಸೆಲ್ಕೊ ಸಂಸ್ಥೆಯ ಸಿಇಒ ಮೋಹನ ಹೆಗಡೆ ಅವರು ಕರ್ಣಾಟಕ ಬ್ಯಾಂಕ್ ಹಾಗೂ ಭಾರತೀಯ ವಿಕಾಸ ಟ್ರಸ್ಟ್, ಶಿಕ್ಷಣಕ್ಕಾಗಿ ಬೆಳಕು ಯೋಜನೆ ಅಡಿಯಯಲ್ಲಿ ಐದು ಕುಟುಂಬಗಳಿಗೆ ಬೆಳಕು ನೀಡುವ ಪ್ರಸ್ತಾಪ ಮಾಡಿದ್ದರು. ಆದರೆ, ಆಯ್ಕೆ ವೇಳೆ ಐದಕ್ಕಿಂತ ಅಧಿಕ ಕುಟುಂಬಗಳು ಸಿಕ್ಕ ಕಾರಣಕ್ಕೆ ಇನ್ನೂ ಹೆಚ್ಚುವರಿಯಾಗಿ ಒಟ್ಟು ಹತ್ತು ಕುಟುಂಬಗಳಿಗೆ ನೆರವಾಗುವ ವಾಗ್ದಾನ ನೀಡಿದರು. ಘೋಷಿಸಿದ್ದು ಐದು ಕುಟುಂಬಕ್ಕೆ ಬೆಳಕಾದರೂ ಈಗ ಹತ್ತು ಕುಟುಂಬಕ್ಕೆ ಬೆಳಕು ಸಿಗುತ್ತಿದೆ.
ಯಾರಿಗೆಲ್ಲ ಬೆಳಕಿನ ಸ್ಪರ್ಶ
ಶಿರಸಿ ನಗರದಿಂದ ದೂರ ಇರುವ ಶಿರಗುಣಿ ಸಮೀಪದ ರಾಯರಮನೆ ಮಂಜುನಾಥ ಗೌಡ, ಸುಮಿತ್ರಾ ಮರಾಠಿ ಬಾಳೆಕಾಯಿಮನೆ, ದಿನೇಶ ಅರಸಿಕೆರೆ, ರಮ್ಯಾ ಮರಾಠಿ ಬಾಳೆಕಾಯಿಮನೆ, ಶಿರಸಿ, ಕರಿಗುಂಡಿ ಸೀತಾ ಜೋಗಳೇಕರ್, ಸಿದ್ದಾಪುರದ ಕಲಾವಿದ, ಗೃಹೋದ್ಯೋಗಿ ವೆಂಕಟ್ರಮಣ ಹೆಗಡೆ ಮಾದಿನಕಳ್ಳು, ಯಲ್ಲಾಪುರ ಹೆಮ್ಮಾಡಿ ಸಿಂಧೂ ಮಧುಕೇಶ್ವರ ನಾಯ್ಕ, ಬನವಾಸಿ ಭಾಸಿ ಸಣ್ಮನೆ ಸಂದೇಶ ಕಾಳೇನರ್, ರಮ್ಯಾ ಬಂದಿಗೇರ ಸಣ್ಮನೆ, ಅಂಕೋಲಾದ ಅಚವೆ ತಿಮ್ಮಾ ಗೌಡ ಹುಡಗೋಡ ಕುಟುಂಬ ಆಯ್ಕೆ ಆಗಿದೆ. ಕರೆಂಟ್ ಇಲ್ಲದೇ ಮಕ್ಕಳಿಗೆ ಓದುವ ಸಮಸ್ಯೆ ಆಗುತ್ತಿತ್ತು. ಪರೀಕ್ಷೆ ಎದುರಿಗೇ ಕರೆಂಟ್ ಇರುತ್ತಿರಲಿಲ್ಲ, ಬೆಳಕು ನೀಡಿ ಉಪಕಾರ ಆಗಿದೆ ಎಂದು ಫಲಾನುಭವಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಕರ್ಣಾಟಕ ಬ್ಯಾಂಕ್ ಹಾಗೂ ಸೆಲ್ಕೋ ಸಂಸ್ಥೆಯ ನೆರವಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ.
ಗ್ರಾಮೀಣ ಭಾಗದಲ್ಲಿ ಸಾಂಸ್ಕೃತಿಕ ಚಟುವಟಿಕೆ ಉಳಿಸಬೇಕು ಎಂದು ಆರಂಭಿಸಿದ ನಮ್ಮನೆ ಹಬ್ಬ ಈಗ ಹತ್ತು ಕುಟುಂಬಗಳಿಗೆ ಕರ್ಣಾಟಕ ಬ್ಯಾಂಕ್ ಹಾಗೂ ಸೆಲ್ಕೊ ಸಂಸ್ಥೆಯ ಮೂಲಕ ಮನೆಗಳಿಗೆ ಬೆಳಕಾಗುತ್ತಿರುವದು ಖುಷಿ ತಂದಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ ಹೇಳಿದ್ದಾರೆ.
ನಮ್ಮನೆ ಹಬ್ಬದ ಅರ್ಥ ಪೂರ್ಣ ಯಶಸ್ಸು: ಮೋಹನ ಭಾಸ್ಕರ ಹೆಗಡೆ
ಕರ್ಣಾಟಕ ಬ್ಯಾಂಕ್ ಹಾಗೂ ಭಾರತೀಯ ವಿಕಾಸ ಟ್ರಸ್ಟ್ ಸಹಭಾಗಿತ್ವದಲ್ಲಿ ಶಿಕ್ಷಣಕ್ಕಾಗಿ ಬೆಳಕು ಯೋಜನೆ ಅನ್ವಯ ಈ ಕೆಲಸ ಆಗಿದೆ. ಬ್ಯಾಂಕ್‌ನ ಎಂ.ಡಿ. ಮಹಾಬಲೇಶ್ವರ ಅವರ ಅತ್ಯಂತ ಯಶಸ್ವಿ ಕನಸು ಇದು. ಬೆಳಕಿಲ್ಲದೇ ವಿದ್ಯಾಭ್ಯಾಸಕ್ಕಾಗಿ ಅವರು ಪಡುತ್ತಿರುವ ಶ್ರಮ ಇದರಿಂದ ಪರಿಹಾರ ಆಯಿತು ಎಂಬುದು ಸಮಾಧಾನ. ವಿಶ್ವ ಶಾಂತಿ ಧ್ಯೇಯದ ನಮ್ಮನೆ ಹಬ್ಬದ ಅರ್ಥ ಪೂರ್ಣ ಯಶಸ್ಸು ಇದು. ಸಾಂಸ್ಕೃತಿಕ ಕಾರ್ಯ ಎಂದರೆ ಕೇವಲ ರಂಜನೆ ಅಲ್ಲ, ಸಮಾಜದ ಸಂಕಟವನ್ನು ಅರಿಯಲು ಹಾಗೂ ಪರಿಹಾರ ದೊರಕಿಸಲು ಇರುವ ವೇದಿಕೆಯೂ ಆದುದು ಬೆಲೆ ಕಟ್ಟಲಾಗದ ನಿಜವಾದ ಯಶಸ್ಸು ಎಂದು ಸೆಲ್ಕೋ ಇಂಡಿಯಾ ಸಿಇಒ ಮೋಹನ ಭಾಸ್ಕರ ಹೆಗಡೆ ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ | ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡನೆಗೆ ಕಾನೂನು ತಜ್ಞರ ನೇಮಕ ಎಂದ ಬೊಮ್ಮಾಯಿ