Site icon Vistara News

Karnataka Election: ಮತದಾನ ಪ್ರಕ್ರಿಯೆಗೆ ಉತ್ತರಕನ್ನಡ ಸಕಲ ಸಿದ್ಧ, ಲೈವ್ ಮಾನಿಟರಿಂಗ್ ಕೂಡಾ ರೆಡಿ: ಜಿಲ್ಲಾಧಿಕಾರಿ

#image_title

ಕಾರವಾರ: ಸಾರ್ವತ್ರಿಕ ವಿಧಾನಸಭಾ ಚುನಾವಣಾ (Karnataka Election) ಮತದಾನಕ್ಕೆ ಉತ್ತರಕನ್ನಡ ಜಿಲ್ಲೆಯಲ್ಲಿ ಅಧಿಕಾರಿಗಳು ಅಂತಿಮ ಹಂತದ ಸಿದ್ಧತೆ ಮಾಡಿಕೊಂಡಿದ್ದಾರೆ. ಕಾರವಾರದ ಸೇಂಟ್ ಮೈಕಲ್ ಕಾನ್ವೆಂಟ್ ಶಾಲೆಯಲ್ಲಿ ಇರಿಸಿಲಾಗಿದ್ದ ಮತಪೆಟ್ಟಿಗೆಗಳನ್ನು ಪಡೆದ ಸಿಬ್ಬಂದಿ ಬಿಗಿ ಭದ್ರತೆಯಲ್ಲಿ ಆಯಾ ಮತಗಟ್ಟೆಗಳಿಗೆ ತೆರಳಿದರು.

ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಇವಿಎಂ ಹಾಗೂ ವಿವಿ ಪ್ಯಾಟ್ ಯಂತ್ರಗಳನ್ನು ಮಸ್ಟರಿಂಗ್ ಕೇಂದ್ರವಾಗಿದ್ದ ಕಾರವಾರ ನಗರದ ಸೇಂಟ್ ಮೈಕಲ್ ಕಾನ್ವೆಂಟ್ ಶಾಲೆಯಲ್ಲಿ ಇರಿಸಲಾಗಿತ್ತು. ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಅಧಿಕಾರಿಗಳು, ಪೊಲೀಸರು ಹಾಗೂ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡಿ ಬಳಿಕ ಇವಿಎಂ ಹಾಗೂ ವಿವಿಪ್ಯಾಟ್ ಯಂತ್ರಗಳನ್ನು ಪೊಲೀಸ್ ಭದ್ರತೆಯಲ್ಲಿ ನೀಡಲಾಯಿತು. ಅಲ್ಲದೆ ಮತಪೆಟ್ಟಿಗೆಗಳ ಸಾಗಾಟಕ್ಕೆ ಬಸ್ ವ್ಯವಸ್ಥೆ ಕೂಡ ಕಲ್ಪಿಸಿದ್ದು ಸಂಜೆ ವೇಳೆಗೆ ಅಧಿಕಾರಿಗಳು ಹಾಗೂ ಪೊಲೀಸರ ಸಮ್ಮುಖದಲ್ಲಿ ಆಯಾ ಮತಗಟ್ಟೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: Karnataka Election: ಜತೆಯಾಗಿ ಚಾಮುಂಡಿ ದರ್ಶನ ಪಡೆದ ಸಿದ್ದು-ಡಿಕೆಶಿ, ಗ್ಯಾರಂಟಿ ಪ್ರತಿ ಇಟ್ಟು ಪ್ರಾರ್ಥನೆ

ಇನ್ನು ಜಿಲ್ಲೆಯಲ್ಲಿ 5,99,527 ಪುರುಷರು, 5,95,180 ಮಹಿಳೆಯರು, 7 ಇತರೆ ಸೇರಿ ಒಟ್ಟೂ 11,94,714 ಮತದಾರರಿದ್ದಾರೆ. ಇದರಲ್ಲಿ 15,070 ವಿಶೇಷಚೇತನರು, 27,399 ಮಂದಿ 80 ವರ್ಷ ಮೇಲ್ಪಟ್ಟವರು ಸೇರಿ 42,469 ಮತದಾರರಿದ್ದು, ಅವರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ 4,801 ಮಂದಿ ಅಂಚೆ ಮತದಾನಕ್ಕೆ ಮನವಿ ಮಾಡಿದ್ದರು. ಅದರಂತೆ 4,582 ಮಂದಿ ಮತ ಚಲಾವಣೆ ಮಾಡಿದ್ದು ಶೇ. 95.43% ಮತದಾನವಾಗಿದೆ.

ಇನ್ನು ಜಿಲ್ಲೆಯಾದ್ಯಂತ ಒಟ್ಟೂ 1,122 ಸ್ಥಳಗಳಲ್ಲಿ 1,435 ಮತಯಂತ್ರಗಳನ್ನು ಸ್ಥಾಪನೆ‌ ಮಾಡಲಾಗಿದೆ. ಈ ಪೈಕಿ 287 ಸೂಕ್ಷ್ಮ ಮತಗಟ್ಟೆಗಳಾಗಿವೆ. 1435 ಮತಗಟ್ಟೆಗಳ ಪೈಕಿ 719 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಮೂಲಕ ಲೈವ್ ಮಾನಿಟರಿಂಗ್ ವ್ಯವಸ್ಥೆ ಅಳವಡಿಕೆ ಮಾಡಿದ್ದು, ಬೆಂಗಳೂರಿನ ಚುನಾವಣಾ ಕಚೇರಿಗೂ ಲೈವ್ ನೋಡುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾಹಿತಿ ನೀಡಿದರು.

ಇದನ್ನೂ ಓದಿ: Karnataka Election : ಉದ್ಧಟ ಇನ್‌ಸ್ಪೆಕ್ಟರ್‌ ಸಸ್ಪೆಂಡ್‌, ತಾಯಿ ಮೃತಪಟ್ಟರೂ ಕರ್ತವ್ಯಕ್ಕೆ ಬಂದ ಕಾನ್‌ಸ್ಟೆಬಲ್‌ಗೆ ಗೌರವ

ಮತದಾನದ ನಿಮಿತ್ತ 6,416 ಸಿಬ್ಬಂದಿ ನಿಯೋಜಿಸಲಾಗಿದ್ದು, ಚುನಾವಣಾ ಭದ್ರತೆಗೆ 1,352 ಮಂದಿ ಕರ್ನಾಟಕ ಪೊಲೀಸ್, 18 ಸಿ.ಎ‌.ಪಿ‌.ಎಫ್ ತುಕಡಿ, 6 ಕೆ.ಎಸ್.ಆರ್.ಪಿ ತುಕಡಿ ಹಾಗೂ 850 ಹೋಂಗಾರ್ಡ್ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಮಾಹಿತಿ ನೀಡಿದ್ದಾರೆ.

Exit mobile version