Site icon Vistara News

Arun Yogiraj : ರಾಮಲಲ್ಲಾ ವಿಗ್ರಹ ಕೆತ್ತಿದ ಅರುಣ್​ ಯೋಗಿರಾಜ್​ಗೆ ‘ಅಭಿನವ ಅಮರ ಶಿಲ್ಪಿ’ ಪುರಸ್ಕಾರ

D. hiremath foundation

ಬೆಂಗಳೂರು : ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಭವ್ಯ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾನೆಗೊಂಡಿರುವ ಬಾಲಕರಾಮನ (ರಾಮ ಲಲ್ಲಾ) ಮೂರ್ತಿಯನ್ನು ಕೆತ್ತಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಅವರಿಗೆ ಡಾ. ಹಿರೇಮಠ ಫೌಂಡೇಶನ್ ಹಾಗೂ ಕರ್ನಾಟಕ ರಾಜ್ಯ ಸನಾತನ ಧರ್ಮ ರಕ್ಷಣಾ ವೇದಿಕೆ ಸಹಯೋಗದಲ್ಲಿ “ಅಭಿನವ ಅಮರ ಶಿಲ್ಪಿ” ಬಿರುದು ಘೋಷಣೆಯಾಗಿದೆ. ಮಾರ್ಚ್‌ 4ರಂದು ಕಾರವಾರ ನಗರದ ಸಾಗರ್‌ ಕನ್ವೆನ್ಷನ್‌ ಹಾಲ್‌ನಲ್ಲಿ ನಡೆಯವ ಕಾರ್ಯಕ್ರಮದಲ್ಲಿ ಬಿರುದು ನೀಡಿ ಗೌರವಿಸಲಾಗುವುದು ಎಂದು ಡಾ. ಹಿರೇಮಠ ಫೌಂಡೇಶನ್​ನ ಸಂಸ್ಥಾಪಕ ಡಾ. ವಿಶ್ವನಾಥ ಹಿರೇಮಠ ಅವರು ಗುರುವಾರ (ಫೆಬ್ರವರಿ 22) ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.

“ರಾಮ ಮಂದಿರ ಭಾರತೀಯರ 500 ವರ್ಷಗಳ ಕನಸು. ಲಕ್ಷಾಂತರ ಕರಸೇವಕರ ಪರಿಶ್ರಮದ ಸಲುವಾಗಿ ಇಂದು ರಾಮ ಮಂದಿರ ಅಯೋಧ್ಯೆಯಲ್ಲಿ ತಲೆ ಎತ್ತಿ ನಿಂತಿದೆ. ರಾಮ ಮಂದಿರದಲ್ಲಿರುವ ಸುಂದರ ರಾಮ ಲಲ್ಲಾ ಮೂರ್ತಿಯ ಕೆತ್ತನೆ ಮಾಡಿರುವುದು ನಮ್ಮ ಕರ್ನಾಟಕದ ಮೈಸೂರಿನವರೇ ಆದ ಅರುಣ್‌ ಯೋಗಿರಾಜ್‌ ಅವರೆಂಬುದು ಕನ್ನಡಿಗರಾದ ನಮ್ಮೆಲ್ಲರಿಗೂ ಹೆಮ್ಮೆ. ಅವರನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರಕ್ಕೆ ಸ್ವಾಗತಿಸಿ ಸನ್ಮಾನಿಸಬೇಕೆಂಬುದು ನಮ್ಮ ಬಯಕೆಯಾಗಿದೆ,” ಎಂದು ಡಾ. ವಿಶ್ವನಾಥ್‌ ಹಿರೇಮಠ ಅವರು ಹೇಳಿದರು.

“ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷರು, ಪ್ರಖರ ವಾಗ್ಮಿ, ಹಿಂದೂ ಹುಲಿ ಎಂದು ಖ್ಯಾತಿ ಪಡೆದಿರುವ ಶ್ರೀ ಪ್ರಮೋದ್‌ ಮುತಾಲಿಕ್ ಅವರು ಈ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕರ್ನಾಟಕ ರಾಜ್ಯ ಸನಾತನ ಧರ್ಮ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಡಾ. ಗಜೇಂದ್ರ ನಾಯಕ್‌ ಅವರಲ್ಲದೆ ಹಲವು ಹಿಂದೂ ಮುಖಂಡರು ಈ ಕಾರ್ಯಕ್ರಮದಲ್ಲಿ ಹಾಜರಿರುತ್ತಾರೆ,” ಎಂದು ಅವರು ವಿವರಿಸಿದರು.

“”ಡಾ. ಹಿರೇಮಠ ಫೌಂಡೇಶನ್‌ ಮತ್ತು ಕರ್ನಾಟಕ ರಾಜ್ಯ ಸನಾತನ ಧರ್ಮ ರಕ್ಷಣಾ ವೇದಿಕೆಯ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದೆ. ಇದೇ ವೇಳೆ ಉತ್ತರ ಕನ್ನಡ ಜಿಲ್ಲೆಯ 200ಕ್ಕೂ ಹೆಚ್ಚಿನ ಧಾರ್ಮಿಕ ಕೇಂದ್ರಗಳ ಮುಖ್ಯಸ್ಥರಿಗೆ, ಅವರ ನಿಸ್ವಾರ್ಥ ಸೇವೆಗಾಗಿ ಅಭಿನಂದನಾ ಸಮಾರಂಭವನ್ನೂ ಹಮ್ಮಿಕೊಳ್ಳಲಾಗಿದೆ,” ಎಂದು ಡಾ. ವಿಶ್ವನಾಥ ಹಿರೇಮಠ ಅವರು ಮಾಹಿತಿ ನೀಡಿದರು.

ಇದನ್ನೂ ಓದಿ : Uttara Kannada News: ಸಾಧಿಸುವ ಛಲವಿದ್ದರೆ ಸಾಧನೆಯ ಹಾದಿ ಕಷ್ಟವಲ್ಲ: ಜಿ.ಪಂ ಸಿಇಒ ಈಶ್ವರ ಕಾಂದೂ

“ಡಾ. ಹಿರೇಮಠ ಫೌಂಡೇಶನ್ ಡಾ. ವಿಶ್ವನಾಥ ಹಿರೇಮಠ ಅವರ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ಸಾಮಾಜಿಕ ಕೆಲಸಗಳನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡಿಕೊಂಡು ಬರುತ್ತಿದೆ. ಯುವಕರ ಕೌಶಲ್ಯಾಭಿವೃದ್ಧಿ, ಮಹಿಳಾ ಸಬಲೀಕರಣ, ಆರೋಗ್ಯ ಮತ್ತು ಸ್ವಚ್ಛ ಉತ್ತರಕನ್ನಡ ಎಂಬ ಹಲವು ಕಾರ್ಯಕ್ರಮಗಳನ್ನು ನಡೆಲಾಗುತ್ತಿದೆ. ಇದೀಗ ಅಭಿನಂದನಾ ಸಮಾರಂಭದದ ಮೂಲಕ ಧಾರ್ಮಿಕತೆಯ ಸಾರವನ್ನು ಎತ್ತಿ ಹಿಡಿಯಲು ಹೊರಟಿದ್ದೇವೆ,” ಎಂದು ಫೌಂಡೇಷನ್​​ನ ಕಾರ್ಯದರ್ಶಿ ಲಕ್ಷ್ಮೀಶ ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಡಾ. ಹಿರೇಮಠ ಫೌಂಡೇಷನ್​​ನ ಪ್ರಧಾನ ಕಾರ್ಯದರ್ಶಿ ಚೇತನ್​ ಹಾಜರಿದ್ದರು.

Exit mobile version