Site icon Vistara News

Banavasi News: ಬನವಾಸಿಯ ಕೃಷಿ ಅಧಿಕಾರಿ ಡಿ.ಜಿ. ಪಟಗಾರ ನಿವೃತ್ತಿ; ಸಿಬ್ಬಂದಿಯಿಂದ ಆತ್ಮೀಯ ಬೀಳ್ಕೊಡುಗೆ

#image_title

ಬನವಾಸಿ: ಕಳೆದ 35 ವರ್ಷಗಳಿಂದ ಕೃಷಿ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಡಿ.ಜಿ.ಪಟಗಾರ ಅವರು ಇದೀಗ ನಿವೃತ್ತಿ ಹೊಂದಿದ್ದಾರೆ. ಬನವಾಸಿ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಅವರನ್ನು ಬನವಾಸಿ ರೈತ ಸಂಪರ್ಕದಲ್ಲಿ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ (Banavasi News) ಸನ್ಮಾನಿಸಲಾಯಿತು.

ಬನವಾಸಿ ರೈತ ಸಂಪರ್ಕ ಕೇಂದ್ರದ ವತಿಯಿಂದ ಪಟಗಾರ ಅವರಿಗೆ ಸನ್ಮಾನಿಸಿದ ಕೃಷಿ ಅಧಿಕಾರಿ ವಾಸಂತಿ ನಾಗರಹಳ್ಳಿ ಮಾತನಾಡಿ, “ಪ್ರಾಮಾಣಿಕ ಸೇವೆಗೆ ಹೆಸರಾಗಿದ್ದ ಕೃಷಿ ಅಧಿಕಾರಿ ಡಿ.ಜಿ.ಪಟಗಾರ ಅವರು ಕೆಲಸ ಮಾಡಿದ ಕಡೆಗಳಲ್ಲಿ ಉತ್ತಮ ಹೆಸರನ್ನು ಸಂಪಾದಿಸಿದ್ದಾರೆ. ಸದಾ ರೈತರ ಸಹಾಯಕ್ಕೆ ಮಿಡಿಯುತ್ತಿದ್ದರು. ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ರೈತರು ಸೇರಿದಂತೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ ಸಾರ್ಥಕ ಸೇವೆಯನ್ನು ಕೃಷಿಗೆ ಇಲಾಖೆಗೆ ನೀಡಿದ್ದಾರೆ” ಎಂದು ಪ್ರಶಂಸಿಸಿದರು.

ಸನ್ಮಾನ ಸ್ವೀಕರಿಸಿದ ನಿವೃತ್ತ ಕೃಷಿ ಅಧಿಕಾರಿ ಡಿ.ಜಿ.ಪಟಗಾರ ಮಾತನಾಡಿ, “ಸರ್ಕಾರಿ ನೌಕರಿಯಲ್ಲಿ ಸೇವಾ ನಿವೃತ್ತಿ ಅನಿವಾರ್ಯ. ಕಳೆದ 35 ವರ್ಷ ಕೃಷಿ ಇಲಾಖೆಯಲ್ಲಿ ಸೇವೆಗೈದಿದ್ದೇನೆ. 13 ವರ್ಷಗಳ ಕಾಲ ಬನವಾಸಿ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದೇನೆ. ನನ್ನ ಸೇವಾ ಅವಧಿಯಲ್ಲಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ” ಎಂದರು.

ಇದನ್ನೂ ಓದಿ: Banavasi News: ಏ.1 ರಂದು ಬನವಾಸಿಯ ಮಹಾಸ್ಯಂದನ ರಥೋತ್ಸವ; ಭರದಿಂದ ಸಾಗಿದೆ ರಥ ಕಟ್ಟುವ ಕಾರ್ಯ

ಈ ಸಂದರ್ಭದಲ್ಲಿ ಬನವಾಸಿ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ವರ್ಗ ಹಾಗೂ ಸುತ್ತಮುತ್ತಲಿನ ರೈತರು ಕೃಷಿ ಅಧಿಕಾರಿ ಡಿ.ಜಿ.ಪಟಗಾರ ಹಾಗೂ ಅವರ ಪತ್ನಿ ಜಗದಂಬ ಪಟಗಾರ ಅವರನ್ನು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಜೆ.ಆರ್. ಮಚಾಡೂ, ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ಚಂದ್ರಕಲಾ ಬಿದರಿ, ಲೆಕ್ಕ ಪರಿಶೋಧಕಿ ಕಾವ್ಯ ಎನ್. ಗೌಡ, ಜಲಾನಯನ ಸಹಾಯಕರಾದ ಜಯವಂತ ಕೆ.ನಾಯ್ಕ್, ಮಂಜುನಾಥ ಛಲವಾದಿ ಹಾಗೂ ಸುತ್ತಮುತ್ತಲಿನ ನೂರಾರು ರೈತ ಬಾಂಧವರು ಉಪಸ್ಥಿತರಿದ್ದರು.

Exit mobile version