Site icon Vistara News

Banavasi News: ಬನವಾಸಿಯಲ್ಲಿ ಬರದ ಭೀತಿ; ಬತ್ತಲಾರಂಭಿಸಿವೆ ನದಿ, ಕೆರೆ, ಬಾವಿಗಳು

#image_title

ಬನವಾಸಿ: ಏರುತ್ತಿರುವ ತಾಪಮಾನದ ಪರಿಣಾಮ ಎಲ್ಲೆಡೆ ನೀರಿಗಾಗಿ ಹಾಹಾಕಾರ ಎದ್ದಿದೆ. ಬಿಸಿಲ ಬೇಗೆಯಿಂದ ಇದೀಗ ಬಹುತೇಕ ಭಾಗದಲ್ಲಿ ನದಿ ಕೆರೆ ಬಾವಿಗಳು ಬತ್ತುತ್ತಿದ್ದರೆ ಇತ್ತ ಮಲೆನಾಡು ಮತ್ತು ಬಯಲು ಸೀಮೆ ಪ್ರದೇಶವಾದ ಬನವಾಸಿಯಲ್ಲಿಯೂ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿವೆ. ಶೀಘ್ರದಲ್ಲಿ ಮಳೆ ಸುರಿಯದಿದ್ದರೆ ಜಲಮೂಲಗಳೆಲ್ಲ ಬತ್ತಿ ಬರಡಾಗುವ ಭೀತಿ (Banavasi News) ಆವರಿಸಿದೆ.

ಹಿಂದಿನ ವರ್ಷಗಳಿಗೆ ಹೋಲಿಸಿದರೆ ತಾಲೂಕಿನಲ್ಲಿ ಈ ಬಾರಿ ಬಹುಬೇಗನೆ ನದಿ, ಕೆರೆ, ಬಾವಿಗಳು ಬತ್ತಿ ಹೋಗಿ ನೀರಿನ ಸಮಸ್ಯೆ ಕಾಡುತ್ತಿದೆ. ಸಾವಿರಾರು ಎಕರೆ ಕೃಷಿಭೂಮಿಗೆ ವರದಾನವಾಗಿದ್ದ ವರದಾ ನದಿಯು ಸಂಪೂರ್ಣ ಬತ್ತಿದ್ದು, ಪರಿಸರದ ಜನರಲ್ಲಿ ಆತಂಕ ಎದುರಾಗಿದೆ. ಬನವಾಸಿ ಪಟ್ಟಣ ವ್ಯಾಪ್ತಿಗೆ ಕುಡಿಯುವ ನೀರು ಪೂರೈಕೆಯಾಗುವ ವರದಾ ನದಿಯ ನೀರು ಸಂಪೂರ್ಣ ಬತ್ತಿಹೋಗಿದ್ದು, ಪಟ್ಟಣಕ್ಕೆ ನೀರು ಪೂರೈಕೆಗೆ ಸಮಸ್ಯೆ ಎದುರಾಗಿದೆ. ವರದಾ ನದಿಗೆ 3-4 ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗಿದ್ದು, ಎಲ್ಲ ಕಡೆ ನೀರಿಗೆ ಕೊರತೆಯುಂಟಾಗಿದೆ. ಸಂಪೂರ್ಣ ಬತ್ತಿದ ಪರಿಣಾಮ ನೀರಿನ ಸಮಸ್ಯೆ ಕಾಡುತ್ತಿದೆ.

ಇದನ್ನೂ ಓದಿ: Second PU result : ಬನವಾಸಿ ಕಾಲೇಜಿಗೆ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ನೂರಕ್ಕೆ ನೂರು ಫಲಿತಾಂಶ

ನದಿ, ಕೆರೆ, ಕೊಳವೆ ಬಾವಿ ಹಾಗೂ ಬಾವಿಗಳನ್ನು ನಂಬಿಕೊಂಡು ಬದುಕುತಿದ್ದ ಕೃಷಿಕರು ಈ ಬಾರಿ ಕಂಗಾಲಾಗಿದ್ದಾರೆ. ಕುಡಿಯುವ ನೀರಿಗಾಗಿ ಪರಿತಪಿಸುವ ಹೊತ್ತಿನಲ್ಲಿ ಕೃಷಿಗೆ ನೀರು ಉಣಿಸಲು ಕೃಷಿಕರು ಪರದಾಡುತಿದ್ದಾರೆ. ನದಿಯನ್ನು ನಂಬಿದ ಕೃಷಿಕರ ಅಡಿಕೆ, ಅನಾನಸ್, ಶುಂಠಿ, ಬಾಳೆ,‌ ಜೋಳ ಸೇರಿದಂತೆ ಬಹುತೇಕ ಬೆಳೆಗಳು ಬಾಡಿ ಹೋಗುತ್ತಿವೆ. ನದಿಯಲ್ಲಿ ಅಲ್ಲಲ್ಲಿ ಗುಂಡಿಗಳಲ್ಲಿ ತುಂಬಿರುವ ನೀರನ್ನು ಕೃಷಿಕರು ಕೃಷಿ ಭೂಮಿಗಾಗಿ ಬಳಸುತ್ತಿದ್ದಾರೆ. ಹೀಗೆ ಒಂದೆರಡು ವಾರ ಕಳೆದರೆ ನದಿಯೂ ಸಂಪೂರ್ಣ ಬತ್ತಿ ಹೋಗಿ ಕೃಷಿ ಚಟುವಟಿಕೆಗೂ ನೀರಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗುವಂತಿದೆ.

“ನಾವು ಇಷ್ಟು ವರ್ಷಗಳಲ್ಲಿ ಈ ರೀತಿಯ ನೀರಿನ ಸಮಸ್ಯೆ ಕಂಡವರಲ್ಲ. ಈ ಬಾರಿ ಏರುತ್ತಿರುವ ತಾಪಮಾನದಿಂದ ನದಿ, ಕೆರೆ, ಬಾವಿ ಎಲ್ಲವೂ ಬತ್ತಿ ಹೋಗುತ್ತಿದೆ. ಇನ್ನೂ ಒಂದು ವಾರದಲ್ಲಿ ಮಳೆ ಬರದೇ ಇದ್ದರೆ ಜನ, ಜಾನುವಾರುಗಳಿಗೆ ನೀರಿಗಾಗಿ ಹಾಹಾಕಾರ ಉಂಟಾಗಲಿದೆ” ಎಂದು ಭಾಶಿ ಗ್ರಾಮದ ಕೃಷಿಕರಾದ ಗಜಾನನ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.

Exit mobile version