ಯಲ್ಲಾಪುರ: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ʼಭಾರತ್ ಅಕ್ಕಿ ಯೋಜನೆʼ ದೇಶಾದ್ಯಂತ ಪ್ರಾರಂಭವಾಗಿದ್ದು, ಇದೀಗ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲೂ ಭಾರತ್ ಅಕ್ಕಿ ಮಾರಾಟಕ್ಕೆ ಲಭ್ಯವಾಗಿದೆ. ಯಲ್ಲಾಪುರದ ಬಸ್ ನಿಲ್ದಾಣದ ಬಳಿ ಭಾನುವಾರ ಬೆಳಗ್ಗೆ ʼಭಾರತ್ ಅಕ್ಕಿʼ ಯೋಜನೆಗೆ ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ್ ಕೋಣೆಮನೆ ಅವರು ಚಾಲನೆ ನೀಡಿದರು.
ಈ ವೇಳೆ ಹರಿಪ್ರಕಾಶ್ ಕೋಣೆಮನೆ ಮಾತನಾಡಿ, ಭಾರತ್ ಅಕ್ಕಿ ಯೋಜನೆಗೆ ಭಾರತದಾದ್ಯಂತ ಚಾಲನೆ ನೀಡಲಾಗಿದ್ದು, ಇದೀಗ ಯಲ್ಲಾಪುರದಲ್ಲೂ ಚಾಲನೆ ಸಿಕ್ಕಿದೆ. 10 ವರ್ಷಗಳ ಕಾಲ ಬಡವರಿಗೆ ಉಚಿತವಾಗಿ ಅಕ್ಕಿ ವಿತರಿಸುವ ಕೇಂದ್ರದ ಯೋಜನೆ ಈಗಾಗಲೇ ಜಾರಿಯಲ್ಲಿದೆ. ಹಾಗೆಯೇ ಯಾರಿಗೆ ಉಚಿತ ಅಕ್ಕಿ ಲಭ್ಯವಿಲ್ಲವೋ ಅಂತಹವರಿಗೆ ಅನುಕೂಲವಾಗಲು ಭಾರತ್ ಅಕ್ಕಿ ಯೋಜನೆಯಲ್ಲಿ 29 ರೂ.ಗಳಿಗೆ 1 ಕೆ.ಜಿ ಅಕ್ಕಿ ನೀಡಲಾಗುತ್ತಿದೆ. ಜನರು ಇದರ ಲಾಭವನ್ನು ಪಡೆಯಬೇಕು ಎಂದು ತಿಳಿಸಿದರು.
ಅಕ್ಕಿ ಜತೆಗೆ ಇತರ ಆಹಾರ ಸಾಮಗ್ರಿಯನ್ನು ಕೈಗೆಟಕುವ ಬೆಲೆಗೆ ವಿತರಿಸುವುದು ಈ ಯೋಜನೆಯ ಉದ್ದೇಶವಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಯೋಜನೆಗೆ ಚಾಲನೆ ಸಿಕ್ಕಿದೆ. ಪ್ರಧಾನಿ ಮೋದಿ ಸರ್ಕಾರದ ಈ ಯೋಜನೆಯ ಉದ್ದೇಶವನ್ನು ಅರ್ಥ ಮಾಡಿಕೊಂಡು, ಬೆಂಬಲಿಸಬೇಕು ಎಂದು ಜನರಿಗೆ ಮನವಿ ಮಾಡಿದರು.
ಕೇಂದ್ರ ಸರ್ಕಾರ ಭಾರತ್ ಅಕ್ಕಿಯನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲು ಆರಂಭಿಸಿದ್ದು, ಯಲ್ಲಾಪುರದಲ್ಲಿ ಮೊದಲ ಬಾರಿಗೆ ಅಕ್ಕಿ ಮಾರಾಟ ಮಾಡಲಾಯಿತು. ಜನರು ಚೀಟಿ ಪಡೆದು ಅಕ್ಕಿ ಖರೀದಿಸಿದರು. ಒಂದು ಕೆಜಿ ಅಕ್ಕಿಯನ್ನು ಕೇವಲ 29ರೂ. ನಂತೆ 5 ಕೆಜಿ, 10 ಕೆಜಿ ಅಕ್ಕಿಯ ಬ್ಯಾಗನ್ನು ಸಾರ್ವಜನಿಕರಿಗೆ ನೀಡಲಾಯಿತು. ಕಡಿಮೆ ಬೆಲೆಗೆ ಅಕ್ಕಿ ನೀಡುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಸಾರ್ವಜನಿಕರು ಅಕ್ಕಿಯನ್ನು ತೆಗೆದುಕೊಳ್ಳಲು ಮುಗಿಬಿದ್ದರು.
ಇದನ್ನೂ ಓದಿ | Congress Guarantee: ಸಿದ್ದಗಂಗಾ ಮಠದಿಂದ ಅಕ್ಕಿ ಸಾಲ ಪಡೆದ ಸರ್ಕಾರ! ಗ್ಯಾರಂಟಿಯಿಂದ ಖಾಲಿಯಾಯ್ತಾ ಬೊಕ್ಕಸ?
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಮಂಡಲಾಧ್ಯಕ್ಷ ಗೋಪಾಕೃಷ್ಣ ಗಾಂವಕರ್, ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಶ್ಯಾಮಿಲಿ ಪಾಠಣಕರ್, ಜಿಪಂ ಮಾಜಿ ಸದಸ್ಯೆ ಶೃತಿ ಹೆಗಡೆ, ತಾಪಂ ಮಾಜಿ ಅಧ್ಯಕ್ಷೆ ಚಂದ್ರಕಲಾ ಭಟ್, ಪ್ರಮುಖರಾದ ರಾಮಚಂದ್ರ ಚಿಕ್ಯಾನಮನೆ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸೋಮೇಶ್ವರ್ ನಾಯ್ಕ, ಕಾರ್ಯದರ್ಶಿ ಪ್ರಸಾದ ಹೆಗಡೆ, ವಿಶ್ವ ಹಿಂದು ಪರಿಷತ್ ತಾಲೂಕು ಅಧ್ಯಕ್ಷ ನಾರಾಯಣ ನಾಯ್ಕ ಸೇರಿದಂತೆ ಹಲವು ಕಾರ್ಯಕರ್ತರು ಇದ್ದರು.