Site icon Vistara News

Karnataka Election: ಕಾಗೇರಿಯನ್ನು ಸೋಲಿಸಿದ ಭೀಮಣ್ಣ ನಾಯ್ಕಗೆ ಸಚಿವ ಸ್ಥಾನ ನೀಡಿ: ಬ್ಲಾಕ್‌ ಕಾಂಗ್ರೆಸ್‌

ವಸಂತ ನಾಯ್ಕ ಅವರಿಂದ ಸುದ್ದಿಗೋಷ್ಟಿ

ಸಿದ್ದಾಪುರ: ಸೋಲಿಲ್ಲದ ಸರದಾರನಾಗಿ ಆರು ಬಾರಿ ಗೆದ್ದು ದಾಖಲೆ ಬರೆದಿದ್ದ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಸೋಲಿಸಿದ ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ (Karnataka Election) ಶಾಸಕ ಭೀಮಣ್ಣ ನಾಯ್ಕ ಅವರಿಗೆ ರಾಜ್ಯ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಆಗ್ರಹಿಸಿದರು.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಮೂವತ್ತು ವರ್ಷದ ಕನಸು ಈ ಬಾರಿ ನನಸಾಗಿದೆ. ಕ್ಷೇತ್ರದ ಜನತೆಯ ಸಹಕಾರದಿಂದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಆರು ಬಾರಿ ಶಾಸಕರಾಗಿ ಏಳನೇ ಬಾರಿ ಗೆಲುವಿನ ನಿರೀಕ್ಷೆಯಲ್ಲಿದ್ದ ವಿಧಾನಸಭಾ ಅಧ್ಯಕ್ಷರಾದ ವಿಶ್ಬೇಶ್ವರ ಹೆಗಡೆ ಕಾಗೇರಿಯವರ ವಿರುದ್ಧ ಅಭೂತಪೂರ್ವ ಜಯ ಗಳಿಸಿದ ಭೀಮಣ್ಣ ನಾಯ್ಕ ಅವರಿಗೆ ಸಚಿವ ಸ್ಥಾನ ನೀಡಬೇಕು. ಕ್ಷೇತ್ರದ ಅಭಿವೃದ್ಧಿ ಹಾಗೂ ಎಲ್ಲಾ ವರ್ಗದವರಿಗೆ ನ್ಯಾಯ ಸಿಗಲು ಮಂತ್ರಿ ಸ್ಥಾನ ನೀಡಲೇಬೇಕು” ಎಂದು ಆಗ್ರಹಿಸಿದರು.

ಇದನ್ನೂ ಓದಿ: Karnataka Election: ಕಾಂಗ್ರೆಸ್‌ನವರು ಲಿಂಗಾಯತರಿಗೆ ಯಾವ ಹುದ್ದೆ ಕೊಡ್ತಾರೆ ನೋಡೋಣ: ಬೊಮ್ಮಾಯಿಗೂ ಕುತೂಹಲ!

“ಶಿರಸಿ-ಸಿದ್ದಾಪುರ ತಾಲೂಕಿನಲ್ಲಿ ಕುಡಿಯುವ ನೀರು, ಆರೋಗ್ಯ ವ್ಯವಸ್ಥೆ, ಬಸ್ ಸೌಲಭ್ಯ, ರೇಷನ್ ಕಾರ್ಡ, ಸರ್ಕಾರಿ ಕಚೇರಿಗಳಲ್ಲಿ ಬಡವರಿಗೆ ಆಗುತ್ತಿರುವ ತೊಂದರೆ ಸೇರಿದಂತೆ ಸಾಕಷ್ಟು ಸಮಸ್ಯೆಗಳಿವೆ. ಎಲ್ಲ ಬೇಡಿಕೆಯನ್ನು ಐದು ವರ್ಷದಲ್ಲಿ ಪೂರೈಸಲು ಪ್ರಯತ್ನಿಸಲಾಗುವುದು” ಎಂದರು.

ಕಾನಗೋಡ ಗ್ರಾಮ ಪಂಚಾಯ್ತಿ ಸದಸ್ಯ ಎಚ್.ಕೆ. ಶಿವಾನಂದ ಮಾತನಾಡಿ, “ತಾಲೂಕಿನಲ್ಲಿ ಪಕ್ಷವನ್ನು ಸಂಘಟಿಸಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕರಿಗೆ ಅತಿ ಹೆಚ್ಚು ಮತ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಅವರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡಬೇಕು” ಎಂದು ಒತ್ತಾಯಿಸಿದರು.

ಇದನ್ನೂ ಓದಿ: Karnataka Election Results: ಮುಖ್ಯಮಂತ್ರಿ ಘೋಷಣೆಗೆ ಮುನ್ನವೇ ಸಿದ್ದರಾಮಯ್ಯ ಅಭಿಮಾನಿಗಳ ಸಂಭ್ರಮಾಚರಣೆ!

ಈ ವೇಳೆ ಪ್ರಮುಖರಾದ ಕೆ.ಟಿ.ಹೊನ್ನೆಗುಂಡಿ, ಮಾರುತಿ ಕಿಂದ್ರಿ, ಉಮೇಶ ನಾಯ್ಕ ಕಡಕೇರಿ, ಸೀಮಾ ಹೆಗಡೆ, ಚಂದ್ರು ಕಾನಡೆ, ಜಯರಾಮ ನಾಯ್ಕ, ರಾಜೇಶ ನಾಯ್ಕ ಕೋಲಶಿರ್ಸಿ, ವಾಸು ನಾಯ್ಕ, ಪಾಂಡುರಂಗ ನಾಯ್ಕ, ಜಿ.ಟಿ.ನಾಯ್ಕ ಗೋಳಗೋಡ, ಸುರೇಂದ್ರ ಗೌಡ ಮತ್ತಿತರರು ಉಪಸ್ಥಿತರಿದ್ದರು.

Exit mobile version