ಕುಮಟಾ: ಗೋ ಉತ್ಪನ್ನಗಳ ಬಹುಮುಖಿ ಆರೋಗ್ಯಕಾರಕ ಅಂಶಗಳ ಕುರಿತು ಅರಿವು ಮೂಡಿಸಲು ಆಯುರ್ವೇದ ವೈದ್ಯ ಡಾ. ರವಿ ಎನ್. ಅವರು ಬರೆದಿರುವ ‘ಗವ್ಯಾಮೃತ’ ಪುಸ್ತಕವನ್ನು ಶ್ರೀರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು, ಕುಮಟಾ ಹತ್ತಿರದ ಹೊಸಾಡು ಅಮೃತಾಧಾರಾ ಗೋಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ಸದ್ವಿಚಾರಗಳು ನಿಂತ ನೀರಲ್ಲ. ಸದಾ ಪ್ರವಹಿಸುವ ಸುಜಲ. ಅವು ಒಂದು ಕಾಲಕ್ಕೆ ಮಾತ್ರ ಸೀಮಿತವಲ್ಲ; ಸದಾತನದೊಂದಿಗೆ ಸನಾತನವನ್ನು ಸುರಿಸುವ ಸುಧೆ. ಅದು ಕಾಲಕಾಲಕ್ಕೆ ನಾವಿನ್ಯದಲ್ಲಿ ಪ್ರಕಟವಾಗಬೇಕು, ಜನಮಾನಸವನ್ನು ಮುಟ್ಟಬೇಕು, ಸಮಾಜವನ್ನು ಉತ್ಥಾಪನಗೊಳಿಸಬೇಕು. ಅಂತಹವುಗಳು ಮಾತ್ರ ಸದ್ವಿಚಾರಗಳು. ಅವು ತಾವು ಜೀವಂತವಾಗಿದ್ದು ಜಗತ್ತನ್ನು ಜೀವಂತಗೊಳಿಸುತ್ತವೆ. ಪ್ರಕೃತ ಗವ್ಯಾಮೃತ ಕೃತಿಯು ಗೋವಿನ ಕುರಿತ ಬಹುಮುಖಿ ಸುವಿಚಾರಗಳನ್ನು ಸಮಾಜಕ್ಕೆ ತಲುಪಿಸುವoತಾಗಲಿ ಎಂದು ತಿಳಿಸಿದರು.
ಕೃತಿಯ ಲೇಖಕರು, ಆಯುರ್ವೇದ ವೈದ್ಯರೂ ಆಗಿರುವ ಡಾ. ರವಿ ಎನ್. ಮತ್ತು ಅಮೃತಧಾರಾ ಗೋಶಾಲೆ, ಹೊಸಾಡು ಸಮಿತಿಯ ಅಧ್ಯಕ್ಷ ಶ್ರೀ ಮುರಳೀಧರ ಪ್ರಭು, ಗೌರವಧ್ಯಕ್ಷರಾದ ಭಾರತೀ ಪಾಟೀಲ್ ಹಾಗೂ ಹೊಸಾಡು ಗೋಶಾಲೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಭಾರತೀಯ ಸನಾತನ ಜೀವನವು ವೇದಗಳನ್ನು ಆಧರಿಸಿ ಇತ್ತು. ವೇದಗಳು ಕೇವಲ ಪಾಠಕ್ಕೆ ಸೀಮಿತವಾಗಿರದೆ ಜೀವನ ಕ್ರಮವೇ ಆಗಿತ್ತು. ಮನುಜನಿಗೆ, ಪ್ರಾಣಿಗಳಿಗೆ ಬರುವ ಕಾಯಿಲೆಗಳನ್ನು ಕಾಲ ಕಾಲಕ್ಕೆ ಗುಣಪಡಿಸುವ ನಿಟ್ಟಿನಲ್ಲಿ ವೇದದ ಕವಲಾಗಿ ಆಯುರ್ವೇದ ವೈದ್ಯಶಾಸ್ತ್ರವು ಬೆಳೆದು ಬಂತು. ಹೀಗೆ ಬೆಳೆದು ಬಂದ ಆಯುರ್ವೇದ ವೈದ್ಯಶಾಸ್ತ್ರವು ಸುತ್ತಮುತ್ತಲು ಇರುವ ಪ್ರಕೃತಿಮಾತೆ ಕೊಟ್ಟ ಸಸ್ಯಜನ್ಯ ಹಾಗೂ ವಿವಿಧ ಪ್ರಾಣಿಜನ್ಯ ವಸ್ತುಗಳನ್ನು ಒಳಗೊಂಡಿದೆ. ಭಾರತೀಯ ಗೋವಂಶವು ನೀಡುವ ಹಾಲು, ಮೊಸರು, ತುಪ್ಪ, ಗೋಮಯ ಹಾಗೂ ಗೋಮೂತ್ರಗಳು ಪಂಚಗವ್ಯವೆಂದು ಕರೆಯಲ್ಪಟ್ಟು ಆಯುರ್ವೇದಶಾಸ್ತ್ರದ ಅವಿಭಾಜ್ಯ ಅಂಗವಾಗಿವೆ. ಭಾರತೀಯ ಗೋವಂಶದ ಪಂಚಗವ್ಯಗಳು ಅತಿವಿಶೇಷವಾದ ಔಷಧೀಯ ಗುಣಗಳು ಹೊಂದಿರುವುದನ್ನು ವೇದ ಕಾಲವು ಒಪ್ಪಿಕೊಂಡಿದ್ದಲ್ಲದೆ, ಆಧುನಿಕ ಕಾಲದಲ್ಲಿ ನಡೆದ ಹಲವಾರು ವೈಜ್ಞಾನಿಕ ಅನುಸಂಧಾನಗಳೂ ಒಪ್ಪಿಕೊಂಡಿವೆ.
ಧರ್ಮ: ಸತ್ಯಮಹಿಂಸಾ ಚ ಪ್ರಾಯೋ ಹಿ ಅನ್ನಂ ಸಮಾಶ್ರಿತಮ್ | ಎಂಬ ಆರ್ಷವಾಣಿಯಂತೆ ನಾವು ಬಳಸುವ ಆಹಾರಪದಾರ್ಥವನ್ನು ಅವಲಂಬಿಸಿಯೇ ನಮ್ಮ ದೇಹಧರ್ಮ ಹಾಗೂ ಅಹಿಂಸಾ ಗುಣಗಳು ನಮ್ಮಲ್ಲಿ ವೃದ್ಧಿಸಿ, ಸತ್ಯದ ಸಾಕ್ಷಾತ್ಕಾರಕ್ಕೆ ದಾರಿ ಮಾಡಿಕೊಡುತ್ತದೆ. ಹಾಗಾಗಿ ಆಹಾರದಲ್ಲಿನ ಶುದ್ಧತೆ ಅತಿ ಮುಖ್ಯ. ಪಾರಂಪರಿಕ ದೇಶೀ ಗೋವಿನಿಂದ ಪಡೆದ ಗೋರಸಗಳನ್ನು ಅತ್ಯಂತ ಶುದ್ಧವಾದ ಪದಾರ್ಥಗಳೆಂದು ಎಲ್ಲ ಶಾಸ್ತ್ರಗಳೂ ಒಕ್ಕೊರಲಿನಿಂದ ಘೋಷಿಸುತ್ತವೆ. ಹೀಗೆ ಆ ಪುಣ್ಯಮಾತೆಯ ತತ್ತ್ವಯುತ ಆಹಾರಗಳನ್ನು ಕ್ರಮ ತಪ್ಪದೇ ಸೇವನೆ ಮಾಡುವುದರಿಂದ ದೇಹಕ್ಕೆ ಆರೋಗ್ಯ, ಜೀವಕ್ಕೆ ನೆಮ್ಮದಿ ನಿಶ್ಚಿತ. ಹೀಗೆ ಗೋ ಉತ್ಪನ್ನಗಳ ಬಹುಮುಖಿ ಆರೋಗ್ಯಕಾರಕ ಅಂಶಗಳ ಕುರಿತು ಅರಿವು ಮೂಡಿಸುವ ಅಂಶಗಳು ಈ ಕಿರುಹೊತ್ತಿಗೆಯಲ್ಲಿವೆ.
ಇದನ್ನೂ ಓದಿ | ನನ್ನ ದೇಶ ನನ್ನ ದನಿ ಅಂಕಣ: ಶತಮಾನದಾಚೆಗೆ ವಿಸ್ತರಿಸಿದ ಪ್ರತಿಭೆ ಪ್ರೊ || ಎಲ್.ಎಸ್. ಶೇಷಗಿರಿರಾವ್
ಶ್ರೀಭಾರತೀ ಪ್ರಕಾಶನ ಪ್ರಕಟಿಸಿರುವ ಎರಡನೇ ಮುದ್ರಣದ ಪುಸ್ತಕದ ಪ್ರತಿಗಳಿಗಾಗಿ ಗಿರಿನಗರದ ಶ್ರೀಪುಸ್ತಕಮ್ 9591542454 ಸoಪರ್ಕಿಸಬಹುದು.