ಶಿರಸಿ: ಇಲ್ಲಿನ ಬನವಾಸಿ ಹೋಬಳಿ ವ್ಯಾಪ್ತಿಯ ಅಂಡಗಿ ಗ್ರಾಮದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಸಂರಕ್ಷಿಸಿ ಇಡಬಹುದಾದಂತಹ ಶೈತ್ಯಾಗಾರ (Cold Storage) ನಿರ್ಮಾಣಕ್ಕೆ ಕೃಷಿ ಇಲಾಖೆ ಮುಂದಾಗಿದ್ದು, ಇದಕ್ಕಾಗಿ 9.5 ಕೋಟಿ ರೂಪಾಯಿ ಅನುದಾನವು ಮಂಜೂರು ಮಾಡಲಾಗಿದೆ.
ಈಗಾಗಲೇ ಶೈತ್ಯಾಗಾರ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ರೈತರು ಬೆಳೆದ ಹಣ್ಣು ಮತ್ತು ತರಕಾರಿಗಳನ್ನು ಈ ಶೈತ್ಯಾಗಾರದಲ್ಲಿ ಸಂರಕ್ಷಿಸಿಡಬಹುದಾಗಿದ್ದು, ಬೆಲೆಗಳ ಇಳಿಕೆ ಸಂದರ್ಭದಲ್ಲಿ ಅನುಕೂಲಕ್ಕೆ ಬರಲಿದೆ. ಕೆಲವು ಉತ್ಪನ್ನಗಳನ್ನು ಹೆಚ್ಚು ಸಮಯಗಳ ಕಾಲ ಇಟ್ಟುಕೊಳ್ಳಲಾಗುವುದಿಲ್ಲ. ಅವುಗಳು ಬೇಗ ಕೆಡುವುದರಿಂದ ಇರುವ ದರಕ್ಕೇ ಮಾರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತಿತ್ತು. ಆದರೆ, ಈಗ ಶೈತ್ಯಾಗಾರವಾದರೆ ಅದರಲ್ಲಿ ಬೆಳೆಗಳನ್ನು ಸಂಗ್ರಹಿಸಿಡುವ ಮೂಲಕ ಉತ್ತಮ ಬೆಲೆ ಬಂದಾಗ ಮಾರಾಟ ಮಾಡಬಹುದಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಿವರಾಮ ಹೆಬ್ಬಾರ್, ಮನವಿಗೆ ಶೀಘ್ರವಾಗಿ ಸ್ಪಂದಿಸಿ ರೈತಾಪಿ ವರ್ಗಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಅನುದಾನವನ್ನು ಮಂಜೂರು ಮಾಡಿದಕ್ಕೆ ಸರ್ಕಾರಕ್ಕೆ ಧನ್ಯವಾದವನ್ನು ತಿಳಿಸುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ | ವಿಜಯಪುರದಲ್ಲಿ ಶೈತ್ಯ ಸಂಗ್ರಹಾಗಾರ: ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಸಿಎಂ ಸೂಚನೆ