ಸಿದ್ದಾಪುರ: ಅರಣ್ಯ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸಬಾರದು, ಭೂಮಿ ಜಿಪಿಎಸ್ ಮಾಡಿರುವುದನ್ನು ಮರು ಪರಿಶೀಲಿಸಬೇಕು ಎಂದು ಒತ್ತಾಯಿಸಿ ಸಾವಿರಾರು ಅರಣ್ಯ ಅತಿಕ್ರಮಣದಾರರು ತಾಲೂಕಿನ ಬಿಳಗಿ ಮಾರಿಕಾಂಬ ದೇವಸ್ಥಾನದ ಬಳಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.
ಪಾದಯಾತ್ರೆಯ ನೇತೃತ್ವ ವಹಿಸಿದ್ದ ಅರಣ್ಯ ಅತಿಕ್ರಮಣದಾರರ ಸಮಿತಿಯ ಜಿಲ್ಲಾಧ್ಯಕ್ಷ ರವೀಂದ್ರನಾಥ ನಾಯ್ಕ ಮಾತನಾಡಿ, ಅರಣ್ಯದಲ್ಲಿ ಜಿಪಿಎಸ್ ಆಗಿರುವ ಜಾಗದಿಂದ ಜನರನ್ನು ಒಕ್ಕಲೆಬ್ಬಿಸಬಾರದು. ಜಿಪಿಎಸ್ ಅರ್ಜಿಗಳನ್ನು ಮರು ಪರಿಶೀಲಿಸಬೇಕು. ಸಮಾಜಕಲ್ಯಾಣ ಇಲಾಖೆಯ ಅರ್ಜಿಗಳನ್ನು ನೀಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ | ಅಡಕೆ ಎಲೆಚುಕ್ಕಿ ರೋಗ | ಕೇಂದ್ರದ ಗಮನ ಸೆಳೆದ ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದ ನಿಯೋಗ
ಮಾಜಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ಹೋರಾಟದಿಂದ ನಮ್ಮ ಬೇಡಿಕೆಗಳನ್ನು ಈಡೇರಿಸಲು ಸಾಧ್ಯ. ನಾನು ಹೋರಾಟ ಮಾಡಿದ್ದೇನೆ, ನಿಮ್ಮ ಕೂಗು ವಿಧಾನಸೌಧದಲ್ಲಿ ಮೊಳಗಬೇಕೆಂದರೆ ರವಿಂದ್ರ ನಾಯ್ಕರನ್ನು ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದರು.
ಪ್ರತಿಭಟನಾಕಾರರು ಸ್ಥಳಕ್ಕೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಬರುವವರೆಗೂ ಕದಲುವುದಿಲ್ಲ ಎಂದು ಪಟ್ಟುಹಿಡಿದರು. ಹೀಗಾಗಿ ಡಿಎಫ್ಒ ಅಜ್ಜಯ್ಯ ಸ್ಥಳಕ್ಕೆ ಆಗಮಿಸಿ ನಮ್ಮ ಅಧಿಕಾರಿಗಳಿಂದ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇನೆ. ಜಿಪಿಎಸ್ ಆಗಿರುವ ಜಾಗದಿಂದ ಒಕ್ಕಲೆಬ್ಬಿಸುವುದಿಲ್ಲ, ಜಿಪಿಎಸ್ ಅರ್ಜಿಗಳನ್ನು ಮರು ಪರಿಶೀಲಿಸಲಾಗುವುದು. ಸಮಾಜಕಲ್ಯಾಣ ಇಲಾಖೆಗೆ ಅರ್ಜಿಗಳನ್ನು ನೀಡಲು ಅವಕಾಶ ಮಾಡಿಕೊಡುವ ಭರವಸೆ ನೀಡಿದ್ದರಿಂದ ಪ್ರತಿಭಟನಾಕಾರರು ಹೋರಾಟ ನಿಲ್ಲಿಸಿದರು.
ಅರಣ್ಯ ಅತಿಕ್ರಮಣದಾರರ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ತಿ.ನ.ಶ್ರೀನಿವಾಸ, ರಾಜ್ಯ ಪ್ರಧಾನ ಸಂಚಾಲಕ ರಮೇಶ ಹೆಗಡೆ ತೀರ್ಥಹಳ್ಳಿ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ಆಮ್ ಆದ್ಮಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ವೀರಭದ್ರ ನಾಯ್ಕ, ವಿ.ಎನ್. ನಾಯ್ಕ, ಬಿಎಸ್ಎನ್‌ಪಿ ತಾಲೂಕು ಅಧ್ಯಕ್ಷ ವಿನಾಯಕ ನಾಯ್ಕ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಚ್.ಕೆ.ಶಿವಾನಂದ, ತಾಲೂಕು ಯುವ ಒಕ್ಕೂಟ ಅಧ್ಯಕ್ಷ ಅಣ್ಣಪ್ಪ ನಾಯ್ಕ ಶಿರಳಗಿ, ಅಂಜುಮಾನ್ ಇಸ್ಲಾಂ ಸಮಿತಿ ನಾಸಿರ್ ಖಾನ್, ಕೆ.ಟಿ. ನಾಯ್ಕ ಹೆಗ್ಗೇರಿ ಸೇರಿ ಸಾವಿರಾರು ಅತಿಕ್ರಮಣದಾರರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ | ಭೂತಾರಾಧನೆ ಹಿಂದು ಸಂಸ್ಕೃತಿಯ ಒಂದು ಭಾಗ, ಚೇತನ್‌ಗೆ ಸರಿಯಾಗಿ ಗೊತ್ತಿಲ್ಲ: ಕೋಟ ಶ್ರೀನಿವಾಸ ಪೂಜಾರಿ