Site icon Vistara News

ಮನಸ್ಸು, ದೇಹದ ಸಮತೋಲನಕ್ಕೆ ಯೋಗ, ಧ್ಯಾನ ಅತ್ಯವಶ್ಯಕ: ಗಜಾನನ ಭಟ್ ಗೇರಗದ್ದೆ

ಯೋಗ

ಯಲ್ಲಾಪುರ: ಯೋಗ ನಮ್ಮ ಋಷಿಮುನಿಗಳ ಕೊಡುಗೆ. ಅಂದಿನಿಂದ ಇಂದಿನವರೆಗೂ ಅದನ್ನು ಉಳಿಸಿಕೊಂಡು ಬರಲಾಗಿದ್ದು, ಅದಕ್ಕಿರುವ ಮಹತ್ವವನ್ನು ತೋರಿಸುತ್ತದೆ. ಮನಸ್ಸು ಮತ್ತು ದೇಹದ ಸಮತೋಲನ ಕಾಯ್ದು ಕೊಳ್ಳುವುದಕ್ಕೆ ಯೋಗ ಹಾಗೂ ಧ್ಯಾನ ಅತ್ಯವಶ್ಯಕ ಎಂದು ಉಪನ್ಯಾಸಕರಾದ ಗಜಾನನ ಭಟ್ ಗೇರಗದ್ದೆ ಹೇಳಿದ್ದಾರೆ.

ಪಟ್ಟಣದ ವಿಶ್ವದರ್ಶನ ಸೆಂಟ್ರಲ್ ಸ್ಕೂಲ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಯೋಗ ಅನಂತವಾದದ್ದು, ದೇಹ ಮತ್ತು ಮನಸ್ಸನ್ನು ಶುದ್ಧವಾಗಿಡಲು ಕಲ್ಮಶಗಳಿಂದ ಮುಕ್ತವಾಗಿಡಲು ಪ್ರತಿಯೊಬ್ಬರೂ ಯೋಗಾಸನ ಮಾಡಬೇಕು. ಆರೋಗ್ಯಕ್ಕಿಂತ ಸಂಪತ್ಭರಿತವಾದದ್ದು ಬೇರೊಂದಿಲ್ಲ. ನಮ್ಮ ಆರೋಗ್ಯವು ಸರಿ ಇರಬೇಕು ಎಂದಾದಲ್ಲಿ ಯೋಗಾಸನವನ್ನು ನಾವು ಪ್ರತಿನಿತ್ಯವೂ ಮಾಡಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ | Yoga Day 2022 | ತ್ವಚೆಯ ಸೌಂದರ್ಯ ಹೆಚ್ಚಿಸುವ ಯೋಗಾಸನ

ಯೋಗದಿಂದ ವ್ಯಾವಹಾರಿಕ ಲಾಭದ ಜತೆಗೆ ಆಧ್ಯಾತ್ಮಿಕ ಲಾಭವೂ ಇದೆ. ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ದಿನನಿತ್ಯ ನಿರ್ದಿಷ್ಟ ಸಮಯವನ್ನು ಯೋಗಾಸನಕ್ಕಾಗಿ ಮೀಸಲಿಡಬೇಕು. ದೀರ್ಘಾಯಸ್ಸು, ಉತ್ತಮ ಆರೋಗ್ಯ, ಸಮತೋಲಿತ ಜೀವನಕ್ಕೆ ಯೋಗ ಸೋಪಾನವಾಗಿದೆ. ಈ ನಿಟ್ಟಿನಲ್ಲಿ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಭಾರತದ ಋಷಿಮುನಿಗಳ ಕೊಡುಗೆಯಾಗಿರುವ ಯೋಗಾಸನವನ್ನು ಹೆಚ್ಚಿನ ಸಂಖ್ಯೆಯ ಜನರು ಅಳವಡಿಸಿಕೊಂಡಿದ್ದು, ವಿಶ್ವದಾದ್ಯಂತ ಯೋಗ ದಿನವನ್ನು ಆಚರಿಸುತ್ತಿರುವುದು ಭಾರತೀಯರಾದ ನಮಗೆ ಹೆಮ್ಮೆಯ ವಿಷಯವಾಗಿದೆ ಎಂದರು.

ಸುಂದರ ವ್ಯಕ್ತಿತ್ವವನ್ನು ಹೊಂದಲು ಹಾಗೂ ನಿರಂತರ ಕ್ರಿಯಾಶೀಲತೆಯಿಂದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಯೋಗಾಸನವು ನಮ್ಮನ್ನು ಅಣಿಗೊಳಿಸುತ್ತದೆ. ವಿದ್ಯಾರ್ಥಿಗಳು ಯೋಗಾಸನವನ್ನು ಮಾಡುವುದರಿಂದ ಉತ್ತಮ ಭವಿಷ್ಯ, ಆರೋಗ್ಯ, ದೈಹಿಕ ಮತ್ತು ಮಾನಸಿಕ ಸಮತೋಲನವನ್ನು ಹೊಂದಲು ಉಪಯುಕ್ತವಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಯೋಗಾಸನವನ್ನು ಮಾಡಿ ಎಂದು ಗಜಾನನ ಭಟ್ ಗೇರಗದ್ದೆ ಸಲಹೆ ನೀಡಿದರು.

ಶಾಲೆಯ ಪ್ರಾಂಶುಪಾಲರಾದ ಮಹಾದೇವಿ ಭಟ್, ಶಿಕ್ಷಕರಾದ ಪಲ್ಲವಿ, ಕವಿತಾ ಹೆಬ್ಬಾರ್, ಗಿರೀಶ್ ಗಾಂವ್ಕರ್, ರಾಘವೇಂದ್ರ ನಾಯಕ್ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಧರ್ಮಸ್ಥಳದಲ್ಲಿ ಯೋಗ ದಿನಾಚರಣೆ

ಧರ್ಮಸ್ಥಳ (ದಕ್ಷಿಣ ಕನ್ನಡ): ಎಂಟನೇ ಯೋಗ ದಿನಾಚರಣೆಯನ್ನು ಧರ್ಮಸ್ಥಳದಲ್ಲಿ ವಿಶೇಷವಾಗಿ ಆಚರಿಸಲಾಯಿತು. ಇಲ್ಲಿ‌ನ ಅಮೃತವರ್ಷಿನಿ ಸಭಾಂಗಣದಲ್ಲಿ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನದ ವಿದ್ಯಾರ್ಥಿಗಳು ಯೋಗಾಭ್ಯಾಸ ನಡೆಸಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆಯಿತು.

ಇದೇ ವೇಳೆ ಯೋಗದಲ್ಲಿ ವಿಶೇಷ ಸಾಧನೆ ಮಾಡಿದ ಪ್ರಜ್ವಲ್ ನಾಯಕ್ ರವರಿಗೆ “ಯೋಗ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಜ್ಯದ ಹತ್ತು ಜಿಲ್ಲೆಗಳಲ್ಲಿರುವ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳಲ್ಲಿನ ಸುಮಾರು ಎಂಟು ಸಾವಿರ ವಿದ್ಯಾರ್ಥಿಗಳು ಯೋಗಭ್ಯಾಸ ಮಾಡುವ ಮೂಲಕ ಯೋಗ ದಿನಾಚರಣೆಯಲ್ಲಿ ಭಾಗಿಯಾದರು.

ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನದ ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡಿದರು.

ಇದನ್ನೂ ಓದಿ | Yoga Day 2022: ನೀರಿನಲ್ಲೇ ಯೋಗಾಭ್ಯಾಸ!

Exit mobile version