Site icon Vistara News

ಶಾಲೆಗಳಲ್ಲಿ ಭಗವದ್ಗೀತೆ ಕಲಿಸಲು ಕ್ರಮ; ಸ್ವರ್ಣವಲ್ಲಿಯಲ್ಲಿ ಶಿಕ್ಷಣ ಸಚಿವ ನಾಗೇಶ್‌ ಹೇಳಿಕೆ

swarnavalli mutt

ಶಿರಸಿ: ಶಾಲೆಗಳಲ್ಲಿ ನೈತಿಕ ಶಿಕ್ಷಣ ಕಲಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಅದರ ನೀಲನಕ್ಷೆ ಸಿದ್ಧವಾಗುತ್ತಿದೆ. ನೈತಿಕ ಶಿಕ್ಷಣ ಪದ್ದತಿಯಲ್ಲಿ ಭಗವದ್ಗೀತೆ ಅಳವಡಿಸಲು ಕ್ರಮವಹಿಸಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿದ್ದಾರೆ.

ತಾಲೂಕಿನ ಸ್ವರ್ಣವಲ್ಲೀ ಮಠದಲ್ಲಿ ನಡೆದ ಗುರು ಪೂರ್ಣಿಮೆ ಹಾಗು ಚಾತುರ್ಮಾಸ್ಯ ವ್ರತಾಚರಣೆಯ ಸಭಾ ಕಾರ್ಯಕ್ರಮದಲ್ಲಿ ಸ್ವರ್ಣವಲ್ಲೀ ಮಠದ ನವೀಕೃತ ಜಾಲತಾಣ ಲೋಕಾರ್ಪಣೆ ಮಾಡಿ ಅವರು ಮಾತನಾಡುತ್ತಿದ್ದರು.

ಮೆಕಾಲೆ ಮನೋಭಾವದ ಶಿಕ್ಷಣ ವ್ಯವಸ್ಥೆಯಿಂದ ದೇಶದೊಳಗೇ ಗೆದ್ದಲು ಬಿದ್ದಿದೆ. ಇದನ್ನು ತೊಲಗಿಸಲು ಹೊಸ ಶಿಕ್ಷಣ ನೀತಿ ಜಾರಿಗೆ ಬರುತ್ತಿದೆ. ಮಾತೃಭಾಷೆಗೆ ಆದ್ಯತೆ ನೀಡುವ ಜತೆ ನಾಡಿನ ಸಂಸ್ಕೃತಿಯ ಪ್ರತೀಕವಾದ ಸಂಸ್ಕೃತ ಭಾಷೆಗೂ ಮಹತ್ವ ನೀಡುವಂತೆ ಕೋರಲಾಗಿದೆ. ಇದರ ಜತೆ ರಾಜ್ಯದಲ್ಲಿ ನೈತಿಕ ಶಿಕ್ಷಣ ವ್ಯವಸ್ಥೆಯನ್ನು ತ್ವರಿತವಾಗಿ ಜಾರಿಗೆ ತರಲು ಸರ್ಕಾರ ಮುಂದಾಗಿದೆ ಎಂದು ಅವರು ಹೇಳಿದರು.

ನೈತಿಕ ಶಿಕ್ಷಣದಲ್ಲಿ ಇರಬೇಕಾದ ವಿಷಯಗಳ ಸಂಗ್ರಹ ನಡೆದಿದೆ. ಅದು ಪೂರ್ಣಗೊಂಡ ನಂತರ ರಾಜ್ಯದ ವಿವಿಧ ಸ್ವಾಮೀಜಿಗಳ ಬಳಿ ಆ ಬಗ್ಗೆ ಚರ್ಚಿಸಿ ವಿಷಯಗಳನ್ನು ಅಂತಿಮಗೊಳಿಸಲಾಗುವುದು. ಸಮಾಜ ಹಾಗೂ ವ್ಯಕ್ತಿ ಯಾವ ಮಾರ್ಗದಲ್ಲಿ ಸಾಗಬೇಕು ಎಂಬುದನ್ನು ತಿಳಿಸಿ ಕೊಡುವುದು ಗುರುಗಳ ಕರ್ತವ್ಯವಾಗಿದೆ. ಆ ರೀತಿ ಧಾರ್ಮಿಕ ವಿಚಾರವಲ್ಲದೆ ಸಮಾಜದಲ್ಲಿ ಕೈಗೊಳ್ಳಬೇಕಾದ ಧನಾತ್ಮಕ ಚಟುವಟಿಕೆಗಳಿಗೆ ಸ್ವರ್ಣವಲ್ಲೀ ಶ್ರೀಗಳು ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು.

ಸಭಾ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವದಿಸಿದ ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ಧರ್ಮದಲ್ಲಿ ಜ್ಞಾನ ವೈರಾಗ್ಯ ಹಾಗೂ ಭಕ್ತಿ ವೈರಾಗ್ಯಕ್ಕೆ ವಿಶೇಷ ಸ್ಥಾನವಿದೆ. ಇವೆರಡೂ ಕೂಡಿದ ಮೇರು ವ್ಯಕ್ತಿತ್ವ ವೇದವ್ಯಾಸರಾಗಿದ್ದಾರೆ. ಅಂಥವರ ಪೂಜೆಯೊಂದಿಗೆ ಅವರು ನಡೆದ ಮಾರ್ಗದಲ್ಲಿ ನಡೆಯಲು ಪ್ರಯತ್ನಿಸುವ ಉದ್ದೇಶದಿಂದ ಚಾತುರ್ಮಾಸ್ಯ ವೃತ ಸಂಕಲ್ಪ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಶಿಕ್ಷಣದಲ್ಲಿ ಎಲ್ಲ ವಿಷಯಗಳೂ ಬೇಕು. ಹಾಗಾದರೆ ಮಾತ್ರ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಪ್ರತಿ ಭಾಷೆಗೂ ಅದರದ್ದೇ ಆದ ಇತಿಹಾಸ, ಸಂಸ್ಕೃತಿ ಇದೆ. ಇವೆಲ್ಲ ಭಾಷೆಗಳಿಗೂ ಸಂಸ್ಕೃತ ಮಾತೃ ಭಾಷೆಯಾಗಿದೆ. ಈ ನಿಟ್ಟಿನಲ್ಲಿ ಸಂಸ್ಕೃತ ಭಾಷೆ ವಿಸ್ತಾರವಾಗಬೇಕು ಎಂದರು.

ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಶಂಭುಲಿಂಗ ಹೆಗಡೆ ನಡಗೋಡ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೈದ್ಯ ನಾಡೋಜ ಕೃಷ್ಣ ಪ್ರಸಾದ ಕೂಡ್ಲ ಅವರನ್ನು ಶ್ರೀಗಳು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಿದರು. ಇದೇ ವೇಳೆ ಹಿತ್ಲಳ್ಳಿ ಸೂರ್ಯನಾರಾಯಣ ಭಟ್ಟ ಬರೆದ ಗಣೇಶ ಮಾನಸಪೂಜಾ, ಮಹಾಬಲೇಶ್ವರ ಭಟ್ಟ ಬಾಸಲ ಬರೆದ ಸತ್ಯ ವಿನಾಯಕ ವ್ರತ ಹಾಗೂ ಪ್ರೊ.ಎಂ.ಆರ್.ನಾಗರಾಜ ಬರೆದ ಅದ್ವೈತ ನಿಷ್ಠೆ ಹಾಗೂ ಅನುಷ್ಠಾನ ಗ್ರಂಥಗಳನ್ನು ಲೋಕಾರ್ಪಣೆ ಮಾಡಲಾಯಿತು.

ಇದನ್ನೂ ಓದಿ | Chaturmas 2022 | ಯಾವ ಯತಿವರ್ಯರ ಚಾತುರ್ಮಾಸ್ಯ ವ್ರತಾಚರಣೆ ಎಲ್ಲಿ?

Exit mobile version