ಶಿರಸಿ: ಖ್ಯಾತ ಜ್ಯೋತಿಷಿ ವಿದ್ವಾನ್ ಹಿತ್ಲಳ್ಳಿ ನಾಗೇಂದ್ರ ಭಟ್ ಅವರಿಗೆ ಅಮೆರಿಕದ ಫ್ಲೊರಿಡಾದಲ್ಲಿರುವ ಶ್ರೀವಿದ್ಯಾ ಇಂಟರ್‌ನ್ಯಾಷನಲ್ ಯುನಿರ್ವಸಿಟಿ ಫಾರ್ ವೇದಿಕ್ ಸೈನ್ಸ್ ಗೌರವ ಡಾಕ್ಟರೇಟ್ ಘೋಷಿಸಿದೆ.
ಸಂಸ್ಕೃತ ಮತ್ತು ಜ್ಯೋತಿಷ ಶಾಸ್ತ್ರಕ್ಕೆ ವಿದ್ವಾನ್ ಹಿತ್ಲಳ್ಳಿ ನಾಗೇಂದ್ರ ಭಟ್ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಈ ಡಾಕ್ಟರೇಟ್ ನೀಡಲಾಗುತ್ತಿದೆ ಎಂದು ವಿವಿ ಉಪಾಧ್ಯಕ್ಷ ಡಾ. ಎಸ್ ಆರ್ ನರಸಿಂಹಮೂರ್ತಿ ತಿಳಿಸಿದ್ದಾರೆ.
ಜುಲೈ ೩೦ರಂದು ಬೆಂಗಳೂರಿನ ಜಯನಗರದಲ್ಲಿರುವ ಜಿ ವಿ ಆಡಿಟೋರಿಯಂನಲ್ಲಿ ನಡೆಯುವ ವಿವಿಯ ೨ನೇ ಘಟಿಕೋತ್ಸವದಲ್ಲಿ ಅವರಿಗೆ ಈ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ. ಜ್ಯೋತಿಷ ಶಾಸ್ತ್ರದ ಬಗ್ಗೆ ಆಳವಾದ ಅಧ್ಯಯನ ಮಾಡಿರುವ ನಾಗೇಂದ್ರ ಭಟ್ ಅವರು ಹಲವಾರು ಕೃತಿಗಳನ್ನು ಬರೆದಿದ್ದಾರೆ.
ತಮ್ಮ 93 ರ ಇಳಿವಯಸ್ಸಿನಲ್ಲಿಯೂ ಯುವಕರನ್ನೂ ನಾಚಿಸುವಂತೆ ಆರೋಗ್ಯವಂತರಾಗಿರುವ ನಾಗೇಂದ್ರ ಭಟ್ ಅವರು, ಸದಾ ಕ್ರಿಯಾಶೀಲರಾಗಿ ತಮ್ಮ ಅನುಷ್ಟಾನವನ್ನು ಚಾಚೂತಪ್ಪದೇ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಇವರ ಜ್ಞಾಪಕ ಶಕ್ತಿಯೂ ಅಪಾರವಾಗಿದ್ದು, ಪುಸ್ತಕಗಳ ನೆರವಿಲ್ಲದೇ ಉಪನ್ಯಾಸದಲ್ಲಿ ಸಂಸ್ಕೃತ ಶ್ಲೋಕಗಳನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯ ಹೊಂದಿದ್ದಾರೆ.
ವನಗಳ ಕುರಿತು ಹೆಚ್ಚಿನ ಅಧ್ಯಾಯನ ನಡೆಸಿರುವ ಇವರು ಶಾಸ್ತ್ರಗಳ ಪ್ರಕಾರ ವನಗಳನ್ನು ಬೆಳೆಸುವುದು ಹೇಗೆ? ಯಾವ ವನದಲ್ಲಿ ಯಾವೆಲ್ಲಾ ಸಸ್ಯಗಳನ್ನು ಬೆಳೆಸಬೇಕೆಂಬುದರ ಕುರಿತು ಅಧ್ಯಯನ ನಡೆಸಿದ್ದು, ಜಿಲ್ಲಾ ಅರಣ್ಯ ಇಲಾಖೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಶಿರಸಿ ತಾಲೂಕಿನ ಬಕ್ಕಳದಲ್ಲಿ ಅರಣ್ಯ ಇಲಾಖೆಯ ಸಹಯೋಗದಲ್ಲಿ ನಿರ್ಮಿಸಲಾದ ನಕ್ಷತ್ರ ವನ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಯಾವುದು ಈ ವಿಶ್ವವಿದ್ಯಾಲಯ?
ವೇದಿಕ್ ಸೈನ್ಸ್‌ನಲ್ಲಿ ಅಂದರೆ ವೇದ, ಆಗಮ ಶಾಸ್ತ್ರ, ಜ್ಯೋತಿಷ, ನಾಟ್ಯ ಇತ್ಯಾದಿಗಳಲ್ಲಿ ಉನ್ನತ ಶಿಕ್ಷಣ ನೀಡುವ ಉದ್ದೇಶದಿಂದ ಅಮೆರಿಕದ ಶಿಕ್ಷಣ ಇಲಾಖೆಯ ಅನುಮತಿಯೊಂದಿಗೆ ಶ್ರೀವಿದ್ಯಾ ಇಂಟರ್‌ನ್ಯಾಷನಲ್ ಯೂನಿರ್ವಸಿಟಿ ಫಾರ್ ವೇದಿಕ್ ಸೈನ್ಸ್ ಆರಂಭಗೊಂಡಿದೆ. ಭಾರತದಲ್ಲಿ ಈ ವಿವಿಯ ಚಟುವಟಿಕೆಗಳನ್ನು ಬೆಂಗಳೂರಿನ ಶ್ರೀವಿದ್ಯಾ ವಿಶ್ವ ಸಂಶೋಧನಾ ಪ್ರತಿಷ್ಠಾನ ನಡೆಸಿಕೊಂಡು ಬಂದಿದೆ. ಕಳೆದ ಆರು ವರ್ಷಗಳಿಂದ ಈ ವಿವಿಯು ಶೈಕ್ಷಣಿಕ ಚಟುವಟಿಕೆಗಳನ್ನು ಇದು ನಡೆಸಿಕೊಂಡು ಬಂದಿದೆ.
ಇದನ್ನೂ ಓದಿ | ಶುಕ್ರ ಗ್ರಹ ಲಗ್ನದಲ್ಲಿದ್ದರೆ ಉತ್ತಮ ಆರೋಗ್ಯ, ಉಳಿದ ಮನೆಯಲ್ಲಿದ್ದರೆ ಯಾವೆಲ್ಲಾ ಫಲ?