Site icon Vistara News

Honnavara News: ಸಣ್ಣ ನೀರಾವರಿ ಇಲಾಖೆಯ ಭ್ರಷ್ಟಾಚಾರದಿಂದ ರೈತರಿಗೆ ಸಂಕಟ: ಅನಂತ ನಾಯ್ಕ ಆರೋಪ

#image_title

ಹೊನ್ನಾವರ: ತಾಲೂಕಿನ ಇಡಗುಂಜಿಯಲ್ಲಿ ಹಲವು ಹಳ್ಳಿಗಳಿಗೆ ನೀರುಣಿಸುವ ಉದ್ದೇಶದಿಂದ ನಿರ್ಮಿಸಲಾಗಿರುವ ಏತ ನೀರಾವರಿ ಯೋಜನೆ ಪ್ರಯೋಜನಕ್ಕೆ ಬಾರದೆ ಜಾನುವಾರುಗಳು, ರೈತರು ಪರದಾಡುವಂತಾಗಿದೆ. ಸಣ್ಣ ನೀರಾವರಿ ಇಲಾಖೆ ಈ ಯೋಜನೆಯಲ್ಲಿ ಭ್ರಷ್ಟಾಚಾರ ಎಸಗಿದೆ ಎಂದು ದಿ.ಡಿ.ದೇವರಾಜ ಅರಸು ವಿಚಾರ ವೇದಿಕೆಯ ಜಿಲ್ಲಾ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ (Honnavara News) ಆರೋಪಿಸಿದ್ದಾರೆ.

“ಕರ್ನಾಟಕ ರಾಜ್ಯ ಆಡಳಿತ ಇಲಾಖೆಗಳಲ್ಲಿ ಅತ್ಯಂತ ಭ್ರಷ್ಟಾಚಾರದಲ್ಲಿ ಮುಳುಗಿರುವ ಇಲಾಖೆಯೆಂದರೆ ಅದು ಸಣ್ಣ ನೀರಾವರಿ ಇಲಾಖೆ. ಈ ಇಲಾಖೆ ಭ್ರಷ್ಟಾಚಾರ ಮತ್ತು ಸರ್ವಾಧಿಕಾರಕ್ಕೆ ಹೆಸರಾಗಿದೆ. ಇಲಾಖೆಯಲ್ಲಿ ಕಾಮಗಾರಿಗಳನ್ನು ನಡೆಸದೆ ಕೇವಲ ದಾಖಲೆಯಲ್ಲಿ ಕಾಮಗಾರಿ ನಮೂದಿಸಿ ಬಿಲ್ ಮಾಡಿ ಕೊಳ್ಳೆ ಹೊಡೆಯುವುದೇ ಈ ಇಲಾಖೆಯ ಮುಖ್ಯ ಗುರಿ. ಒಂದು ವೇಳೆ ಕಾಮಗಾರಿ ನಡೆಸಿದರೂ ಸಹ ಪೂರ್ಣಗೊಳಿಸದೇ ಇರುವುದು ಇಲಾಖೆಯ ಜಾಯಮಾನವಾಗಿದೆ” ಎಂದು ಅವರು ಆರೋಪಿಸಿದರು.

“ಕಳೆದ 2 ವರ್ಷಗಳ ಹಿಂದೆ ಪ್ರಾರಂಭವಾದ ಇಡಗುಂಜಿ ಏತ ನೀರಾವರಿ ಯೋಜನೆ ಸಂಪೂರ್ಣ ನಿಷ್ಪ್ರಯೋಜಕವಾಗಿದೆ. ಮೇಲಿನ ಇಡಗುಂಜಿ ಮತ್ತು ಬಳಕೂರು ಗ್ರಾಮದ ಗಡಿಯಲ್ಲಿ ಸ್ಥಾಪಿತವಾದ ಈ ಏತ ನೀರಾವರಿ ಯೋಜನಾ ಘಟಕ ಇಡಗುಂಜಿ ಗ್ರಾಮದ ಕುಳಿಮನೆ ಹಾಗೂ ಕೆಳಗಿನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಕೃಷಿ ಭೂಮಿಗೆ ನೀರುಣಿಸುವ ಉದ್ದೇಶದಿಂದ ಸ್ಥಾಪಿತವಾದ ಘಟಕವಾಗಿತ್ತು. ಆದರೆ ಈ ಯೋಜನೆಯಲ್ಲಿ ಪಂಪ್ ಅಳವಡಿಸಿ, ಪೈಪ್‌ಲೈನ್ ಮಾಡಿ ಗುಡ್ಡದಿಂದ ರಸ್ತೆಯ ಗಟಾರದಲ್ಲಿ ನೀರು ಹರಿಸಿದ್ದಾರೆ. ಈ ನೀರು ಮಳೆಗಾಲದ ಹಳ್ಳವನ್ನು ಸೇರಿ ಪೋಲಾಗುತ್ತದೆಯೇ ಹೊರತು ಜನರಿಗಾಗಲಿ ಅಥವಾ ಕೃಷಿ ಭೂಮಿಗಾಗಲಿ ಪ್ರಯೋಜನವಾಗುತ್ತಿಲ್ಲ” ಎಂದು ಅವರು ಆರೋಪಿಸಿದರು.

ಇದನ್ನೂ ಓದಿ: Congress Ticket: ಉತ್ತರ ಕನ್ನಡದ ಇಬ್ಬರು ಮಾಜಿ ಶಾಸಕ, ಒಬ್ಬರು ಮಾಜಿ ಸಚಿವರಿಗೆ ಟಿಕೆಟ್ ಘೋಷಣೆ

“ಈ ಯೋಜನೆಯಿಂದ ಯಾರಿಗೆ ಪ್ರಯೋಜನವಾಗಿದೆ ಎಂಬುದು ತಿಳಿಯುತ್ತಿಲ್ಲ. ಅವೈಜ್ಞಾನಿಕ ಕಾಮಗಾರಿಯಿಂದ ಕುಳಿಮನೆ ಹಾಗೂ ಸುತ್ತಲಿನ ಸಂಬಂಧಪಟ್ಟ ಪ್ರದೇಶ ಒಣಭೂಮಿ, ಒಣಭೂಮಿಯಾಗಿಯೇ ಉಳಿದುಕೊಂಡಿದೆ. ಕ್ರಮಬದ್ಧವಾಗಿ ಯೋಜನೆ ರೂಪಿಸಿದ್ದರೆ ಗ್ರಾಮದ ಸರ್ವ ಜನತೆಗೆ ಹಿತವಾಗುತ್ತಿತ್ತು. ಜನ-ಜಾನುವಾರುಗಳಿಗೆ ನೀರಿನ ಅಭಾವ ತಪ್ಪುತ್ತಿತ್ತು. ಸಮರ್ಪಕ ಕಾಮಗಾರಿ ಇಲಾಖೆಯಿಂದ ನಡೆಯದೇ ಇರುವುದರಿಂದ ಕಾಮಗಾರಿ ಕುರಿತು ಮಾಹಿತಿ ಕೇಳಿದರೆ ಮಾಹಿತಿ ಪೂರೈಸದೇ ಸರ್ವಾಧಿಕಾರ ಮೆರೆಯುತ್ತಿದ್ದಾರೆ. ಈ ಕಾಮಗಾರಿಯಲ್ಲಿ ನಡೆಸಲಾದ ಭ್ರಷ್ಟಾಚಾರ ಮತ್ತು ಸರ್ವಾಧಿಕಾರದ ಕುರಿತು ಕರ್ನಾಟಕ ಲೋಕಾಯುಕ್ತಕ್ಕೆ ಶೀಘ್ರವಾಗಿ ದೂರು ಸಲ್ಲಿಸಲಾಗುವುದು” ಎಂದು ಅನಂತ ನಾಯ್ಕ ಹೆಗ್ಗಾರ ಎಚ್ಚರಿಸಿದ್ದಾರೆ.

Exit mobile version