Site icon Vistara News

Uttara Kannada News: ಯಲ್ಲಾಪುರದಲ್ಲಿ ಲೋಕಾಯುಕ್ತದಿಂದ ಸಾರ್ವಜನಿಕರಿಗೆ ಮಾಹಿತಿ, ಅಹವಾಲು ಸ್ವೀಕಾರ

Information to public from Lokayukta and grievances Acceptance programme at yallapur

ಯಲ್ಲಾಪುರ: ಸಾರ್ವಜನಿಕರ ಸಮಸ್ಯೆಯನ್ನು (Public Problems) ಸ್ಥಳದಲ್ಲಿಯೇ ಸಾಧ್ಯವಾದಷ್ಟು ಬಗೆಹರಿಸುವ ಉದ್ದೇಶದಿಂದ ಈ ಅಹವಾಲು ಸಭೆಯನ್ನು ಆಯೋಜಿಸಿದ್ದೇವೆ ಎಂದು ಕಾರವಾರದ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಕುಮಾರ ಚಂದ್‌ ಹೇಳಿದರು.

ಪಟ್ಟಣದ ತಾಲೂಕಾ ಆಡಳಿತ ಸೌಧದಲ್ಲಿ ಗುರುವಾರ ಕರ್ನಾಟಕ ಲೋಕಾಯುಕ್ತ, ಕಾರವಾರ ವತಿಯಿಂದ ಏರ್ಪಡಿಸಿದ್ದ ಸಾರ್ವಜನಿಕರಿಗೆ ಮಾಹಿತಿ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಾವುದೇ ಸರ್ಕಾರಿ ಕಚೇರಿಗಳಿಗೆ ಅನಿರೀಕ್ಷಿತ ಭೇಟಿ ಮಾಡುವ ಅಧಿಕಾರ ಲೋಕಾಯುಕ್ತ ಇಲಾಖೆಗಿದೆ. ಆ ಸಂದರ್ಭದಲ್ಲಿ ದಾಖಲೆಗಳಲ್ಲಿ ಯಾವುದೇ ಅಸಮರ್ಪಕತೆ ಕಂಡು ಬಂದಲ್ಲಿ, ಸ್ಥಳದಲ್ಲಿಯೇ ಪ್ರಕರಣ ದಾಖಲಿಸಿಕೊಳ್ಳುವ ಅಧಿಕಾರವಿದೆ. ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ಒಂದು ಕನಿಷ್ಠ ಪುರಾವೆ ಕೊಡುವ ಅವಶ್ಯಕತೆ ಇರುತ್ತದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಆಸ್ತಿ ವಿಚಾರವಾಗಿ ಹೆಚ್ಚಿನ ಲೋಕಾಯುಕ್ತ ಪ್ರಕರಣಗಳು ದಾಖಲಾಗುತ್ತಿವೆ. ಯಾವುದೇ ಕೆಲಸಗಳು ಕಾರಣವಿಲ್ಲದೆ ಬಾಕಿ ಇದ್ದಲ್ಲಿ, ಲಾಭಕ್ಕಾಗಿ ತಡೆಹಿಡಿಯಲಾಗಿದೆ ಎಂದು ಅದರ ಮೇಲೂ ಸಹ ಪ್ರಕರಣ ದಾಖಲಿಸಿಕೊಳ್ಳಬಹುದಾಗಿದೆ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಇದನ್ನೂ ಓದಿ: Shivamogga News: ಸೋಲಾರ್‌ ಆಧಾರಿತ ಹುಲ್ಲು ಕಟಾವು ಯಂತ್ರ ಕಂಡುಹಿಡಿದ ಸರ್ಕಾರಿ ಶಾಲಾ ವಿದ್ಯಾರ್ಥಿ

ಯಾವುದೇ ಅಧಿಕಾರಿಗಳು ಸಾರ್ವಜನಿಕರಿಗೆ ಕಡತ ಸಿಗುತ್ತಿಲ್ಲ ಎಂಬ ಹಿಂಬರಹ ನೀಡುವಂತಿಲ್ಲ. ಅಧಿಕಾರಿಗಳು ತಮ್ಮ ಇಲಾಖೆಯಲ್ಲಿ ಪ್ರತಿ ದಿನ ಹಣದ ವ್ಯವಹಾರಗಳ ಕುರಿತು ರಿಜಿಸ್ಟರ್ ನಿರ್ವಹಣೆ ಮಾಡಬೇಕು. ಫಾರ್ಮ್ ನಂ.03 ಪಡೆಯುವಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚುತ್ತಿದ್ದು, ಅದಕ್ಕೆ ಆದ್ಯತೆ ನೀಡದಂತೆ ಕರ್ತವ್ಯ ನಿರ್ವಹಿಸಿ. ಲೋಕಾಯುಕ್ತದ ಮಾಹಿತಿಗಳ ಫಲಕವನ್ನು ಸಾರ್ವಜನಿಕರಿಗೆ ಕಾಣುವಂತೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಅಳವಡಿಸುವುದು ಕಡ್ಡಾಯವಾಗಿದೆ. ಇಲ್ಲವಾದಲ್ಲಿ ಅಂತಹ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.

ನಂತರ ಆಗಮಿಸಿದ್ದ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಇದನ್ನೂ ಓದಿ: Ganga Kalyana Scheme : ಕೃಷಿ ಜಮೀನಿಗೆ ಉಚಿತ ಬೋರ್‌ವೆಲ್‌ ಬೇಕೇ? ಅರ್ಜಿ ಸಲ್ಲಿಕೆಗೆ 6 ದಿನವಷ್ಟೇ ಬಾಕಿ!

ಈ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸ್‌ ನಿರೀಕ್ಷಕ ವಿನಾಯಕ ಬಿಲ್ಲವ, ಗ್ರೇಡ್‌ 2 ತಹಸೀಲ್ದಾರ್‌ ಸಿ.ಜಿ. ನಾಯ್ಕ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ್‌, ಪ.ಪಂ. ಮುಖ್ಯಾಧಿಕಾರಿ ಸುನೀಲ್ ಗಾವಡೆ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಲೋಕಾಯುಕ್ತ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Exit mobile version