ಯಲ್ಲಾಪುರ: ದೇಶದ ಮಹಾತ್ಮರನ್ನು ಸ್ಮರಿಸುವ ಹಾಗೂ ತ್ಯಾಗ, ಬಲಿದಾನ ಮಾಡಿದ ವೀರರನ್ನು (Savarkar Statue) ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಸ್ತುತ್ಯರ್ಹವಾಗಿದೆ ಎಂದು ವಿಸ್ತಾರ ನ್ಯೂಸ್ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ವಜ್ರಳ್ಳಿಯ ವೀರ ಸಾವರ್ಕರ್ ಪ್ರತಿಮೆ ಸ್ಥಾಪನೆ ಸಮಿತಿ ವತಿಯಿಂದ ಸನ್ಮಾನ ಸ್ವೀಕರಿಸಿ, ಪ್ರತಿಮೆ ಅನಾವರಣ ಕಾರ್ಯಕ್ರಮದ ಕುರಿತಂತೆ ಸಲಹೆ ಸೂಚನೆ ನೀಡಿ ಮಾತನಾಡಿದ ಅವರು, ವಿನಾಯಕ ದಾಮೋದರ ಸಾವರ್ಕರ್ ತಮ್ಮ ಸಂಪೂರ್ಣ ಜೀವನವನ್ನೇ ಭಾರತದ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟ ಮಹಾನ್ ವಾಗ್ಮಿ. ವಿವಿಧ ವಿಷಯಗಳ ಬಗ್ಗೆ ನಿರರ್ಗಳವಾಗಿ ಬರೆಯಬಲ್ಲ ಲೇಖಕ, ಇತಿಹಾಸಕಾರ, ಕವಿ, ತತ್ವಶಾಸ್ತ್ರಜ್ಞ ಮತ್ತು ಸಮಾಜಸೇವಕರಾಗಿದ್ದಾರೆ. ಅವರನ್ನು ಕೆಲವರು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಅತಿ ದೊಡ್ಡ ಕ್ರಾಂತಿಕಾರಿ ಎಂದು ಪರಿಗಣಿಸಿದರೆ, ಇನ್ನು ಕೆಲವರು ಅವರನ್ನು ಚಾಣಕ್ಯ ಎಂದೂ ಭಾವಿಸುತ್ತಾರೆ ಎಂದರು.
ಸಾವರ್ಕರ್ ಅವರಂತಹ ದೇಶಪ್ರೇಮಿಗಳ ಪ್ರತಿಮೆ ಅನಾವರಣ ಮಾಡುವುದರ ಜತೆಗೆ ಅವರ ದೇಶಪ್ರೇಮ, ತತ್ವ ಸಿದ್ಧಾಂತಗಳನ್ನು ಸಾಹಿತ್ಯ ಮುಖೇನ ಮನೆ ಮನೆಗೆ ತಲುಪಿಸುವಂತಾಗಬೇಕು. ಈ ಕಾರ್ಯ ಶ್ಲಾಘನೀಯ ಎಂದು ಹರಿಪ್ರಕಾಶ ಕೋಣೆಮನೆ ಅವರು ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ | Raja Marga Column : ಐಕಾನ್ ವ್ಯಕ್ತಿಗಳು ಎರಡೆರಡು ಬಾರಿ ಹುಟ್ಟುತ್ತಾರೆ! ಅದು ಹೇಗೆ?
ಸಾವರ್ಕರ್ ಪ್ರತಿಮೆ ಸ್ಥಾಪನೆ ಸಮಿತಿಯ ಪ್ರಮುಖರಾದ ವಿ.ಎನ್ .ಭಟ್ಟ ನಡಿಗೆಮನೆ, ಜಿ.ಎನ್ ಕೋಮಾರ, ಜಿ.ಆರ್ ಭಾಗ್ವತ, ಗಣಪತಿ ಮಾನಿಗದ್ದೆ, ನವೀನ ಕಿರಗಾರಿ, ರಾಘವೇಂದ್ರ ಭಟ್ಟ, ಅವಿನಾಶ್ ಕೋಮಾರ, ಮಹೇಶ ಗಾಂವ್ಕರ, ರಾಜಶೇಖರ ಬಾರೆಮನೆ, ಶ್ರೀರಾಮ ಭಾಗ್ವತ, ಶ್ರೀಧರ ಭಟ್ಟ ಉಪಸ್ಥಿತರಿದ್ದರು.