Site icon Vistara News

Sirsi News : ನೀರಿನ ಕೊರತೆ ನೀಗಿಸುತ್ತಿರುವ ಜೀವಜಲ ಕಾರ್ಯಪಡೆ: ಶ್ರೀನಿವಾಸ ಹೆಬ್ಬಾರರಿಗೆ ಶರಣು ಎನ್ನುತ್ತಿದ್ದಾರೆ ಜನ

ಜೀವಜಲ ಕಾರ್ಯಪಡೆ ಕೆಲಸ

ಶಿರಸಿ: ಕೆರೆ ಅಭಿವೃದ್ಧಿ ಮೂಲಕ ಜಲ‌ಮೂಲವನ್ನು ಸಂರಕ್ಷಿಸುತ್ತಾ ಬಂದಿರುವ ಶಿರಸಿ ಜೀವಜಲ ಕಾರ್ಯಪಡೆ ಇದೀಗ ಜನರಿಗೆ ಜಲ ಪೂರೈಸುವ ಕಾರ್ಯದಲ್ಲಿ ತೊಡಗಿದೆ. ಕಳೆದ ಏಳು ವರ್ಷಗಳಿಂದ ವರ್ಷಕ್ಕೆ ಕನಿಷ್ಠ ಐದಾರು ಕೆರೆಗಳ ಅಭಿವೃದ್ಧಿ ಮಾಡಿರುವ ಶಿರಸಿಯ ಜೀವಜಲ ಕಾರ್ಯಪಡೆ, ಕೇವಲ ಕೆರೆಯ ಹೂಳೆತ್ತುವಿಕೆ ಮಾತ್ರವಲ್ಲ, ನೀರಿಲ್ಲದ ಜನರಿಗೆ ಕುಡಿಯುವ ನೀರನ್ನು ಮನೆ ಬಾಗಿಲಿಗೆ ಕೊಡುವ ಕಾಯಕ (Sirsi News) ಮಾಡುತ್ತಿದೆ.

ಇದನ್ನೂ ಓದಿ: Road Accident: ಶಿರಸಿಯಲ್ಲಿ ಭೀಕರ ರಸ್ತೆ ಅಪಘಾತ; ಸ್ಥಳದಲ್ಲೇ ಪ್ರಾಣಬಿಟ್ಟ ಚಾಲಕ
ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್‌ ಅವರ ಕನಸಿನ ನೆರವಿನ ಹಸ್ತದ ಯೋಜನೆ ಇದಾಗಿದೆ. ಬಾಯಾರಿದವರಿಗೆ ಶುದ್ಧ ಕುಡಿಯುವ ನೀರು ಕೊಡುವ ಕಾಯಕ ಕಳೆದ ಮೂರ್ನಾಲ್ಕು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ. ಮೊದಮೊದಲು ಅಲ್ಲಿ ಇಲ್ಲಿ ಬೇರೆ ಬೇರೆ ಟ್ಯಾಂಕರ್‌ ಮೂಲಕ ನೀರು ಕೊಡುತ್ತಿದ್ದ ಕಾರ್ಯಪಡೆಯ ಹೆಬ್ಬಾರರು, ನಂತರ ಕಾರ್ಯಪಡೆಗೆ ನೀರಿನ ಟ್ಯಾಂಕರ್‌ ವಾಹನ ಖರೀದಿಸಿ ನೀರು ಬೇಕೆಂದವರಿಗೆ ಧಾರಾಳವಾಗಿ ನೀಡುವ ವ್ಯವಸ್ಥೆ ಮಾಡಿದ್ದಾರೆ. ಈ ವರ್ಷದ ಬಿರು ಬೇಸಿಗೆಯ ಕಾರಣದಿಂದ ಶಿರಸಿಗೆ ನೀರು ಪೂರೈಸುವ ಕೆಂಗ್ರೆ ಹಾಗೂ ಮಾರಿಗದ್ದೆಯ ಹಳ್ಳದಲ್ಲೂ ನೀರಿನ ಕೊರತೆ ಆಗಿದ್ದು, ನಗರಸಭೆ ಎರಡು ದಿನಗಳಿಗೊಮ್ಮೆ ನೀರು ಬಿಡುತ್ತಿದೆ. ಕೆಲವಡೆ ಬಾವಿ ನೀರು ತಳ ಕಂಡಿದೆ. ಹೀಗಾಗಿ ನಗರದ ಮರಾಠಿಕೊಪ್ಪ ಸೇರಿದಂತೆ ಹಲವೆಡೆ ನೀರಿನ ಕೊರತೆ ಉಂಟಾಗಿದೆ. ಈ ಕೊರತೆಯನ್ನು ಜೀವ ಜಲ ಕಾರ್ಯಪಡೆ ನೀಗಿಸುತ್ತಿದೆ.

ಶ್ರೀನಿವಾಸ ಹೆಬ್ಬಾರ

ಬೆಳಗಿನಿಂದ ಸಂಜೆಯ ತನಕ ನೀರು ಬೇಕಾದವರಿಗೆ ಒಂದೇ ಒಂದು ರೂಪಾಯಿ ಕೂಡ ಪಡೆಯದೇ ನೀರನ್ನು ನೀಡಲಾಗುತ್ತಿದೆ. ಶಿರಸಿ ನಗರ ಹಾಗೂ ಸುತ್ತಲಿನ 5 ಕಿ.ಮೀ ವ್ಯಾಪ್ತಿಯಲ್ಲಿ ಕಾರ್ಯಪಡೆ ತನ್ನ ಸೇವಾ ಕೈಂಕರ್ಯ ನಡೆಸುತ್ತಿದೆ. ನಗರದ ಮರಾಠಿಕೊಪ್ಪ ಅಂಜನಾದ್ರಿ ದೇವಸ್ಥಾನದ ಬಳಿ ತೆಗೆಯಲಾದ ಬೋರ್‌ವೆಲ್‌ನಲ್ಲಿ ಗುಣಮಟ್ಟದ ನೀರಿದ್ದು, ಅದನ್ನು ಅಗತ್ಯ ಉಳ್ಳವರಿಗೆ ನೀಡುತ್ತಿದೆ. ಜಲ ಸಂರಕ್ಷಣೆ ಜೊತೆಗೆ ಕಾರ್ಯಪಡೆ ಜಲ ನೀಡಿ ದಾಹ ಕಡಿಮೆ ಮಾಡುತ್ತಲಿದೆ. ಭೂಮಿಯ ಒಡಲಿನ ದಾಹಕ್ಕೆ ಕೆರೆ ಮದ್ದಾದರೆ, ಜನರ ದಾಹಕ್ಕೆ ಕಾರ್ಯಪಡೆಯ ಟ್ಯಾಂಕರ್‌ ಮೂಲಕ ಉಚಿತವಾಗಿ ಸ್ಪಂದಿಸುತ್ತಿದೆ. ಕಾರ್ಯಪಡೆಯ ಸಮಾಜಮುಖಿ ನಡಿಗೆ ಹಲವರ ಶ್ಲಾಘನೆಗೆ ಕಾರಣವಾಗಿದೆ.

ಈ ಬಗ್ಗೆ ಮಾತನಾಡಿರುವ ಮರಾಠಿಕೊಪ್ಪದ ಮಹಿಳೆ ಗಿರಿಜಾ, “ಜೀವಜಲ ಕಾರ್ಯಪಡೆ ಟ್ಯಾಂಕರ್‌ ನೀರು ನಮ್ಮ ಬೇಸಿಗೆಯ ಜಲ ಸಂಕಷ್ಟ ನಿವಾರಿಸುತ್ತಿದೆ. ನೆಂಟರಿಷ್ಟರು ಬಂದಾಗ ಮರ್ಯಾದೆ ಉಳಿಸಿದೆ” ಎಂದು ಹೇಳಿದ್ದಾರೆ. ಇಲ್ಲಿಯ ಜನ ಜೀವ ಜಲ ಕಾರ್ಯಪಡೆಯ ರೂವಾರಿ ಶ್ರೀನಿವಾಸ ಹೆಬ್ಬಾರ ಅವರ ಕಾರ್ಯವನ್ನು ಶ್ಲಾಘಿಸುತ್ತಿದ್ದಾರೆ.

Exit mobile version