ಶಿರಸಿ: ಜಲಾನಯನ ಪ್ರದೇಶದ ರೈತರ (Farmers) ಹಿತ ಬಲಿಕೊಟ್ಟು ರಾಜ್ಯ ಸರ್ಕಾರ (State Government) ತಮಿಳುನಾಡಿಗೆ (Tamilnadu) ನೀರು ಹರಿಬಿಟ್ಟಿದ್ದು, ಇಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ ಎಂದು ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾವೇರಿ ನಿಯಂತ್ರಣ ಮಂಡಳಿ ಹಾಗೂ ಪ್ರಾಧಿಕಾರವು ಸುಪ್ರೀಂ ಕೋರ್ಟ್‌ಗೆ ಕರ್ನಾಟಕದ ಸಂಕಷ್ಟ ಪರಿಸ್ಥಿತಿ ಮನವರಿಕೆ ಮಾಡಿಕೊಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ, ಸಮಸ್ಯೆ ಬಗೆಹರಿಸಲು ಮುಂದಾಗಬೇಕು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರು, ಶಾಸಕರು, ಸಂಸದರು, ಕಾವೇರಿ ವಿವಾದ ಬಗೆಹರಿಸಲು ವಿಫಲವಾಗಿದ್ದು, ಉನ್ನತ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಆರೋಪಿಸಿದ ಅವರು, ಕಾವೇರಿ ನೀರು ಸಂಕಷ್ಟ ಸೂತ್ರ ಮತ್ತು ರಾಷ್ಟ್ರೀಯ ವೈಜ್ಞಾನಿಕ ಜಲ ನೀತಿ ರೂಪಿಸುವಂತೆ ಮಧ್ಯಸ್ಥಿಕೆ ವಹಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: Venus Mission: ಇಸ್ರೋಗೆ ‘ಶುಕ್ರ’ದೆಸೆ; ಚಂದ್ರ, ಸೂರ್ಯನ ಬಳಿಕ ಶುಕ್ರನತ್ತ ಚಿತ್ತ; ಉಡಾವಣೆ ಯಾವಾಗ?
ಕಾವೇರಿ ವಿಷಯದಲ್ಲಿ ರಾಜಕೀಯ ಪಕ್ಷಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಕಾವೇರಿ ನೀರು ಸಂಕಷ್ಟ ಸೂತ್ರ ರಚಿಸುವಂತೆ ಮಾಡಬೇಕಿದೆ. ಒಂದು ಎಕರೆಗೆ 25 ಸಾವಿರ ರೂ. ಪರಿಹಾರ ಘೋಷಣೆ ಮಾಡಬೇಕಿದೆ. ಕಾವೇರಿ, ಮಹದಾಯಿ, ಕೃಷ್ಣ ಪ್ರತಿಯೊಬ್ಬ ಕನ್ನಡಿಗನ ಹೃದಯಬಡಿತವಾಗಬೇಕು ಎಂದರು.
ಪ್ರಸಕ್ತ ವರ್ಷದಲ್ಲಿ ಮಳೆ ಕೊರತೆಯಿಂದ ಬೆಳೆ ಉಳಿಸಿಕೊಳ್ಳಲು ರೈತರು ಪರಿತಪಿಸುತ್ತಿದ್ದಾರೆ. ಕಾವೇರಿ ನೀರು ತಮಿಳುನಾಡಿಗೆ ಬಿಡುವುದರಿಂದ 8 ಜಿಲ್ಲೆಗಳಿಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಕಾವೇರಿ ನಮ್ಮದು ಎಂಬ ದಿಟ್ಟ ನಿರ್ಧಾರ ಕೈಗೊಂಡು ನೀರು ಬಿಡುವುದನ್ನು ಸ್ಥಗಿತಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಕಾವೇರಿ ನಿರ್ವಹಣಾ ಪ್ರಾಧಿಕಾರವು 18 ದಿನಗಳ ಕಾಲ 3 ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಬಿಡಲು ಸೂಚನೆ ನೀಡಿದೆ. ನಮ್ಮ ರಾಜ್ಯವು ಬರಗಾಲದ ಪರಿಸ್ಥಿತಿ ಎದುರಿಸುತ್ತಿದ್ದು, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನೀರು ಬಿಟ್ಟರೆ 2 ತಿಂಗಳಿನಲ್ಲಿ ಕಾವೇರಿ ಬರಿದಾಗುತ್ತದೆ. ಮುಂದು ಏನು ಎಂಬ ಭಯ ಕಾಡುತ್ತಿದೆ. ಕಾವೇರಿ ಜಲಾನಯನ ಪ್ರದೇಶದ ರೈತರು ಸಂಕಷ್ಟಕ್ಕೆ ಸಿಲುಕಿರುವಾಗ ಕನ್ನಡ ಚಲನಚಿತ್ರರಂಗದ ನಟ-ನಟಿಯರು, ಕಿರುತೆರೆ ರಂಗದವರು ತಮಗೆ ಸಂಬಂಧಪಟ್ಟ ವಿಷಯವೇ ಅಲ್ಲ ಎಂದು ಮೌನವಾಗಿದ್ದಾರೆ. ಹೋರಾಟಕ್ಕೆ ಇಳಿಯಬೇಕು. ಇಲ್ಲದಿದ್ದರೆ ಚಿತ್ರರಂಗದವರು ಕನ್ನಡ ವಿರೋಧಿತನ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: World Cup 2023 : ವಿಶ್ವ ಕಪ್ ತಂಡದಲ್ಲಿ ಆರ್. ಅಶ್ವಿನ್ಗೆ ಸ್ಥಾನ? ಮತ್ತೆ ಸ್ಪಿನ್ನರ್ಗಳ ಆಯ್ಕೆ ಗೊಂದಲ
ಸುದ್ದಿಗೊಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಡಾ.ದೇವನಹಳ್ಳಿ ದೇವರಾಜ, ರಾಜ್ಯ ಸಂಚಾಲಕ ಮೋಹನದಾಸ ನಾಯಕ, ಜಿಲ್ಲಾ ಸಂಚಾಲಕ ಪುರಂದರ ನಾಯ್ಕ, ಮೈಸೂರು ಜಿಲ್ಲಾ ಸಮಿತಿ ಸದಸ್ಯ ಪುಟ್ಟಸ್ವಾಮಿ, ಮಂಡ್ಯ ಜಿಲ್ಲಾ ಸಮಿತಿ ಸದಸ್ಯ ಜೋಸೆಫ್ ರಾಮು ಇದ್ದರು.