ಸಿದ್ದಾಪುರ: “ಯಾರೋ ಒಬ್ಬ ಗ್ರಾಮ ಪಂಚಾಯಿತಿ ಸದಸ್ಯ ಸೇರಿದ್ದಕ್ಕೆ ಕ್ಷೇತ್ರದಲ್ಲಿ ಜೆಡಿಎಸ್ ಬಿಜೆಪಿಯೊಂದಿಗೆ ಸಂಪೂರ್ಣ ವಿಲೀನವಾಗಿದೆ ಎಂದು ಹೇಳಿಕೆ ನೀಡಿರುವುದು ವಿಶ್ವೇಶ್ವರ ಹೆಗಡೆ ಕಾಗೇರಿಯವರ ಮಾನಸಿಕತೆಯನ್ನು ತೋರಿಸುತ್ತದೆ” ಎಂದು ಜೆಡಿಎಸ್ ಅಭ್ಯರ್ಥಿ ಉಪೇಂದ್ರ ಪೈ (Karnataka Election) ತಿರುಗೇಟು ನೀಡಿದರು.
ತಾಲೂಕಿನ ಕಿಲವಳ್ಳಿಯ ಎನ್.ಎಲ್.ಗೌಡ ಅವರ ಮನೆಯಲ್ಲಿ ಬುಧವಾರ ರಾತ್ರಿ ಮಾತನಾಡಿದ ಅವರು, “ಈ ಬಾರಿ ಕ್ಷೇತ್ರದಲ್ಲಿ ಜೆಡಿಎಸ್ ಪ್ರಚಂಡ ಬಹುಮತದೊಂದಿಗೆ ಆಯ್ಕೆಯಾಗಲಿದೆ. ನಾವು ಗೆದ್ದು, ಆರು ಬಾರಿ ಆಯ್ಕೆಯಾದ ವಿಶ್ವೇಶ್ವರ ಹೆಗಡೆ ಕಾಗೇರಿ ಯೋಗ್ಯತೆಯನ್ನು ತೋರಿಸುತ್ತೇವೆ. ಜೆಡಿಎಸ್ ಬಿಜೆಪಿಯೊಂದಿಗೆ ವಿಲೀನವಾಗಿದೆ ಎಂಬ ಅವರ ಹೇಳಿಕೆಯು ಮಾನಸಿಕತೆಯನ್ನು ತೋರಿಸುತ್ತಿದೆ. ಪಕ್ಷಾಂತರ ಮಾಡುವುದು ಸರ್ವೇ ಸಾಮಾನ್ಯ. ಬಿಜೆಪಿಯ ಜಗದೀಶ ಶೆಟ್ಟರ್, ಸವದಿ ಕಾಂಗ್ರೆಸ್ ಸೇರಿದ್ದಾರೆ. ಹಾಗಂತ ಬಿಜೆಪಿಯೇ ಕಾಂಗ್ರೆಸ್ ಜತೆಗೆ ವಿಲೀನವಾಗಿದೆಯಾ?” ಎಂದು ಪ್ರಶ್ನಿಸಿದರು.
ಇದನ್ನೂ ಓದಿ: Karnataka Election 2023: ಬಜರಂಗದಳಕ್ಕೂ ಆಂಜನೇಯನಿಗೂ ವ್ಯತ್ಯಾಸ ಇಲ್ಲವೇ: ಡಿ ಕೆ ಶಿವಕುಮಾರ್ ಪ್ರಶ್ನೆ
“ವಿಶ್ವೇಶ್ವರ ಹೆಗಡೆ ಕಾಗೇರಿ ಇನ್‌ಡೈರಕ್ಟ್ ಆಗಿ ಹೆಂಡ ಮಾರುತ್ತಾರೆ. ಕಾಗೇರಿಯವರ ಅಪಪ್ರಚಾರದಿಂದ ಜೆಡಿಎಸ್ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ತಮ್ಮ ಸಾಧನೆ ಹೇಳಿ ಮತ ಕೇಳುವುದು ಬಿಟ್ಟು ಜೆಡಿಎಸ್ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಈ ಬಾರಿ ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸುವ ಮೂಲಕ ವಿಜಯೋತ್ಸವ ಆಚರಿಸುತ್ತೇವೆ. ಜೆಡಿಎಸ್ ಪಕ್ಷವನ್ನು ವಿಲೀನಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ” ಎಂದರು.
ಹಿರಿಯರಾದ ಎನ್.ಎಲ್. ಗೌಡ ಮಾತನಾಡಿ, “ತಾಲೂಕಿನಲ್ಲಿ ಜೆಡಿಎಸ್ ಬೆಳೆಸುವಲ್ಲಿ 45 ವರ್ಷದಿಂದ ಅವಿರತ ಹೋರಾಟ ನಡೆಸಿದ್ದೇನೆ. ತಾಲೂಕಿನಲ್ಲಿ ಜೆಡಿಎಸ್ ಇದ್ದಿದ್ದರೆ ಸೋವಿನಕೊಪ್ಪ ಪಂಚಾಯಿತಿಯಲ್ಲಿ ಮಾತ್ರ. ಜೆಡಿಎಸ್ ಪಕ್ಷದ ಭದ್ರಕೋಟೆ ಸೋವಿನಕೊಪ್ಪ ಪಂಚಾಯಿತಿಯಾಗಿದೆ. ನನ್ನ ಪುತ್ರ ಮೋಹನ್ ಗೌಡ ಬಿಜೆಪಿ ಸೇರಿದ್ದು ತುಂಬಾ ನೋವಾಗಿದೆ. ಯಾವ ಆಸೆ, ಆಮಿಷಕ್ಕೆ ಒಳಗಾಗಿ ಬಿಜೆಪಿ ಸೇರಿದ್ದಾನೋ ಗೊತ್ತಿಲ್ಲ. ಜೆಡಿಎಸ್ ಬಿಜೆಪಿಯೊಂದಿಗೆ ಸಂಪೂರ್ಣ ವಿಲೀನವಾಗಿದೆ ಎಂದು ಕಾಗೇರಿಯವರು ಹತಾಶೆಯೊಂದಿಗೆ ಹೇಳಿಕೆ ನೀಡಿದ್ದಾರೆ. ಕಾಗೇರಿಯವರಿಗೆ ನಡುಕ ಹುಟ್ಟಿದ್ದರಿಂದ ಈ ರೀತಿ ಹೇಳಿಕೆ ನೀಡಿದ್ದು, ತಮ್ಮ ಹೇಳಿಕೆ ವಾಪಸ್ ಪಡೆದು ಕ್ಷಮೆ ಕೇಳಬೇಕು. ಸೋವಿನಕೊಪ್ಪ ಪಂಚಾಯಿತಿ ಅಧ್ಯಕ್ಷರು ಸೇರಿದ್ದಾರೆಯೇ ಹೊರತು ಜೆಡಿಎಸ್ ವಿಲೀನವಾಗಿಲ್ಲ. ನನ್ನ ಬೆಂಬಲ ಜೆಡಿಎಸ್ ಪಕ್ಷಕ್ಕಿದೆಯೇ ಹೊರತು ಬಿಜೆಪಿ ಹಾಗೂ ಕಾಂಗ್ರೆಸ್ಸಿಗಲ್ಲ” ಎಂದರು.
ಇದನ್ನೂ ಓದಿ: Karnataka Election: ಸೊರಬದಲ್ಲಿ ಅಣ್ಣ-ತಮ್ಮನಿಂದ ಏನೂ ಅಭಿವೃದ್ಧಿಯಾಗಿಲ್ಲ: ಎಚ್.ಡಿ. ಕುಮಾರಸ್ವಾಮಿ
ಈ ವೇಳೆ ಜೆಡಿಎಸ್ ತಾಲೂಕು ಅಧ್ಯಕ್ಷ ಸತೀಶ ಹೆಗಡೆ, ಗ್ರಾಮ ಪಂಚಾಯಿತಿ ಸದಸ್ಯೆ ಸುಮಾ ಗೌಡ, ಯುವ ಘಟಕದ ಅಧ್ಯಕ್ಷ ಹರೀಶ ಗೌಡರ್, ಪ್ರಮುಖರಾದ ಶ್ರವಣಕುಮಾರ ಹೊಸೂರ, ಕೆ.ಬಿ.ನಾಯ್ಕ, ರಾಜು ಗೊಂಡ ಮತ್ತಿತರರು ಉಪಸ್ಥಿತರಿದ್ದರು.