ಕಾರವಾರ: ವಿಧಾನಸಭಾ ಚುನಾವಣೆಗೆಂದು (Karnataka Election) ಎಲ್ಲ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದು, ಎಲ್ಲರ ಆಸ್ತಿ ವಿವರ ಹೊರಬೀಳುತ್ತಿದೆ. ಎಷ್ಟೋ ಅಭ್ಯರ್ಥಿಗಳ ಆಸ್ತಿ ಐದು ವರ್ಷಗಳಲ್ಲಿ ದುಪ್ಪಟ್ಟು, ಮೂರು ಪಟ್ಟು ಆಗಿರುವುದು ವರದಿಯಾಗಿದೆ. ಅದೇ ರೀತಿ ಕಾರವಾರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಶಾಸಕಿ ರೂಪಾಲಿ ನಾಯ್ಕ ಅವರ ಆಸ್ತಿ ಕೂಡ ಕಳೆದ ಐದು ವರ್ಷಗಳಲ್ಲಿ ದ್ವಿಗುಣಗೊಂಡಿದೆ. ಅದರೊಂದಿಗೆ ಅವರ ಸಾಲ ಕೂಡ ಎರಡು ಪಟ್ಟಾಗಿದೆ.
2018ರ ಚುನಾವಣೆಯಲ್ಲಿ ಅಫಿಡವಿಟ್ ಸಲ್ಲಿಸಿದ್ದ ರೂಪಾಲಿ ನಾಯ್ಕ, ಸ್ಥಿರಾಸ್ತಿಯಾಗಿ 1.03 ಕೋಟಿ ರೂ. ಬೆಲೆಯ ಕೃಷಿ ಮತ್ತು ವಾಸ್ತವ್ಯದ ಮನೆಯನ್ನು ಹೊಂದಿದ್ದರು. ಆದರೆ, ಈ ಬಾರಿ ಈ ಸ್ಥಿರಾಸ್ತಿ 3.50 ಕೋಟಿ ರೂ.ಗೆ ಏರಿಕೆಯಾಗಿದೆ.
ಕಳೆದ ಚುನಾವಣೆಯ ಸಮಯದಲ್ಲಿ ಕೇವಲ ಅಂಕೋಲಾದ ಹಿಲ್ಲೂರಿನಲ್ಲಿ 2 ಎಕರೆ ಕೃಷಿ ಭೂಮಿ, ಕಾರವಾರದ ದೇವಳಿವಾಡದಲ್ಲಿ ಎರಡು ವಾಸ್ತವ್ಯದ ಮನೆ ಹೊಂದಿದ್ದ ಅವರು, ಈ ಚುನಾವಣೆಯ ಸಮಯದಲ್ಲಿ ಇವುಗಳ ಜತೆಗೆ ಕಾರವಾರದ ನಗೆಕೋವೆ, ನಿವಳಿ, ಮೈಸೂರಿನ ವರುಣಾದಲ್ಲಿ ಒಟ್ಟು 32 ಎಕರೆ 36 ಗುಂಟೆ ಕೃಷಿ ಭೂಮಿ, ಒಂದು ವಾಣಿಜ್ಯ ಕಟ್ಟಡ, ದೇವಳಿವಾಡಾದಲ್ಲಿ 3 ಗುಂಟೆಯ ಕೃಷಿಯೇತರ ಜಾಗವನ್ನು ಹೊಂದಿದ್ದಾರೆ.
1,86,980 ರೂ. ನಗದು ಹೊಂದಿರುವ ಅವರು, ಯೂನಿಯನ್ ಬ್ಯಾಂಕ್‌ನಲ್ಲಿ 2.70 ಲಕ್ಷ ರೂ. ಠೇವಣಿ, ವಿವಿಧ ಬ್ಯಾಂಕ್‌ಗಳ 15 ಉಳಿತಾಯ ಖಾತೆಗಳಲ್ಲಿ 19.26 ಲಕ್ಷ ರೂ., ಮಲ್ಲಿಕಾರ್ಜುನ ಅರ್ಥವರ್ಸ್ ಹೆಸರಿನ ಎರಡು ಖಾತೆಗಳಲ್ಲಿ 3 ಲಕ್ಷ ರೂ. ಹೊಂದಿದ್ದು, 10 ಜೀವ ವಿಮೆ ಪಾಲಿಸಿಗಳಲ್ಲಿ 50 ಲಕ್ಷ ರೂ,, ಪತಿಯ ಹೆಸರಿನಲ್ಲಿ 1 ಲಕ್ಷದ ಒಂದು ಜೀವ ವಿಮೆ ಮಾಡಿಸಿದ್ದಾರೆ. 22.38 ಲಕ್ಷ ರೂ. ಮೌಲ್ಯದ 516 ಗ್ರಾಂ ಚಿನ್ನ, 1670 ಗ್ರಾಂ ಬೆಳ್ಳಿ, ಪತಿಯ ಹೆಸರಿನಲ್ಲಿ 5.60 ಲಕ್ಷ ಮೌಲ್ಯದ 140 ಗ್ರಾಂ ಚಿನ್ನ ಹೊಂದಿದ್ದಾರೆ. ಹಾಗೆಯೇ ವ್ಯಾಗನರ್, ಇನೋವಾ ಹುಂಡೈ ಎಲೆಂಟ್ರಾ ಟಾಟಾ ವೆಂಚರ್, ಟಾಟಾ ಹಿಟಾಚಿ ವಾಹನಗಳನ್ನು ಹೊಂದಿದ್ದಾರೆ. ಆದರೆ, ಪತಿಯ ಹೆಸರಿನಲ್ಲಿ ಕೇವಲ ಪಲ್ಸರ್ ಬೈಕ್ ಮಾತ್ರವಿದೆ ಎಂದು ಅವರು ಘೋಷಿಸಿಕೊಂಡಿದ್ದಾರೆ.
ಇದರೊಂದಿಗೆ ಯೂನಿಯನ್ ಬ್ಯಾಂಕ್‌ನಲ್ಲಿ 18.18 ಲಕ್ಷ, 4.86 ಲಕ್ಷ, 23.80 ಲಕ್ಷ, 7.60 ಲಕ್ಷ ಹೀಗೆ ಒಟ್ಟು 54.44 ಲಕ್ಷ ಹಾಗೂ ಕಾರವಾರದ ಸೇಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದದಲ್ಲಿ 91.44 ಲಕ್ಷ ಸಾಲ ಸೇರಿ ಒಟ್ಟು 1.45 ಕೋಟಿ ರೂ. ಸಾಲವನ್ನೂ ಮಾಡಿಕೊಂಡಿದ್ದಾರೆ. ಕಳೆದ ಚನಾವಣೆಯಲ್ಲಿ ಈ ಸಾಲ 52.67 ಲಕ್ಷ ರೂ. ಇತ್ತು.