Site icon Vistara News

Karnataka Election: ಕಾರವಾರವನ್ನು ಮಾದರಿ ಕ್ಷೇತ್ರವನ್ನಾಗಿಸುತ್ತೇನೆ: ಜೆಡಿಎಸ್‌ ಅಭ್ಯರ್ಥಿ ಚೈತ್ರಾ ಕೊಠಾರಕರ್‌

#image_title

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ಅಂಕೋಲಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಚೈತ್ರಾ ಕೊಠಾರಕರ್ ತಮ್ಮ ನಾಮಪತ್ರ (Karnataka Election) ಸಲ್ಲಿಸಿದರು.

ಕಾರವಾರ ನಗರದ ಮಾಲಾದೇವಿ ಮೈದಾನದಿಂದ ಬೆಳಗ್ಗೆ ರ‍್ಯಾಲಿ ನಡೆಸಲಾಗಿತ್ತು. ಅದರಲ್ಲಿ ಐನೂರಕ್ಕೂ ಅಧಿಕ ಮಂದಿ ಬೆಂಬಲಿಗರು ಭಾಗವಹಿಸಿದ್ದರು. ಅಲ್ಲಿಂದ ಹೊರಟ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ್ದು, ಈ ವೇಳೆ ಬೆಂಬಲಿಗರು ಜೆಡಿಎಸ್ ಪಕ್ಷ ಹಾಗೂ ಅಭ್ಯರ್ಥಿ ಪರ ಘೋಷಣೆಗಳನ್ನು ಕೂಗಿದರು.

ರ‍್ಯಾಲಿಯು ಮಾಲಾದೇವಿ ಮೈದಾನದಿಂದ ಸವಿತಾ ವೃತ್ತ, ಸುಭಾಷ್ ವೃತ್ತ ಹಾಗೂ ಶಿವಾಜಿ ಚೌಕ್ ಮಾರ್ಗವಾಗಿ ನಗರಸಭೆ ಕೇಂದ್ರದ ಬಳಿ ಆಗಮಿಸಿತು. ಈ ವೇಳೆ ಚೈತ್ರಾ ಅವರ ಪತಿ ಚಂದ್ರಹಾಸ್ ಕೊಠಾರಕರ್, ಜೆಡಿಎಸ್ ರಾಜ್ಯ ಸಂಚಾಲಕ ರೋಷನ್ ಬಾವಾಜಿ ಸೇರಿದಂತೆ ಬೆಂಬಲಿಗರ ಜತೆ ಆಗಮಿಸಿದ್ದು ಕ್ಷೇತ್ರದ ಚುನಾವಣಾಧಿಕಾರಿ ಜಯಲಕ್ಷ್ಮೀ ರಾಯಕೋಡ್ ಅವರಿಗೆ ನಾಮಪತ್ರವನ್ನು ಸಲ್ಲಿಸಿದರು.

ಇದಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅಭ್ಯರ್ಥಿ ಚೈತ್ರಾ, “ಕ್ಷೇತ್ರದಲ್ಲಿ ಎಲ್ಲ ಪಕ್ಷದ ಜನಪ್ರತಿನಿಧಿಗಳು ಯಾವ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎನ್ನುವುದನ್ನು ಜನರು ನೋಡಿದ್ದಾರೆ. ಹೀಗಾಗಿ ಅದರ ಬಗ್ಗೆ ನಾನು ಜನರಿಗೆ ತಿಳಿಹೇಳಬೇಕಾದ ಅಗತ್ಯ ಇಲ್ಲ. ಒಮ್ಮೆ ನನಗೆ ಕ್ಷೇತ್ರದಲ್ಲಿ ಅವಕಾಶ ನೀಡಿದಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡಿ ತೋರಿಸುತ್ತೇನೆ” ಎಂದು ತಿಳಿಸಿದರು.

ಇದನ್ನೂ ಓದಿ: Karnataka Election: ಕಾರವಾರ ಕಾಂಗ್ರೆಸ್‌ ಅಭ್ಯರ್ಥಿ ಸತೀಶ ಸೈಲ್‌ ಆಸ್ತಿ ಐದು ವರ್ಷಗಳಲ್ಲಿ 9.81 ಕೋಟಿ ರೂ. ಇಳಿಕೆ

“ನಾನು ಜೆಡಿಎಸ್ ಸೇರ್ಪಡೆಗೊಂಡು ಐದು ದಿನಗಳು ಮಾತ್ರ ಕಳೆದಿದ್ದು ಕಾಂಗ್ರೆಸ್‌ನಲ್ಲಿರುವ ಬೆಂಬಲಿಗರೊಂದಿಗೆ ಸಂಪರ್ಕದಲ್ಲಿದ್ದೇನೆ. ಮುಂದಿನ ದಿನಗಳಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಕಾರವಾರಕ್ಕೆ ಆಗಮಿಸಲಿದ್ದು, ಅವರ ನೇತೃತ್ವದಲ್ಲಿ ನನ್ನ ಬೆಂಬಲಿಗರು ಜೆಡಿಎಸ್ ಪಕ್ಷವನ್ನು ಸೇರಲಿದ್ದಾರೆ” ಎಂದೂ ಚೈತ್ರಾ ಅವರು ಹೇಳಿದ್ದಾರೆ.

Exit mobile version