Site icon Vistara News

Karnataka Election : ಮಂಕಾಳ ವೈದ್ಯಗೆ ಗೆಲುವು ಮಾತ್ರವಲ್ಲ ಮಂತ್ರಿಗಿರಿಯೂ ಗ್ಯಾರಂಟಿ ಎಂದ ಬಿ.ಕೆ. ಹರಿಪ್ರಸಾದ್‌

#image_title

ಭಟ್ಕಳ : ವಿಧಾನಸಭಾ ಚುನಾವಣೆ ಸನ್ನಿಹಿತವಾಗುತ್ತಿರುವಂತೆಯೇ ಎಲ್ಲೆಡೆ ಪ್ರಚಾರವೂ ಜೋರಾಗಿಯೇ ನಡೆಯುತ್ತಿದೆ. ಎಲ್ಲ ಪಕ್ಷಗಳು ತಮ್ಮ ಗೆಲುವು ಗ್ಯಾರಂಟಿ ಎನ್ನುತ್ತಿದ್ದರೆ, ಕಾಂಗ್ರೆಸ್‌ ನಾಯಕ ಬಿ.ಕೆ. ಹರಿಪ್ರಸಾದ್‌ ಅವರು ಈಗಾಗಲೇ ಸಚಿವರಾಗುವವರ ಬಗ್ಗೆಯೂ ಭವಿಷ್ಯ ನುಡಿದಿದ್ದಾರೆ. ಭಟ್ಕಳದ ಕಾಂಗ್ರೆಸ್‌ ಅಭ್ಯರ್ಥಿ ಮಂಕಾಳ ವೈದ್ಯ ಅವರು ರಾಜ್ಯ ಸರ್ಕಾರದ ಮಂತ್ರಿಯಾಗಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಬುಧವಾರ ರಾತ್ರಿ ಮುರುಡೇಶ್ವರದ ಬೀನಾ ವೈದ್ಯ ಇಂಟರ್‌ನ್ಯಾಶನಲ್‌ ಪಬ್ಲಿಕ್‌ ಸ್ಕೂಲ್‌ ಮೈದಾನದಲ್ಲಿ ನಾಮಧಾರಿ ಸಮಾಜ ಬಾಂಧವರಿಗಾಗಿ ಏರ್ಪಡಿಸಿದ್ದ ಚುನಾವಣಾ ಪ್ರಚಾರದ ಬೃಹತ್ ಬಹಿರಂಗ ಸಭೆಯಲ್ಲಿ ಭಾಗವಹಿಸಿದ ವಿಧಾನಪರಿಷತ್ ವಿರೋಧಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಈ ಮಾತುಗಳನ್ನಾಡಿದ್ದಾರೆ.

“ಮಂಕಾಳ ವೈದ್ಯ ವಿರುದ್ಧ ಯಾರೇ ಏನೇ ಅಪಪ್ರಚಾರ ಮಾಡಿದರೂ ಕಿವಿಗೊಡದೆ ಅವರನ್ನು ಈ ಬಾರಿ ವಿಧಾನಸಭೆಗೆ ಆಯ್ಕೆ ಮಾಡಬೇಕು. ಬಿಜೆಪಿಯವರಿಗೆ ಅಪಪ್ರಚಾರ, ತೇಜೋವಧೆ ಮಾಡೋದೆ ಕೆಲಸ. ದುರ್ಬಲ ವರ್ಗದವರನ್ನು ತುಳಿದು ರಾಜಕೀಯ ಮಾಡುವಂತಹದ್ದು ಬಿಜೆಪಿಯ ಕರ್ಮವಾಗಿದೆ. 75 ವರ್ಷಗಳ ಕಾಲ ನಾವು ಯಾವುದೇ ಬೇಧಭಾವ ಇಲ್ಲದೆ ಅಣ್ಣ ತಮ್ಮಂದಿರಂತೆ ಬದುಕಿ ಬಾಳಿದ್ದೇವೆ. ನಿಮಗೆ ಆ ಸಿದ್ಧಾಂತ ಬೇಕೆ ಅಥವಾ ಕೊಲೆಗಳನ್ನು ಮಾಡಿ ರಾಜಕೀಯ ಮಾಡುವ ಬಿಜೆಪಿ ಸಿದ್ಧಾಂತ ಬೇಕೆ? ಈಗ ನೀವು ಯಾವುದನ್ನು ಆಯ್ಕೆ ಮಾಡುತ್ತೀರಿ? ಹಿಂದುತ್ವಕ್ಕೂ ಹಿಂದೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಹಿಂದೂ ಧರ್ಮವನ್ನು ಪಾಲನೆ ಮಾಡುತ್ತಿದ್ದ ಮಹಾತ್ಮಗಾಂಧಿ, ವಿವೇಕಾನಂದ, ಗುರುನಾನಕ ಮುಂತಾದವರು ಹಿಂದೂ ಧರ್ಮದ ಪರಿಪಾಲಕರು. ಬಿಜೆಪಿ ಪಕ್ಷದಲ್ಲಿ ಯಾವ ರೀತಿಯ ದೌರ್ಜನ್ಯ ದಬ್ಬಾಳಿಕೆ ನಡೆಯುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತು” ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿದರು.

ಇದನ್ನೂ ಓದಿ: Karnataka Election 2023: ಶೆಟ್ಟರ್ ಸೋಲಿಸಲು ಬಿಜೆಪಿ ತಂತ್ರ; ಕೇಸರಿ ಪಕ್ಷದ ಪಾಲಾದ ಸ್ಥಳೀಯ ಕೈ ನಾಯಕರು

ನಾಮಧಾರಿ ಸಮಾಜದ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಎಲ್.ಎಸ್.ನಾಯ್ಕ ಮಾತನಾಡಿ, “ಮಂಕಾಳ ವೈದ್ಯ ಅವರು ನಮ್ಮ ನಾಮಧಾರಿ ಸಮಾಜಕ್ಕೆ ಅನೇಕ ಕೊಡುಗೆ ನೀಡಿದ್ದಾರೆ. ಅನೇಕರು ಕಷ್ಟದಲ್ಲಿದ್ದಾಗ ಬೆಂಬಲಿಸಿ ಅವರ ಕಣ್ಣೀರು ಒರೆಸುವಂತ ಕೆಲಸ ಮಾಡಿದ್ದಾರೆ. ಇಂತಹ ಸಹಾಯ ಮಾಡಿದ ವ್ಯಕ್ತಿಯನ್ನು ನಾವೆಂದೂ ಕೈ ಬಿಡುವುದಿಲ್ಲ. ನಾವೆಲ್ಲರೂ ಅವರ ಬೆನ್ನಿಗಿದ್ದೇವೆ ಅವರನ್ನು ಬೆಂಬಲಿಸುತ್ತೇವೆ. ಎಲ್ಲರೂ ಕೂಡ ಮಾಂಕಾಳ ವೈದ್ಯರಿಗೆ ಮತ ನೀಡುವ ಮೂಲಕ ಅವರನ್ನು ಆರಿಸಿ ತಂದು ಇನ್ನಷ್ಟು ಬಡ ಜನರ ಕಷ್ಟ ನೀಗಿಸುವ ಶಕ್ತಿಯನ್ನು ಅವರಿಗೆ ನೀಡಬೇಕು” ಎಂದು ಸಮಾಜ ಬಾಂಧವರಲ್ಲಿ ಮನವಿ ಮಾಡಿದರು.

ಹೊನ್ನಾವರ ನಾಮಧಾರಿ ಸಮಾಜ ಅಧ್ಯಕ್ಷ ಮಂಜುನಾಥ ನಾಯ್ಕ ಮಾತನಾಡಿ, “ಮಂಕಾಳ ವೈದ್ಯ ಅಧಿಕಾರಕ್ಕೆ ಬಂದರೆ ನಾಮಧಾರಿ ಸಮಾಜವನ್ನು ತುಳಿಯುತ್ತಾರೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಮಾಂಕಾಳ ವೈದ್ಯ ಯಾವತ್ತೂ ನಮ್ಮ ಸಮಾಜವನ್ನು ತುಳಿದಿಲ್ಲ, ತುಳಿಯುವುದೂ ಇಲ್ಲ. ಆದರೆ ಈಗ ಸತತ ಐದು ವರ್ಷದಿಂದ ನಮ್ಮ ಸಮಾಜದ ಶಾಸಕರೇ ಸಮಾಜವನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ” ಎಂದು ಉದಾಹರಣೆ ಸಮೇತ ವಿವರಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕ ಮಂಕಾಳ ವೈದ್ಯ ಮಾತನಾಡಿ, “ಬಿಜೆಪಿ ಸರ್ಕಾರ ಜಿಎಸ್ಟಿ ಹೇರಿದ ಪರಿಣಾಮ ಇಂದು ಬಡವರು, ರೈತರು ಸಂಕಷ್ಟದಲ್ಲಿದ್ದಾರೆ. ಪೆಟ್ರೋಲ್ ದರ ಗಗನಕ್ಕೇರಿದೆ. ಸಿದ್ಧರಾಮಯ್ಯನವರು 10ಕೆಜಿ ಅಕ್ಕಿ ನೀಡಿದ್ದರು. ಜೀವನಕ್ಕೆ ಬೇಕಾದ ಎಲ್ಲ ವಸ್ತುಗಳನ್ನು ಕೊಟ್ಟರು. ಆದರೆ ಇವರೇನು ಕೊಟ್ಟಿದ್ದಾರೆ ಎಲ್ಲವನ್ನೂ ಕಿತ್ತುಕೊಂಡರು” ಎಂದು ಬಿಜೆಪಿ ಸರ್ಕಾರದ ವಿರುದ್ಧ ಮಂಕಾಳ್ ವೈದ್ಯ ಹರಿಹಾಯ್ದರು.

“ನಮ್ಮ ಸರ್ಕಾರ ಪುನಃ ಬರುತ್ತದೆ. ನಿಮಗೆ ಹತ್ತು ಕೆಜಿ ಅಕ್ಕಿ ಕೊಡುತ್ತದೆ. ಇದು ಗ್ಯಾರಂಟಿ ಕಾರ್ಡ್. ಇದರ ಮೇಲೆ ಸಹಿ ಕೂಡ ಹಾಕಿದ್ದಾರೆ ಎಂದರು. ನಾನು ಯಾವ ಸಮಾಜವನ್ನೂ ತುಳಿಯುವಂತಹ ಕೆಲಸ ಮಾಡಿಲ್ಲ, ಮಾಡೋದು ಇಲ್ಲ. ಆದರೆ ತುಳಿತಕ್ಕೊಳಗಾದವರನ್ನು ಮೇಲೆತ್ತುವ ಕೆಲಸ ಮಾಡಿದ್ದೇನೆ. ಅಸಹಾಯಕರಿಗೆ, ಬಡವರಿಗೆ ನನ್ನ ಕೈಲಾದ ಸಹಾಯ ಮಾಡುತ್ತಾ ಬಂದಿದ್ದೇನೆ. ಮುಂದೆಯೂ ಮಾಡುತ್ತೇನೆ. ಎಲ್ಲಾ ಬಂಧುಗಳು ಆಶೀರ್ವಾದ ರೂಪದಲ್ಲಿ ತಮ್ಮ ಮತವನ್ನು ನೀಡಿ ನನ್ನನ್ನು ಗೆಲ್ಲಿಸಬೇಕು” ಎಂದು ಕೇಳಿಕೊಂಡರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮಂಜುನಾಥ ನಾಯ್ಕ, ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ನಾಯ್ಕ ಸೇರಿದಂತೆ ವಿವಿದ ಬ್ಲಾಕ್ ಅಧ್ಯಕ್ಷರು, ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೂರು ಸಾವಿರಕ್ಕೂ ಅಧಿಕ ನಾಮಧಾರಿ ಸಮಾಜ ಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Exit mobile version