Site icon Vistara News

Karnataka Election : ಮಗನ ಪರ ಪ್ರಚಾರಕ್ಕೆ ಇಳಿದ ಕೈ ನಾಯಕಿ ಮಾರ್ಗರೆಟ್‌ ಆಳ್ವಾ; ಮೀನು ಮಾರುವ ಮಹಿಳೆಯರ ಜತೆ ಮಾತು

#image_title

ಕುಮಟಾ: ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಕಾಂಗ್ರೆಸ್‌ ಅಭ್ಯರ್ಥಿ ನಿವೇದಿತ್ ಆಳ್ವಾ ಪರ ಪ್ರಚಾರದ ಅಖಾಡಕ್ಕೆ ಅವರ ತಾಯಿ ಮಾರ್ಗರೆಟ್ ಆಳ್ವಾ ಇಳಿದಿದ್ದು, ಪಟ್ಟಣದ ಮೀನು ಮಾರುಕಟ್ಟೆಗೆ ತೆರಳಿ ಮಗನ ಪರ ಪ್ರಚಾರ (Karnataka Election) ನಡೆಸಿದರು.

ಕಾಂಗ್ರೆಸ್‌ ನಾಯಕಿ, ಮಾಜಿ ರಾಜ್ಯಪಾಲೆ ಮತ್ತು ಇತ್ತೀಚೆಗೆ ಉಪರಾಷ್ಟ್ರಪತಿ ಚುನಾವಣೆಯಲ್ಲೂ ಸ್ಪರ್ಧಿಸಿದ್ದ ಮಾರ್ಗರೆಟ್‌ ಆಳ್ವ ಅವರ ಪುತ್ರ ನಿವೇದಿತ್‌ ಆಳ್ವ ಅವರು ಬಹುಕಾಲದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಯತ್ನ ನಡೆಸುತ್ತಿದ್ದರು. ಅಮ್ಮನ ಚರಿಷ್ಮಾ, ಸೋನಿಯಾ ಗಾಂಧಿ ಕುಟುಂಬದ ಜತೆ ಉತ್ತಮ ಸಂಬಂಧವಿದ್ದರೂ ನಾನಾ ಕಾರಣಗಳಿಗಾಗಿ ಅವರಿಗೆ ಟಿಕೆಟ್‌ ಸಿಕ್ಕಿರಲೇ ಇಲ್ಲ. ಈ ಬಾರಿ ಅವರು ಮೊದಲ ಬಾರಿ ಕುಮಟಾ ಕ್ಷೇತ್ರದಿಂದ ಕಣಕ್ಕೆ ಇಳಿಸಲು ಅವಕಾಶ ಒದಗಿಬಂದಿದೆ. ಹೀಗಾಗಿ ಶತಾಯಗತಾಯ ಮಗನನ್ನು ಗೆಲ್ಲಿಸಲೇಬೇಕು ಎಂದು ಮಾರ್ಗರೆಟ್ ಆಳ್ವಾ ಪ್ರಯತ್ನಕ್ಕೆ ಇಳಿದಿದ್ದು ಆನಾರೋಗ್ಯದ ನಡುವೆ ಕ್ಷೇತ್ರದಲ್ಲಿ ಹಲವೆಡೆ ಭೇಟಿ ನೀಡಿ ಪ್ರಚಾರ ನಡೆಸುತ್ತಿದ್ದಾರೆ. ಶುಕ್ರವಾರ ಸಹ ತಮ್ಮ ಪ್ರಚಾರವನ್ನ ಮುಂದುವರೆಸಿದ್ದು ಜನರನ್ನ ಕಾಂಗ್ರೆಸ್ ಪಕ್ಷದತ್ತ ಸೆಳೆಯುವ ಕಾರ್ಯಕ್ಕೆ ಮಾರ್ಗರೇಟ್ ಆಳ್ವಾ ಮುಂದಾದರು.

ಪಟ್ಟಣದ ಮೀನು ಮಾರುಕಟ್ಟೆಗೆ ತೆರಳಿ ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಎಲ್ಲ ಮಹಿಳೆಯರನ್ನ ಮಾತನಾಡಿಸಿ ಮೀನುಗಾರ ಮಹಿಳೆಯರ ಸಮಸ್ಯೆಯನ್ನ ಮಾರ್ಗರೇಟ್ ಅಳ್ವಾ ಅಲಿಸಿದ್ದಾರೆ. ಅಲ್ಲದೇ ಮೀನುಗಾರ ಕುಟುಂಬಗಳು ಸದ್ಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಹ ಮಾಹಿತಿಯನ್ನು ಕಲೆ ಹಾಕಿದರು. ಬಳಿಕ ಸ್ವತಃ ತಾವೇ ಮೀನನ್ನು ಖರೀದಿಸುವ ಮೂಲಕ ಸರಳತೆ ಪ್ರದರ್ಶಿಸಿದರು.

ಇದನ್ನೂ ಓದಿ: Karnataka election 2023: ಸಂವಿಧಾನದ ಉಳಿವಿಗಾಗಿ ಬಿಜೆಪಿಯನ್ನು ಸೋಲಿಸಬೇಕು: ಸಿಪಿಐ ಕಾರ್ಯದರ್ಶಿ ಸಾಥಿ ಸುಂದರೇಶ್

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಜಿಲ್ಲೆಯಲ್ಲಿ ಸಂಸದೆಯಾದಾಗಿನಿಂದಲೂ ಮೀನುಗಾರರ ಪರ ಧ್ವನಿ ಎತ್ತುತ್ತಿದ್ದೇನೆ. ಮೀನುಗಾರರ ಯಾವುದೇ ಸಮಸ್ಯೆಗೂ ತಾನು ಸ್ಪಂದಿಸುತ್ತಾ ಬಂದಿದ್ದು ತನ್ನ ಪ್ರತಿ ಚುನಾವಣೆಯಲ್ಲಿ ಮೀನುಗಾರರೇ ಹೆಚ್ಚಾಗಿ ಬೆಂಬಲಿಸುತ್ತಾ ಬಂದಿದ್ದರು. ಈಗ ಕುಮಟಾ ಕ್ಷೇತ್ರದಲ್ಲಿ ತನ್ನ ಮಗ ನಿವೇದಿತ್ ಆಳ್ವಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ಮೀನುಗಾರರು ನೆಮ್ಮದಿಯಿಂದ ಜೀವನ ಮಾಡಲು ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಮಗನನ್ನ ಗೆಲ್ಲಿಸಿ. ನನ್ನ ಮಗನನ್ನ ನಿಮ್ಮ ಮಗ ಎಂದು ಗೆಲ್ಲಿಸಿದರೆ ಸದಾಕಾಲ ನಿಮ್ಮ ಸೇವೆಯನ್ನು ಮಾಡುತ್ತಾನೆ” ಎಂದು ಮನವಿ ಮಾಡಿಕೊಂಡರು.

“ನನ್ನ ಮಗ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾದಾಗ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ ತಾಲೂಕಿನ ಅವರ್ಸಾ ಸೇರಿ ಹಲವೆಡೆ ಮಹಿಳೆಯರು ಕುಳಿತು ಉತ್ತಮ ರೀತಿಯಲ್ಲಿ ವ್ಯಾಪಾರ ವ್ಯವಹಾರ ಮಾಡಲು ಸುಸಜ್ಜಿತ ಮೀನು ಮಾರುಕಟ್ಟೆ ಹಲವೆಡೆ ಮಾಡಿಸಿದ್ದನು. ಸಿಕ್ಕ ಸಣ್ಣ ಅವಕಾಶದಲ್ಲಿಯೇ ಮೀನುಗಾರರ ಪರ ಕೆಲಸ ಮಾಡಿದ್ದು ಕುಮಟಾ ಕ್ಷೇತ್ರದಿಂದ ಶಾಸಕನಾಗಿ ಮಾಡಿದರೆ ಇನ್ನೂ ಹೆಚ್ಚಿನ ಕೆಲಸ ಮಾಡುತ್ತಾನೆ” ಎಂದು ಮಾರ್ಗರೆಟ್ ಆಳ್ವಾ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಮೀನುಗಾರ ಮುಖಂಡರಾದ ಗಣಪತಿ ಮಾಂಗ್ರೆ, ಜಗದೀಶ್ ಹರಿಕಾಂತ್, ನಾಗಪ್ಪ ಹರಿಕಾಂತ್, ಭುವನ್ ಭಾಗ್ವತ್, ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಸತೀಶ್ ನಾಯ್, ರಾಘು ಜಾದವ್ ಸೇರಿ ಹಲವರು ಉಪಸ್ಥಿತರಿದ್ದರು.

Exit mobile version