ಶಿರಸಿ: ವಿಧಾನಸಭಾ ಚುನಾವಣೆ (Karnataka Election) ಹಿನ್ನೆಲೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಆದರೆ, ಯಲ್ಲಾಪುರ-ಮುಂಡಗೋಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಪ್ರಚಾರಕ್ಕೆಂದು ತೆರಳಿದ್ದ ವೇಳೆ ಮುಜಗರಕ್ಕೊಳಗಾದ ಘಟನೆ ತಾಲೂಕಿನ ಪೂರ್ವ ಭಾಗ ಗುಡ್ನಾಪುರ ಗ್ರಾಮದಲ್ಲಿ ನಡೆದಿದೆ.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಮತಯಾಚನೆಗಾಗಿ ಶಿರಸಿ ತಾಲೂಕಿನ ಪೂರ್ವ ಭಾಗ ಗುಡ್ನಾಪುರ ಗ್ರಾಮಕ್ಕೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಮತಯಾಚನೆಗೆ ಮುಂದಾದಾಗ ಅವರನ್ನು ತಡೆದ ಗ್ರಾಮಸ್ಥರು “ಗ್ರಾಮದ ಕೆರೆ ಹೂಳೆತ್ತುವ ಕಾರ್ಯಕ್ಕೆ ಬಿಜೆಪಿ ಪಕ್ಷದ ಕೆಲವರು ಅಡ್ಡಿ ಮಾಡಿದ್ದರು. ಈ ವಿಚಾರವನ್ನ ನಿಮ್ಮ ಗಮನಕ್ಕೆ ಗ್ರಾಮಸ್ಥರು ತಂದಿದ್ದೆವು. ಆದರೆ ನಿಮಗೆ ಕರೆ ಮಾಡಿದರೆ ನಿಮ್ಮವರೇ ಸಂಬಂಧಪಟ್ಟ ಅಧಿಕಾರಿಗಳಿಗೆ ಚಾಡಿ ಹೇಳಿ ಹೂಳೆತ್ತಲು ಬಿಡಲಿಲ್ಲ. ನಾವು ಎಲ್ಲರೂ ರೈತರ ಮಕ್ಕಳೇ. ಕೃಷಿ ಚಟುವಟಿಕೆಗೆ ಅಡ್ಡಿಪಡಿಸುವುದು ಯಾವ ನ್ಯಾಯ?” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಇನ್ನೋರ್ವ ಗ್ರಾಮಸ್ಥ ಮಾತನಾಡಿ, “ಕ್ಷೇತ್ರದ ಅಭಿವೃದ್ದಿ ಜೊತೆಗೆ ನಮ್ಮ ವೈಯಕ್ತಿಕ ಬದುಕಿಗೆ ನೀವು ಆಸರೆಯಾಗುವ ನಿರೀಕ್ಷೆ ಹೊಂದಿದ್ದೆವು. ನನ್ನ ಮಗ ಬೆಂಗಳೂರಿನಲ್ಲಿ ಸೆಕ್ಷನ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಆತನ ವರ್ಗಾವಣೆ ಬೆಂಗಳೂರಿನಿಂದ ಜಿಲ್ಲೆಗೆ ಆಗಿತ್ತು. ನೀವು ಒಂದು ಸಹಿ ಹಾಕಿದ್ದರೆ ಆತ ನಮ್ಮಲ್ಲಿಗೆ ಬರುತ್ತಿದ್ದ. ಆದರೆ ನೀವು ಅದನ್ನ ಕಡೆಗಣಿಸಿದ್ದು ನ್ಯಾಯಾನ?” ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ: Karnataka Election: ಚುನಾವಣಾ ಕಣಕ್ಕೆ ಮತ್ತೆ ಉರಿಗೌಡ, ನಂಜೇಗೌಡ ಎಂಟ್ರಿ; ರಾಜಕೀಯಕ್ಕೆ ಎಳೆದು ತಂದ ರಾಜನಾಥ್ ಸಿಂಗ್
“ಕೇಂದ್ರದಿಂದ ಒಪ್ಪಿಗೆ ಪತ್ರ ಕೂಡ ಬಂದಿತ್ತು. ಆದರೆ, ನೀವು ಒಂದು ಸಹಿ ಹಾಕಲಿಲ್ಲ. ಅಭಿವೃದ್ಧಿ ಹೆಸರಲ್ಲಿ ಸುಳ್ಳು ಹೇಳಿದ್ದೀರಿ. ನಮ್ಮ ಕಷ್ಟಕ್ಕೆ ಸ್ಪಂದಿಸಿಲ್ಲ” ಎಂದು ದೂರಿದ್ದಾರೆ. ಗ್ರಾಮಸ್ಥರು ಹೆಬ್ಬಾರ್ ಅವರನ್ನು ಬಿಸಿಲಲ್ಲೇ ನಿಲ್ಲಿಸಿ ತರಾಟೆಗೆ ತೆಗೆದುಕೊಂಡಿದ್ದು, ಪ್ರಚಾರ ಸಭೆಯನ್ನು ಮೊಟಕುಗೊಳಿಸಿ ಶಿವರಾಮ್ ಹೆಬ್ಬಾರ್ ಹೊರ ನಡೆದಿದ್ದಾರೆ.